
ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ ‘ಹಾಜಿ ಮಸ್ತಾನ್’ ಎಂಬ ಬ್ರಾಂಡ್ ಡಾನ್ನದ ರೋಚಕ ಕಥೆ
ಮುಂಬೈ / ಮರ್ಚೇಡ್ ಡೇಸ್ ವಿಶೇಷ ಲೇಖನ:
ಇತಿಹಾಸವನ್ನು ಯಾರೋ ಬರೆದು ನಿರ್ದೇಶಿಸಲು ಸಾಧ್ಯವಿಲ್ಲ; ಕೆಲವರು ಹುಟ್ಟಿದ ಮೇಲೆಯೇ ಇತಿಹಾಸ ಸೃಷ್ಟಿಯಾಗುತ್ತದೆ. ಅಂತಹ ಅಪರೂಪದ ಇತಿಹಾಸ ಸೃಷ್ಟಿಸಿದವನು ಮಾಯಾನಗರಿ ಮುಂಬೈನ ಮೊದಲ ಮತ್ತು ಅಜೇಯ ಅಧಿಪತಿ ಹಾಜಿ ಮಸ್ತಾನ್ ಮಿರ್ಜಾ. ‘ಡಾನ್’ ಎಂಬ ಪದಕ್ಕೆ ನಿಜವಾದ ಅರ್ಥ ಮತ್ತು ಗತ್ತು ತಂದುಕೊಟ್ಟ ಏಕೈಕ ವ್ಯಕ್ತಿ ಇವನು. ಬೀದಿಯಲ್ಲಿ ಕತ್ತಿ-ಕುಡುಗೋಲು ಹಿಡಿದು ರೌಡಿಯಾಗದೆ, ಒಂದೇ ಒಂದು ಕೊಲೆ ಮಾಡದೆ, ಕೈಯಲ್ಲಿ ಬಂದೂಕು-ಬಾಂಬ್ ಮುಟ್ಟದೆ ಕೇವಲ ಬುದ್ಧಿವಂತಿಕೆ, ಹಣ ಮತ್ತು ರಾಜತಾಂತ್ರಿಕತೆಯಿಂದ ಇಡೀ ಮುಂಬೈ ಸಾಮ್ರಾಜ್ಯವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಏಕಚಕ್ರಾಧಿಪತಿಯ ರೋಚಕ ಜೀವನಗಾಥೆ ಇದು.
1926ರ ಮಾರ್ಚ್ 1ರಂದು ತಮಿಳುನಾಡಿನ ಕಡಲೂರು ಬಳಿಯ ಪನ್ನೈಕುಲಂ ಎಂಬ ಸಣ್ಣ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದ ಮಸ್ತಾನ್ಗೆ ಬಾಲ್ಯದಲ್ಲಿ ಹಸಿವು ಮತ್ತು ಬಡತನವೇ ಮೊದಲ ಗುರುವಾಗಿತ್ತು. 1934ರಲ್ಲಿ ತನ್ನ 8ನೇ ವಯಸ್ಸಿನಲ್ಲಿ ತಂದೆ ಹೈದರ್ ಮಿರ್ಜಾ ಅವರೊಂದಿಗೆ ಹೊಟ್ಟೆಪಾಡಿಗಾಗಿ ಮುಂಬೈಗೆ ಬಂದಿಳಿದ ಈ ಬಾಲಕ, ಕ್ರಾಫರ್ಡ್ ಮಾರ್ಕೆಟ್ನಲ್ಲಿ ಸಣ್ಣ ಸೈಕಲ್ ರಿಪೇರಿ ಅಂಗಡಿಯಲ್ಲಿ ದುಡಿದ.
