
ಮರ್ಚೆಡ್ ಡೇಸ್ ಸುದ್ದಿ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕ್ಯಾದಿಗೆ ಹಾಳ ನಿನ್ನೆ ಮೊಹರಂ ಹಬ್ಬದ ಕೊನೆಯ ದಿನದ ಆಚರಣೆಯ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಗ್ರಾಮಸ್ಥರು ಸಡಗರ-ಸಂಭ್ರಮದಿಂದ ಹೆಜ್ಜೆ ಕುಣಿತ, ಅಲೈ ಕುಣಿತ ಸೇರಿದಂತೆ ವಿವಿಧ ಸಾಂಪ್ರದಾಯಿಕ ನೃತ್ಯಗಳನ್ನು ಮಾಡುತ್ತಾ ವಿಜೃಂಭಿಸುತ್ತಿದ್ದರು. ಹಬ್ಬದ ಪ್ರಮುಖ ಆಕರ್ಷಣೆಯಾದ ಕೆಂಡ ಹಾಯುವ (ಬೆಂಕಿ ಆಯುವ) ಆಚರಣೆಯ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದ್ದು,
ಗ್ರಾಮದ ನಿವಾಸಿಯಾದ ಮಡಿವಾಳ್ ದೇವರಾಜ (25) ಎಂಬ ಭಕ್ತನು ಭಕ್ತಿಯ ಪರಾಕಾಷ್ಠೆಯಲ್ಲಿ ಅಲೈ ಕುಣಿತ ಮುಗಿಸಿ, ಕೆಂಡದ ಹೊಂಡದಲ್ಲಿ ಬೆಂಕಿ ಆಯಲು ಮುಂದಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಈ ವೇಳೆ ಆಯತಪ್ಪಿ ಅವರು ಧಗಧಗನೆ ಉರಿಯುತ್ತಿದ್ದ ಕೆಂಡದ ರಾಶಿಯ ಮೇಲೆಯೇ ಬಿದ್ದಿದ್ದಾರೆ. ನೋಡನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆಗಳು ದೇವರಾಜ ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ನೆರೆದಿದ್ದವರಲ್ಲಿ ತಲ್ಲಣ ಮೂಡಿಸಿದೆ.
ಅಲೈ ಕುಣಿತವನ್ನು ನೋಡುತ್ತಾ ಸುತ್ತಲೂ ನೆರೆದಿದ್ದ ನೂರಾರು ಭಕ್ತರು ಹಾಗೂ ಗ್ರಾಮಸ್ಥರು ಘಟನೆಯನ್ನು ಕಂಡು ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಸಾರ್ವಜನಿಕರು ಅತ್ಯಂತ ಸಮಯಪ್ರಜ್ಞೆ ಪ್ರದರ್ಶಿಸಿ, ತಡಮಾಡದೇ ಬೆಂಕಿಯ ಜ್ವಾಲೆಯಲ್ಲಿದ್ದ ದೇವರಾಜ ಅವರನ್ನು ತಕ್ಷಣವೇ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಸಂಭವಿಸಬಹುದಾಗಿದ್ದ ಒಂದು ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯ ಜ್ವಾಲೆಯಿಂದ ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾದ ದೇವರಾಜ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಬಳ್ಳಾರಿ ಜಿಲ್ಲೆಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಕ್ಯಾದಿಗೆ ಹಾಳ ಗ್ರಾಮಸ್ಥರು ದೇವರಾಜ ಅವರ ಆರೋಗ್ಯ ಸುಧಾರಿಸಿ, ಶೀಘ್ರ ಗುಣಮುಖರಾಗಿ ಮರಳಿ ಗ್ರಾಮಕ್ಕೆ ಬರಲಿ ಎಂದು ಕಣ್ಣೀರಿಡುತ್ತಾ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.