

ಮರ್ಚೆಡ್ ಡೇಸ್ ವಿಶೇಷ ಸುದ್ದಿ.
ರಾಯಚೂರು: ನಾಡಹಬ್ಬ ದಸರಾ, ಎಂದರೆ ಮೈಸೂರು ಎಂಬ ಮಾತು ಎಷ್ಟು ಪ್ರಸಿದ್ಧವು, ರಾಯಚೂರು ಎಂದರೆ “ಮುಂಗಾರು ಸಾಂಸ್ಕೃತಿಕ ಹಬ್ಬ” ಅಷ್ಟೇ ಹೆಮ್ಮೆಯ ಸಂಕೇತ. ಇದು ಕೇವಲ ಒಂದು ಆಚರಣೆಯಲ್ಲ, ಅನ್ನದಾತನ ಬದುಕಿನ ದಿಕ್ಸೂಚಿ.
ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಮೈಸೂರು ದಸರಾಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಗ್ರಾಮೀಣ ಸೊಗಡಿನ ಇತಿಹಾಸ ರಾಯಚೂರು ಜಿಲ್ಲೆಯ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕಿದೆ. ಮುಂಗಾರು ಮಳೆಯ ಆರಂಭದ ಸಂಕೇತವಾಗಿ, ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ‘ಕಾರ ಹುಣ್ಣಿಮೆ’ ರೈತರ ಪಾಲಿಗೆ ಅತ್ಯಂತ ಪ್ರಮುಖ ಹಾಗೂ ಸಾಂಪ್ರದಾಯಿಕ ಹಬ್ಬವಾಗಿದೆ.
ಮುಂದೆ ಬರುವ ಸಾಲು ಸಾಲು ಹಬ್ಬಗಳನ್ನು ಕರೆದುಕೊಂಡು ಬರುವ ‘ದಿಕ್ಸೂಚಿ ಹಬ್ಬ’ ಇದಾಗಿದ್ದು, ಉತ್ತರ ಕರ್ನಾಟಕ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ವರ್ಗದ ಜನರು ಇದನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.
ರಾಯಚೂರು ಜಿಲ್ಲೆಯ ರಾಜೇಂದ್ರ ಗಂಜ್ ಎಂಬ ಐತಿಹಾಸಿಕ ಸ್ಥಳದಲ್ಲಿ ಸುಮಾರು ವರ್ಷಗಳಿಂದ ಕಾಪು ಸಮಾಜ ಮತ್ತು ಸ್ಥಳೀಯರು ಒಗೂಡಿ ಈ ಹಬ್ಬವನ್ನು “ಮುಂಗಾರು ಸಾಂಸ್ಕೃತಿಕ ಹಬ್ಬ” ಎಂಬ ಹೆಸರಿನಲ್ಲಿ ಆಯೋಜಿಸುತ್ತಾ ಬಂದಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳ ದಂಡೆ ಇಲ್ಲಿ ಸೇರಿರುತ್ತದೆ.
ಮರಳಿನ ಚೀಲ ಎತ್ತುವುದು, ಭಾರ ಎತ್ತುವ ಸ್ಪರ್ಧೆ ಮತ್ತು ರೋಮಾಂಚಕ ಕುಸ್ತಿ ಪಂದ್ಯಾವಳಿಗಳು.
ಜೊತೆಗೆ ಡೊಳ್ಳು ಕುಣಿತ, ಜನಪದ ನೃತ್ಯ, ಜನಪದ ಹಾಡುಗಳು, ನಾಟಕಗಳು ಮತ್ತು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು.
ಮೂರನೇ ದಿನ ನಡೆಯುವ ಕಲ್ಲು ಬಂಡೆ ಎಳೆಯುವ ಎತ್ತುಗಳ ಸ್ಪರ್ಧೆ’. ಈ ಸ್ಪರ್ಧೆಯಲ್ಲಿ ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಶಕ್ತಿಶಾಲಿ ಎತ್ತುಗಳು ಪಾಲ್ಗೊಂಡು ಕಣಕ್ಕಿಳಿಯುತ್ತವೆ.