1944ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಬಾಂಬೆ ಬಂದರಿನಲ್ಲಿ (Docks) ಸಾಮಾನು ಹೊರುವ ಸಾಮಾನ್ಯ ಕೂಲಿಯಾಗಿ (Coolie) ಕೆಲಸಕ್ಕೆ ಸೇರಿದಾಗ ಆತನ ಬದುಕಿನ ದಿಕ್ಕೇ ಬದಲಾಯಿತು. ವಿದೇಶಿ ಹಡಗುಗಳ ಮೂಲಕ ಬರುತ್ತಿದ್ದ ಅಕ್ರಮ ಚಿನ್ನ, ಬೆಳ್ಳಿ, ವಾಚ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳಸಾಗಣೆ ಜಾಲದ ಪರಿಚಯವಾಯಿತು. 1950ರ ದಶಕದಲ್ಲಿ ಅರಬ್ ಕಳ್ಳಸಾಗಣೆದಾರ ಶೇಖ್ ಮೊಹಮ್ಮದ್ ಅಲ್ ಗಾಲಿಬ್ ಜೊತೆ ಕೈಜೋಡಿಸಿದ ಮಸ್ತಾನ್, ಚುರುಕು ಬುದ್ಧಿಯಿಂದ ಕಸ್ಟಮ್ಸ್ ಕಣ್ಣು ತಪ್ಪಿಸಿ ಸರಕು ಹೊರತರುವಲ್ಲಿ ನಿಪುಣನಾದ. ನೋಡನೋಡುತ್ತಿದ್ದಂತೆಯೇ ಬಂದರಿನ ಸಾಮಾನ್ಯ ಕೂಲಿ ಕೋಟ್ಯಂತರ ರೂಪಾಯಿಗಳ ಒಡೆಯನಾದ…
ಹಾಜಿ ಮಸ್ತಾನ್ಗೆ ತನ್ನನ್ನು ತಾನು ‘ಬೀದಿ ರೌಡಿ’ ಎಂದು ಕರೆಸಿಕೊಳ್ಳುವುದು ಎಳ್ಳಷ್ಟೂ ಇಷ್ಟವಿರಲಿಲ್ಲ. ಆತ ಒಬ್ಬ ಅಪ್ಪಟ ‘ಬಿಸಿನೆಸ್ ಮ್ಯಾನ್’ ತರಹ ಬದುಕಿ ತೋರಿಸಿದ. ಶುಭ್ರ ಬಿಳಿ ಬಣ್ಣದ ಬಟ್ಟೆ, ಬಿಳಿ ಶೂ, ಕೈಯಲ್ಲಿ ವಿದೇಶಿ ಸಿಗರೇಟ್ ಮತ್ತು ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ರಾಜನಂತೆ ಓಡಾಡುತ್ತಿದ್ದ ಇವರನ್ನು ಜನರು ಭಯ ಮತ್ತು ಗೌರವದಿಂದ ‘ಸುಲ್ತಾನ್ ಮಿರ್ಜಾ’ ಎಂದು ಕರೆಯುತ್ತಿದ್ದರು.
1960–70ರ ದಶಕದಲ್ಲಿ ಅಂದಿನ ಘಟಾನುಘಟಿ ಡಾನ್ಗಳಾದ ವರದರಾಜನ್ ಮೊದಲಿಯಾರ್ ಮತ್ತು ಕರೀಂ ಲಾಲಾ ಅವರೊಂದಿಗೆ ಸಂಘರ್ಷಕ್ಕೆ ಇಳಿಯದೆ, ಮುಂಬೈ ನಗರವನ್ನು ಮೂರು ಭಾಗಗಳಾಗಿ ಹಂಚಿಕೊಂಡು ಶಾಂತಿಯುತವಾಗಿ ವ್ಯವಹಾರ ನಡೆಸುವ ಒಪ್ಪಂದ ಮಾಡಿಕೊಂಡಿದ್ದು ಮಸ್ತಾನ್ನ ಚಾಣಾಕ್ಷತನಕ್ಕೆ ಸಾಕ್ಷಿ. ಮುಂದೆ ಭೂಗತ ಜಗತ್ತನ್ನು ನಡುಗಿಸಿದ ದಾವೂದ್ ಇಬ್ರಾಹಿಂ ಕೂಡ ಮಸ್ತಾನ್ ಮುಂದೆ ತಲೆಬಾಗಿ ‘ಡಾನ್’ ಎಂದೇ ಗೌರವಿಸುತ್ತಿದ್ದ.
