ಮರ್ಚೆಡ್ ಡೇಸ್ ಸುದ್ದಿ.
ಗದಗ: ಉತ್ತರ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ಎಫ್. ದಂಡಿನ್ ಅವರು ಭಾನುವಾರ ವಿಧಿವಶರಾಗಿದ್ದಾರೆ. ಉತ್ತರ ಕರ್ನಾಟಕದ ಕುರುಬ ಸಮುದಾಯದ ಹಿರಿಯ ಧುರಿತರಾಗಿದ್ದ ಅವರ ನಿಧನಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಕಂಬನಿ ವ್ಯಕ್ತವಾಗಿದೆ.
“ಶಿಕ್ಷಣವೇ ಸಮಾಜ ಪರಿವರ್ತನೆಯ ಮಹಾಶಕ್ತಿ” ಎಂಬ ಉದಾತ್ತ ಧ್ಯೇಯದೊಂದಿಗೆ ಡಾ. ಬಿ. ಎಫ್. ದಂಡಿನ್ ಅವರು 1965ರಲ್ಲಿ ಕನಕದಾಸ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೆ ಗ್ರಾಮೀಣ ಹಾಗೂ ಹಿಂದುಳಿದ ಭಾಗದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಅಕ್ಷರ ಜ್ಞಾನದ ಬೆಳಕು ನೀಡುವ ಮೂಲಕ ಅವರು ಶೈಕ್ಷಣಿಕ ತಪಸ್ವಿಯಾಗಿ ಸೇವೆ ಸಲ್ಲಿಸಿದ್ದರು.
ಅವರ ದೂರದೃಷ್ಟಿ ಮತ್ತು ಅವಿರತ ಶ್ರಮದ ಫಲವಾಗಿ ಇಂದು ಕನಕದಾಸ ಶಿಕ್ಷಣ ಸಂಸ್ಥೆಯು 65ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾಗಿ ಹೆಮ್ಮರವಾಗ ಬೆಳೆದಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟ ಇವರ ಅನನ್ಯ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಸರ್ಕಾರವು ಇವರಿಗೆ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.
ಡಾ. ಬಿ. ಎಫ್. ದಂಡಿನ್ ಅವರ ಭೌತಿಕ ಪಯಣ ಅಂತ್ಯಗೊಂಡಿದ್ದರೂ, ಅವರು ಬಿತ್ತಿದ ಶಿಕ್ಷಣದ ಬೀಜ, ಸಮಾಜಸೇವೆಯ ಆದರ್ಶ ಮತ್ತು ಮಾನವೀಯ ಮೌಲ್ಯಗಳು ಸದಾ ಚಿರಕಾಲ ಜೀವಂತವಾಗಿರುತ್ತವೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಪಾರ ಶಿಷ್ಯವೃಂದ ಮತ್ತು ಕನಕದಾಸ ಶಿಕ್ಷಣ ಸಂಸ್ಥೆಯ ಸಮಸ್ತ ಸಿಬ್ಬಂದಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಲಾಗಿದೆ.