
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ನಗರದ ಸಂತೆಬೈಲು ಮುಖ್ಯ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದ ಆ ಒಂದು ದಾರುಣ ಘಟನೆ ಕಂಡವರ ಎದೆ ನಡುಗಿಸಿದೆ. ನಿತ್ಯವೂ ಜನಜಂಗುಳಿಯಿಂದ ಗಿಜಿಗುಡುವ ಎಸ್.ಬಿ.ಐ ಬ್ಯಾಂಕ್ ಹಾಗೂ ಹಾಸನ ಅಯ್ಯಂಗಾರ್ ಬೇಕರಿ ರಸ್ತೆಯಲ್ಲಿ, ಸಂಜೆ ಸುಮಾರು 6:30ರ ಹೊತ್ತಿಗೆ ಸಾವು ಅತಿವೇಗದ ರೂಪದಲ್ಲಿ ಅಪ್ಪಳಿಸಿತ್ತು. ಮಹಾವೀರ ಸರ್ಕಲ್ ಕಡೆಯಿಂದ ಸಿಬಿಎಸ್ ಸರ್ಕಲ್ ಕಡೆಗೆ ಸಾಗುತ್ತಿದ್ದ ‘ಅಪ್ಪಿ ಆಟೋ’ವೊಂದು ರಸ್ತೆಯ ಬದಿಯಲ್ಲಿದ್ದ ಪುಟ್ಟ ಕರುವಿಗೆ ಅತಿವೇಗವಾಗಿ ಬಂದು ಬಲವಾಗಿ ಗುದ್ದಿದೆ. ಗುದ್ದಿದ ರಭಸಕ್ಕೆ ಸಣ್ಣಕರು ಸ್ಥಳದಲ್ಲೇ ಉಸಿರು ಚೆಲ್ಲಿದೆ, ಕನಿಷ್ಠ ಮಾನವೀಯತೆಯೂ ಇಲ್ಲದ ಆಟೋ ಚಾಲಕ ವಾಹನ ನಿಲ್ಲಿಸದೆ, ತಿರುಗಿ ನೋಡುವ ವ್ಯವಧಾನ ಇಲ್ಲದೆ ಅದೇ ವೇಗದಲ್ಲಿ ಪರಾರಿಯಾಗಿದ್ದಾನೆ.
ಅಪಘಾತ ಸಂಭವಿಸಿದ ಬೆನ್ನಲ್ಲೇ ಅಲ್ಲಿ ಕಂಡ ದೃಶ್ಯ ಎಂಥವರ ಕಣ್ಣಲ್ಲೂ ಧಾರಾಕಾರವಾಗಿ ನೀರು ತರಿಸುವಂತಿತ್ತು. ತನ್ನ ಕಣ್ಣೆದುರೇ ಮಗುವಿನ ಪ್ರಾಣ ಹಾರಿಹೋಗಿದ್ದನ್ನು ಅರಿಯದ ತಾಯಿ ಹಸು, ಧಾವಿಸಿ ಬಂದು ಕರುವಿನ ಮೈಯನ್ನೆಲ್ಲಾ ಮತ್ತೆ ಮತ್ತೆ ನೆಕ್ಕುತ್ತಿತ್ತು. ‘ಏಳು ಮಗು’ ಎಂದು ಗೋಗರೆಯುವಂತೆ ಮೂಕವೇದನೆಯಿಂದ ಮೂಸಿನೋಡುತ್ತಾ, ಉಸಿರಿಲ್ಲದ ಕಂದನನ್ನು ಎಬ್ಬಿಸಲು ಹರಸಾಹಸ ಪಡುತ್ತಿದ್ದ ಆ ತಾಯಿಯ ಮಮತೆ ನೆರೆದಿದ್ದವರ ಎದೆ ಕಲಕಿತು. ಮೂಕ ಪ್ರಾಣಿಯ ಈ ಆಕ್ರಂದನ ಕಂಡು ಸ್ಥಳೀಯ ವ್ಯಾಪಾರಿಗಳು ಹಾಗೂ ದಾರಿಹೋಕರು ಮಾತೇ ಬಾರದಂತೆ ಕಣ್ಣೀರು ಹಾಕಿದರು.