ಕಾರ ಹುಣ್ಣಿಮೆಯ ದಿನ ಹಗಲಿರುಳು ದುಡಿಯುವ ಎತ್ತು, ದನ-ಕರುಗಳಿಗೆ ಮೈ ಸ್ನಾನ ಮಾಡಿಸಿ, ಕೊಂಬುಗಳನ್ನು ಕೆತ್ತಿಸಿ, ಬಗೆಬಗೆಯ ಬಣ್ಣಗಳನ್ನು ಬಳಿಯಲಾಗುತ್ತದೆ. ಮೈಮೇಲೆ ಕಲರ್ ಕಲರ್ ಚಿತ್ತಾರ ಬಿಡಿಸಿ, ಗೊಂಡೆ-ರಿಬ್ಬನ್ಗಳನ್ನು ಕಟ್ಟಿ ಸಿಂಗರಿಸಿ ‘ಕರೆ’ಯುವ ಅದ್ಭುತ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಮೈಸೂರು ದಸರಾದ ಮಾದರಿಯಲ್ಲಿಯೇ ರಾಯಚೂರಿನ ಈ ಮುಂಗಾರು ಸಾಂಸ್ಕೃತಿಕ ಹಬ್ಬದಲ್ಲೂ ಶಾಲೆ-ಕಾಲೇಜುಗಳ ಸಹಭಾಗಿತ್ವ, ಕವಿಗಳಿಂದ ಕವನ ವಾಚನ, ಗಾಯನ ಹಾಗೂ ರಾಯಚೂರು ಜಿಲ್ಲೆಯ ವಿವಿಧ ಕ್ಷೇತ್ರದ ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ವೇದಿಕೆ ಕಲ್ಪಿಸಬೇಕಿದೆ.
ಈ ಹಬ್ಬವನ್ನು ಇನ್ನು ಅದ್ಭುತವಾಗಿ ಆಚರಿಸಲು ಕೇವಲ ಒಂದು ಸಮಾಜ ಅಥವಾ ಪ್ರದೇಶಕ್ಕೆ ಸೀಮಿತಗೊಳಿಸದೆ, ಜಿಲ್ಲಾ ಆಡಳಿತವು ಕೈಜೋಡಿಸಿದರೆ ಇದರ ಅಥವಾ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಬೇಕು. ಎಲ್ಲ ಸಮಾಜದ ಜನಾಂಗವನ್ನು ಒಳಗೊಂಡು ಇದನ್ನು ರಾಯಚೂರಿನ ಅಧಿಕೃತ ‘ನಾಡಹಬ್ಬ’ವಾಗಿ ಆಚರಿಸಿದರೆ, ಈ ಮುಂಗಾರು ಸಾಂಸ್ಕೃತಿಕ ಹಬ್ಬ ಜಗತ್ಪ್ರಸಿದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬ ಬಂದಿದೆಯಾದರೂ, ರೈತನ ಮುಖದಲ್ಲಿ ಹದವಾದ ನಗುವಿಲ್ಲ. ಮುಂಗಾರು ಮಳೆ ಸರಿಯಾಗಿ ಬಾರದ ಕಾರಣ ಅನ್ನದಾತ ಬೇಸರಗೊಂಡಿದ್ದಾನೆ. “ಹಬ್ಬ ಬಂದಿದೆ, ಆಚರಿಸಬೇಕು ಅಷ್ಟೇ” ಎನ್ನುವಂತೆ ರೈತರು ಆಚರಣೆಯಲ್ಲಿ ತೊಡಗಿದ್ದಾರೆ.
ಒಂದು ವೇಳೆ ಮುಂಗಾರು ಮಳೆ ಸಕಾಲಕ್ಕೆ ಬಂದು ಕಳೆಗಟ್ಟಿದ್ದರೆ, ಕಾರ ಹುಣ್ಣಿಮೆಯ ಕರೆಯೇ ಬೇರೆ ರೀತಿಯಲ್ಲಿ ಇರುತ್ತಿತ್ತು.
ಆದರೂ, ಮಳೆರಾಯ ಕರುಣೆ ತೋರುತ್ತಾನೆ ಎಂಬ ಭರವಸೆಯೊಂದಿಗೆ, ಮುಂದಿನ ದಿನಗಳಲ್ಲಿ ಇನ್ನು ಅದ್ದೂರಿಯಾ ಸಂಭ್ರಮಕ್ಕಾಗಿ ಆಶಿಸೋಣ.
ಬನ್ನಿ, ನಾವೆಲ್ಲರೂ ಒಟ್ಟಾಗಿ ನಮ್ಮ ಮಣ್ಣಿನ ಹಬ್ಬ ‘ಕಾರು ಹುಣ್ಣಿಮೆ’ಯನ್ನು ಆಚರಿಸೋಣ.