ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು: ನಗರದಲ್ಲಿ ಸಂಭ್ರಮದಿಂದ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕ್ಷಣಾರ್ಧದಲ್ಲಿ ಸೂತಕದ ಛಾಯೆ ಆವರಿಸಿದೆ. ಟ್ರ್ಯಾಕ್ಟರ್ನಿಂದ ಆಯತಪ್ಪಿ ಬಿದ್ದ ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಅದೇ ವಾಹನದ ಚಕ್ರಗಳು ಹರಿದು ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯವಿದ್ರಾವಕ ಘಟನೆ ಶುಕ್ರವಾರ ರಾತ್ರಿ ರಾಯಚೂರಿನಲ್ಲಿ ಸಂಭವಿಸಿದೆ.
ಘಟನೆಯಲ್ಲಿ 16 ವರ್ಷದ ಚರಣಕುಮಾರ್ ಹಾಗೂ 4 ವರ್ಷದ ಸುಜಿತ್ (ಕೃಷ್ಣ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮತ್ತೊಬ್ಬ ಬಾಲಕ ವಿಜಯಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಲು ಹೋರಾಡುತ್ತಿದ್ದಾನೆ.
ರಾಯಚೂರು ನಗರದ ಜಹೀರಾಬಾದ್ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 5ನೇ ದಿನದ ಗಣೇಶ ಮೂರ್ತಿಯನ್ನು ಶುಕ್ರವಾರ ರಾತ್ರಿ ಭಕ್ತಿ-ಭಾವ, ಡಿಜೆ ಸಂಗೀತ ಹಾಗೂ ನೃತ್ಯದೊಂದಿಗೆ ವಿಸರ್ಜನಾ ಮೆರವಣಿಗೆಗೆ ಕೊಂಡೊಯ್ಯಲಾಗುತ್ತಿತ್ತು. ಮೂರ್ತಿ ಹೊತ್ತಿದ್ದ ಟ್ರ್ಯಾಕ್ಟರ್ನಲ್ಲೇ ಬಾಲಕರು ಕುಳಿತಿದ್ದರು.
ಮೆರವಣಿಗೆ ಸಾಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಬಾಲಕರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಚಾಲಕನಿಗೆ ವಾಹನ ನಿಯಂತ್ರಿಸಲು ಸಾಧ್ಯವಾಗದೆ ಟ್ರ್ಯಾಕ್ಟರ್ ಚಕ್ರಗಳು ಬಾಲಕರ ಮೈಮೇಲೆ ಹರಿದಿವೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕರನ್ನು ರಕ್ಷಿಸಲು ಧಾವಿಸಿದ್ದಾರೆ. ತೀವ್ರ ಗಾಯಗೊಂಡ ವಿಜಯಕುಮಾರ್ನನ್ನು ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಹಬ್ಬದ ಸಂತಸದಲ್ಲಿ ತೇಲುತ್ತಿದ್ದ ಬಡಾವಣೆಯಲ್ಲಿ ಈ ದುರಂತದಿಂದಾಗಿ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆಗೆ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.