Home ಸುದ್ದಿ ಚಾಯಿಪೇ ಚರ್ಚನಾ? ಬಾಲಣ್ಣನ ಹೊಟೇಲ್ ತಿಂಡಿ ಮೇಲಿನ ಪ್ರೇಮನಾ! ಸಾಯಿನಗರದಲ್ಲಿ ನಾಯಕರ ಜುಗಲ್‌ಬಂದಿ.
ಸುದ್ದಿ

ಚಾಯಿಪೇ ಚರ್ಚನಾ? ಬಾಲಣ್ಣನ ಹೊಟೇಲ್ ತಿಂಡಿ ಮೇಲಿನ ಪ್ರೇಮನಾ! ಸಾಯಿನಗರದಲ್ಲಿ ನಾಯಕರ ಜುಗಲ್‌ಬಂದಿ.

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ:ಸಾಯಿನಗರದ ರಸ್ತೆಯಲ್ಲಿ ಬೆಳಗ್ಗೆಯ ತಂಗಾಳಿ ಬೀಸುತ್ತಿದ್ದಂತೆ, ಎಂದಿನಂತೆ ಶ್ರೀ ವೆಂಕಟೇಶ್ವರ ಹೋಟೆಲ್ ಮಾಲಿಕ ಬಾಲಣ್ಣ (ಬಾಲರೆಡ್ಡಿ) ಹೊಟೇಲಿನಿಂದ ಘಮಘಮಿಸುವ ಕಾಫಿ-ಟೀಯ ಸುವಾಸನೆ ಹರಡುತ್ತಿತ್ತು. ಆದರೆ, ಇವತ್ತಿನ ವಿಶೇಷ ಆ ಘಮಲು ಮಾತ್ರವಲ್ಲ; ಹೊಟೇಲ್ ಎದುರು ಸಾಲುಗಟ್ಟಿ ನಿಂತ ಮುಖಂಡರ ದಂಡು! ಬಿಜೆಪಿಯ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೇಗೌಡ್ರು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಯುವ ಮುಖಂಡ ನವೀನ್ ಪಾಟೀಲ್, ಚಂದ್ರು ಸಚಿನ್, ಸಾಯಿ ನಗರದ ಮುಖಂಡರಾದ ಹೇಮಣ್ಣ, ಹುಲೇಶ್, ಅಣ್ಣಪ್ಪ, ಮಹದೇವಪ್ಪ, ಲಿಂಗಜ್ಜ ಮತ್ತು ಗನ್ ಮ್ಯಾನ್ ಮಲ್ಲಿಕಾರ್ಜುನ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲರೂ ಒಟ್ಟಿಗೆ ಬಾಲಣ್ಣನ ಹೊಟೇಲ್ ಅಂಗಳದಲ್ಲಿ ಹಾಜರಾಗಿದ್ದರು.

ಆನೆಗುಂದಿ ಭಾಗಕ್ಕೆ ಕಾಲಿಟ್ಟರೆ ಸಾಕು, ಬಾಲಣ್ಣನ ಹೊಟೇಲಿನಲ್ಲಿ ಬಿಸಿಬಿಸಿ ಇಡ್ಲಿ-ವಡೆ ಮೆದ್ದು, ಒಂದು ಕಪ್ ಸ್ಟ್ರಾಂಗ್ ಟೀ ಹೀರದೆ ಯಾರ ಹೆಜ್ಜೆಯೂ ಮುಂದೆ ಹೋಗುವುದಿಲ್ಲ. ಮುಖಂಡರಿಗೂ ಅದೇ ವಾಡಿಕೆ. ಆದರೆ, ಅಷ್ಟೂ ನಾಯಕರು ಲೋಕಾಭಿರಾಮವಾಗಿ ಒಂದೇ ಕಡೆ ಜಮಾಯಿಸಿದ್ದು ಮಾತ್ರ ಅಲ್ಲಿದ್ದ ಸಾಮಾನ್ಯ ಗ್ರಾಹಕರ ಹುಬ್ಬೇರುವಂತೆ ಮಾಡಿತ್ತು. ‘ಏನಪ್ಪಾ ಇದು, ಎಲೆಕ್ಷನ್ ಇನ್ನು ದೂರ ಇದೆ, ಆದರೆ ಇಷ್ಟೊಂದು ಜನ ದೊಡ್ಡ ಲೀಡರ್‌ಗಳು ಒಂದೇ ಕಡೆ ಸೇರಿದ್ದಾರೆ? ಯಾವುದಾದರೂ ರಹಸ್ಯ ಸಭೆನಾ?’ ಎಂದು ಹೊಟೇಲ್‌ನಲ್ಲಿದ್ದ ಜನ ಪರಸ್ಪರ ಮುಖ ನೋಡಿಕೊಳ್ಳುತ್ತಾ ಮೆಲ್ಲಗೆ ಪಿಸುಗುಟ್ಟಲಾರಂಭಿಸಿದರು.

