ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ಇಲ್ಲಿನ 29ನೇ ವಾರ್ಡ್ ಹಿರೇಜಂತಕಲ್ನ ಬನ್ನಿ ಮಹಾಕಾಳಿ ಗುಡಿ ಸಮೀಪ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಹುಲ್ಲಿನ ಬಣವೆ ಹಾಗೂ ಪಕ್ಕದಲ್ಲಿದ್ದ ಜಾನುವಾರುಗಳ ಶೆಡ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಈ ಘಟನೆಯು ಇಂದು ಮುಂಜಾನೆ ಸುಮಾರು 8.30 ಗಂಟೆಗೆ ಸಂಭವಿಸಿದೆ.
ಸ್ಥಳೀಯ ನಿವಾಸಿಗಳಾದ ಹುಲುಗಪ್ಪ ಮತ್ತು ಮಲ್ಲಪ್ಪ ಅವರಿಗೆ ಸೇರಿದ ಹುಲ್ಲಿನ ಬಣವೆ ಇದಾಗಿದ್ದು, ಬಣವೆ ಪಕ್ಕದಲ್ಲಿದ್ದ ತಿಪ್ಪೆಗೆ ಯಾರೋ ಸುರಿದಿದ್ದ ಒಲೆಯ ಬಿಸಿ ಬೂದಿಯ ಕೆಂಡದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಶೆಡ್ಡಿಗೂ ವ್ಯಾಪಿಸಿದ್ದು, ಶೆಡ್ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.
ಶೆಡ್ನಲ್ಲಿ ಕಟ್ಟಲಾಗಿದ್ದ ಮೂರು ಎಮ್ಮೆಗಳ ಮೈತುಂಬಾ ಚರ್ಮ ಸುಟ್ಟು ಗಾಯಗಳಾಗಿದ್ದು, ತಕ್ಷಣವೇ ಅವುಗಳನ್ನು ರಕ್ಷಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಘಟನಾ ಸ್ಥಳದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ಬೆಂಕಿ ಸುತ್ತಮುತ್ತಲಿನ ಮನೆಗಳಿಗೆ ಹರಡುವುದು ತಪ್ಪಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.