ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ವರದಾನವಾದ ತುರ್ತು ಸೇವೆ; ಸಾರ್ವಜನಿಕರಿಂದ ಮೆಚ್ಚುಗೆ.
ಕನಕಗಿರಿ: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆಯೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ನಲ್ಲೇ ಸಹಜ ಹೆರಿಗೆ ಮಾಡಿಸಲಾಗಿದೆ.
ಕನಕಗಿರಿ ತಾಲೂಕಿನ ಕರಡೋಣಿ ಗ್ರಾಮದ ಈರಮ್ಮ ಗಂಡ ಹನುಮೇಶ ಕಾಸನಕೊಂಡಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್‌ನಲ್ಲಿಯೇ ಸಿಬ್ಬಂದಿ ಸಹಾಯದಿಂದ ಸಹಜ ಹೆರಿಗೆಯಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆಂಬುಲೆನ್ಸ್ ಸಿಬ್ಬಂದಿಯಾದ ಇಎಂಟಿ ದ್ಯಾವಣ್ಣ ಹಾಗೂ ಪೈಲಟ್ ಮಾರುತಿ ವಾಲ್ಮೀಕಿ ಅವರು ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿ ಹೆರಿಗೆಗೆ ಸಹಕರಿಸಿದರು. ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.