ತಟ್ಟೆಯಲ್ಲಿದ್ದ ಗರಿಗರಿ ದೋಸೆ ಮತ್ತು ಒಗ್ಗರಣೆ ಮಿರ್ಚಿ ತಣ್ಣಗಾಗುತ್ತಿದ್ದರೂ ಜನರ ದೃಷ್ಟಿ ಮಾತ್ರ ನಾಯಕರ ಟೇಬಲ್ ಮೇಲೆಯೇ ಇತ್ತು. ಒಬ್ಬೊಬ್ಬರ ಬಾಯಲ್ಲೂ ಒಂದೊಂದು ಕಲ್ಪನೆ: “ಇದು ಮುಂದಿನ ಚುನಾವಣೆಯ ಲೆಕ್ಕಾಚಾರದ ಪ್ರಾಕ್ಟೀಸಾ? ಇಲ್ಲಾ ಪ್ರಧಾನಿ ಮೋದಿಯವರ ‘ಚಾಯ್ ಪೇ ಚರ್ಚಾ’ಗೆ ಸಾಯಿನಗರದಲ್ಲಿ ಅಡಿಪಾಯ ಹಾಕ್ತಿದ್ದಾರಾ?” ಹೀಗೆ ಹೊಟೇಲ್ ಮೂಲೆಯಲ್ಲಿದ್ದ ಕಸ್ಟಮರ್‌ಗಳು ಪಕ್ಕದ ಟೇಬಲ್‌ನಲ್ಲೇ ಕೂತು ರಾಜಕೀಯ ಪಡಸಾಲೆಯನ್ನೇ ತೆರೆದುಬಿಟ್ಟರು. ಜನಸಾಮಾನ್ಯರ ಕುತೂಹಲ ಹದ್ದು ಮೀರಿದಾಗ, ಕೆಲವರಂತೂ ನೇರವಾಗಿ ಬಾಲಣ್ಣನ ಕೌಂಟರ್ ಕಡೆಗೆ ಹೆಜ್ಜೆ ಹಾಕಿದರು.

“ಏನ್ ಬಾಲಣ್ಣ ಅವರೇ, ಇಡೀ ಪಕ್ಷದ ಮುಖಂಡರೇ ನಿಮ್ಮ ಹೊಟೇಲ್ ಮುಂದೆ ಬೀಡುಬಿಟ್ಟಿದೆ, ಏನಾದ್ರೂ ವಿಶೇಷ ಒಳಮರ್ಮ ಇದೆಯಾ? ನಮಗೂ ಸ್ವಲ್ಪ ಸುಳಿವು ಕೊಡಿ!” ಎಂದು ಗಿರಾಕಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಅವರ ಮುಖದಲ್ಲಿದ್ದ ತೀವ್ರ ಕುತೂಹಲ ನೋಡಿ ಬಾಲಣ್ಣನಿಗೆ ನಗು ತಡೆಯಲಾಗಲಿಲ್ಲ.

ಕೌಂಟರ್‌ನಿಂದ ಮುಗುಳ್ನಗುತ್ತಲೇ ಉತ್ತರಿಸಿದ ಬಾಲಣ್ಣ, “ಅಯ್ಯೋ, ಇದರಲ್ಲಿ ಯಾವ ರಾಜಕೀಯ ಗಿಮಿಕ್ಕೂ ಇಲ್ಲ, ಒಳಮರ್ಮವೂ ಇಲ್ಲ ಕಣ್ರೀ! ಕೆಲವರು ನಮ್ಮ ಊರಿನ ಹಿರಿಯರು, ಕೆಲವರು ನಮ್ಮ ಪ್ರೀತಿಯ ಕಿರಿಯ ಸೋದರರು ಮತ್ತು ಆತ್ಮೀಯ ಸ್ನೇಹಿತರು. ಆನೆಗುಂದಿ ಕಡೆ ಬಂದಾಗ ನಮ್ಮ ಕೈ ರುಚಿಯ ಟೀ-ತಿಂಡಿ ನೆನಪಾಗಿ ಆಗಾಗ ಬಂದು ಹೋಗ್ತಿರ್ತಾರೆ ಅಷ್ಟೇ,” ಎಂದು ನಗುಮುಖದಿಂದಲೇ ಚರ್ಚೆಯ ಬೆಂಕಿಗೆ ತಣ್ಣೀರೆರಚಿದರು. ಆ ಮಾತಿನೊಂದಿಗೆ ನೆರೆದಿದ್ದ ಗ್ರಾಹಕರ ಮುಖದಲ್ಲೂ ಮುಗುಳ್ನಗೆ ಅರಳಿ, ರಾಜಕೀಯ ಬಿಸಿ ಕ್ಷಣಾರ್ಧದಲ್ಲಿ ಬಾಲಣ್ಣನ ಟೀ ಕಪ್ಪಿನ ಸಿಹಿಯಲ್ಲಿ ಕರಗಿಹೋಯಿತು.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...