ಮಸ್ತಾನ್ ಕೇವಲ ಭೂಗತ ಜಗತ್ತಿಗೆ ಸೀಮಿತವಾಗಲಿಲ್ಲ; ಬಾಲಿವುಡ್ನ ದೊಡ್ಡ ದೊಡ್ಡ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಮಸ್ತಾನ್ ಭೇಟಿಗಾಗಿ ಕಾಯುತ್ತಿದ್ದರು. ತನ್ನ ಸಂಪತ್ತನ್ನು ರಿಯಲ್ ಎಸ್ಟೇಟ್ ಮತ್ತು ಸಿನಿಮಾ ನಿರ್ಮಾಣದಲ್ಲಿ ಹೂಡಿಕೆ ಮಾಡಿದ ಈತ, ನಟಿ ಮಧುಬಾಲಾ ಅವರನ್ನು ಹೋಲುತ್ತಿದ್ದ ನಟಿ ಸೋನಾ ಅವರನ್ನು ವಿವಾಹವಾದರು.
1975ರಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾ ‘ದೀವಾರ್’ (Deewaar) ನ ‘ವಿಜಯ್’ ಪಾತ್ರ ಹಾಜಿ ಮಸ್ತಾನ್ ಅವರ ಜೀವನದಿಂದಲೇ ಪ್ರೇರಿತವಾಗಿತ್ತು.
ನಂತರದ ದಿನಗಳಲ್ಲಿ ಬಂದ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಚಿತ್ರದಲ್ಲಿ ಅಜಯ್ ದೇವಗನ್ ನಿರ್ವಹಿಸಿದ ಪಾತ್ರವೂ ಇವರದೇ ಕಥೆಯಾಗಿತ್ತು.
1975ರ ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ ಮಸ್ತಾನ್, ಅಲ್ಲಿ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ವಿಚಾರಗಳಿಂದ ಪ್ರಭಾವಿತರಾದರು. ಜೈಲಿನಿಂದ ಹೊರಬಂದ ನಂತರ ಕಳ್ಳಸಾಗಣೆ ಜಗತ್ತಿಗೆ ಸಂಪೂರ್ಣ ವಿದಾಯ ಹೇಳಿ ಸಮಾಜ ಸೇವೆ ಹಾಗೂ ರಾಜಕೀಯದತ್ತ ಮುಖ ಮಾಡಿದರು. 1984ರಲ್ಲಿ ‘ದಲಿತ ಮುಸ್ಲಿಂ ಸುರಕ್ಷಾ ಮಹಾಸಂಘ’ (ನಂತರ ಭಾರತೀಯ ಮೈನಾರಿಟಿ ಸುರಕ್ಷಾ ಮಹಾಸಂಘ) ಎಂಬ ಪಕ್ಷ ಕಟ್ಟಿದರು.
ತನ್ನ ಬಳಿ ಸಹಾಯ ಕೇಳಿ ಬಂದ ಬಡವರು ಮತ್ತು ಅಲ್ಪಸಂಖ್ಯಾತರಿಗೆ ಕೈತುಂಬಾ ದಾನ ಮಾಡುತ್ತಿದ್ದ ಕಾರಣಕ್ಕೆ ಜನರು ಇವರನ್ನು ಪ್ರೀತಿಯಿಂದ ‘ರಾಬಿನ್ ಹುಡ್’ ಎಂದು ಕರೆಯುತ್ತಿದ್ದರು. 1994ರ ಜೂನ್ 25ರಂದು ತಮ್ಮ 68ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಡಾನ್ ಹಾಜಿ ಮಸ್ತಾನ್, ಇಂದಿಗೂ ಮುಂಬೈ ಇತಿಹಾಸದ ಅತ್ಯಂತ ಕುತೂಹಲಕಾರಿ ಮತ್ತು ವರ್ಣರಂಜಿತ ಅಧ್ಯಾಯವಾಗಿ ಉಳಿದಿದ್ದಾರೆ.