ನಗರದ ಹೃದಯಭಾಗದ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ, ಮಿತಿಮೀರಿದ ವೇಗದಲ್ಲಿ ನುಗ್ಗುವ ವಾಹನ ಸವಾರರ ಬೇಜವಾಬ್ದಾರಿಗೆ ಈ ದುರ್ಘಟನೆ ಕನ್ನಡಿ ಹಿಡಿದಿದೆ. ಕೇವಲ ಮನುಷ್ಯರ ಜೀವಕ್ಕೆ ಮಾತ್ರ ಬೆಲೆ ಕಟ್ಟಿ, ಮೂಕಜೀವಿಗಳನ್ನು ಕ್ಷುಲ್ಲಕವಾಗಿ ಕಾಣುವ ಚಾಲಕರ ಧೋರಣೆಯಿಂದಾಗಿ ಮುಗ್ಧ ಕರುವೊಂದು ಬಲಿಯಾಗಿದೆ.
ಸದಾ ವಾಹನ ಸಂಚಾರ ದಟ್ಟವಾಗಿರುವ ಇಂತಹ ಪ್ರಮುಖ ವೃತ್ತಗಳಲ್ಲಿ ವಾಹನ ಸವಾರರು ಕೊಂಚ ವೇಗ ನಿಯಂತ್ರಿಸಿ, ಜಾಗರೂಕತೆಯಿಂದ ಸಾಗಿದ್ದರೆ ಈ ದುರಂತವನ್ನು ಖಂಡಿತ ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಹಿಡಿಶಾಪ ಹಾಕಿದರು.
ಇನ್ನೊಂದೆಡೆ, ಈ ಘಟನೆಯು ನಗರದಲ್ಲಿ ಜಾನುವಾರುಗಳನ್ನು ರಸ್ತೆಗೆ ಬಿಡುವ ಮಾಲೀಕರ ಬೇಜವಾಬ್ದಾರಿಯನ್ನೂ ಮುನ್ನೆಲೆಗೆ ತಂದಿದೆ. ಜಾನುವಾರುಗಳನ್ನು ಸಾಕುವವರು ಅವುಗಳನ್ನು ಮನೆಯಲ್ಲಿ ಸುರಕ್ಷಿತವಾಗಿ ಪೋಷಿಸದೆ, ಬೀದಿಗೆ ಬಿಟ್ಟುಬಿಡುತ್ತಿರುವುದು ಪ್ರಾಣಿಗಳ ಪ್ರಾಣಕ್ಕೂ ಹಾಗೂ ಸಾರ್ವಜನಿಕರ ಸಂಚಾರಕ್ಕೂ ನಿರಂತರ ಕಂಟಕವಾಗಿ ಪರಿಣಮಿಸಿದೆ.
ಪ್ರಾಣಿಗಳ ಮೇಲಿನ ಅತಿಯಾದ ನಿರ್ಲಕ್ಷ್ಯ ಹಾಗೂ ರಸ್ತೆಯ ಅತಿವೇಗದ ಅಟ್ಟಹಾಸ—ಎರಡೂ ಸೇರಿ ಕೊನೆಗೆ ಮೂಕ ಜೀವವೊಂದರ ಬಲಿಗೆ ಕಾರಣವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ವ್ಯಾಪಾರಸ್ಥರು ಹಾಗೂ ಪ್ರತ್ಯಕ್ಷ ದರ್ಶಿ ಕರಾಟೆ ಶಿವು ತಕ್ಷಣವೇ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕರುವಿಗೆ ಡಿಕ್ಕಿ ಹೊಡೆದು ಪರಾರಿಯಾದ ಆಟೋವನ್ನು ಪತ್ತೆಹಚ್ಚಲು ರಸ್ತೆಯುದ್ದಕ್ಕೂ ಇರುವ ಅಂಗಡಿ ಮುಂಗಟ್ಟುಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ತಪ್ಪಿತಸ್ಥ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪಟ್ಟುಹಿಡಿದಿದ್ದಾರೆ.
ಕರುವನ್ನು ಕಳೆದುಕೊಂಡು ದಿಕ್ಕುತೋಚದೆ ಕಣ್ಣೀರು ಸುರಿಸುತ್ತಿರುವ ಆ ತಾಯಿ ಹಸು ಮತ್ತು ಮೃತ ಕರುವಿನ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದ್ದು, ವಿಚಾರಣೆಯ ಬಳಿಕ ಜಾನುವಾರನ್ನು ಅವರ ವಶಕ್ಕೆ ಒಪ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಣಿಗಳನ್ನು ರಸ್ತೆಗೆ ಅನಾಥವಾಗಿ ಬಿಡುವ ಪ್ರವೃತ್ತಿ ಮತ್ತು ಅತಿಯಾದ ವಾಹನ ವೇಗಕ್ಕೆ ಕಡಿವಾಣ ಬೀಳದಿದ್ದರೆ ಇಂತಹ ಕರುಳು ಹಿಂಡುವ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ.