Home ಸುದ್ದಿ “ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಸಮ್ಮೇಳನದ ತೆರೆ: ಡಾ. ದಯಾನಂದ ಅಗಸರ ವಿಶ್ರಾಂತ ಕುಲಪತಿಗಳ ಪ್ರೇರಣಾದಾಯಿ ಸಂದೇಶ.
ಸುದ್ದಿ

“ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಸಮ್ಮೇಳನದ ತೆರೆ: ಡಾ. ದಯಾನಂದ ಅಗಸರ ವಿಶ್ರಾಂತ ಕುಲಪತಿಗಳ ಪ್ರೇರಣಾದಾಯಿ ಸಂದೇಶ.

Share
Share

ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕ

ಮರ್ಚೆಡ್ ಡೇಸ್ ಸುದ್ದಿ.

ಕಲಬುರಗಿ: ಯುವ ಜನಾಂಗದ ಶೈಕ್ಷಣಿಕ ಕಲಿಕೆ ಮತ್ತು ಭವಿಷ್ಯದ ದೂರದೃಷ್ಟಿ ಚಿಂತನೆಗೆ ಸಮ್ಮೇಳನ ಪ್ರೋತ್ಸಾಹದಾಯಕವಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಹಕಾರದ ಮೂಲಕ ವೈಜ್ಞಾನಿಕ ಚಿಂತನ-ಮಂಥನದೊಂದಿಗೆ ಯಶಸ್ವಿಯಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ ಪ್ರಶಂಸೆ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ ಸುವರ್ಣ ಮಹೋತ್ಸವ ವರ್ಷಾಚರಣೆ ಮತ್ತು ‘ಸೂಕ್ಷ್ಮಜೀವಿಗಳ ವ್ಯಾಪ್ತಿ: ಉತ್ತಮ ನಾಳೆಗಾಗಿ ತಂತ್ರಜ್ಞಾನ’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೊಸತನದ ಆಲೋಚನೆ ಮತ್ತು ದೂರದೃಷ್ಟಿ ಮೂಲಕ ನಾವೆಲ್ಲರೂ ವಿಭಾಗದ ಏಳಿಗೆಗೆ ಶ್ರಮಿಸಿ ಮುಂದಿನ ೭೫ ವರ್ಷಗಳ ಸಂಭ್ರಮಾಚರಣೆಗೆ ನಾಂದಿಯಾಡಬೇಕಿದೆ. ಹಳೆಯ ವಿದ್ಯಾರ್ಥಿಗಳ ಸಾಧನೆ ಇಂದಿನ ಯುವಜನತೆಗೆ ಪ್ರೇರಣೆಯಾಗುವಂತಿರಲಿ ಎಂದ ಅವರು ವಿದ್ಯಾರ್ಥಿಗಳ ಸಂಘಕ್ಕೆ ನೇಮಕಗೊಂಡಿರುವ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.

ಬೆಂಗಳೂರು ನಿಮಾನ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್. ಎ. ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಸಮ್ಮೇಳನ, ಕಾರ್ಯಾಗಾರ, ಸಂಕಿರಣ, ಉಪನ್ಯಾಸಗಳಿಂದ ಅತ್ಯಂತ ಮಹತ್ವದ ವಿಷಯಗಳ ಇತ್ತೀಚಿನ ಬೆಳವಣಿಗೆ ಕುರಿತು ಚರ್ಚಿಸಲು ವೇದಿಕೆಗಳಾಗುತ್ತವೆ. ಗ್ರಹಿಕೆ, ಕಲಿಕೆ. ಚಿಂತನ-ಮಂಥನ ಮೂಲಕ ಅತ್ಯುತಮ ಅನುಭವಗಳು ಸಿಗುತ್ತವೆ. ಜ್ಞಾನ ಗಳಿಕೆಗೆ ಯಾವುದೇ ಮಿತಿಯಿಲ್ಲ. ಜ್ಞಾನದ ಮೂಲಕ ವ್ಯಕ್ತಿತ್ವ, ಕುಶಲತೆ, ಕೌಶಲ್ಯ ಅನುಭವದಿಂದ ಜಾಗತಿಕ ಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಮ್ಮೇಳನದಲ್ಲಿ ಮಂಡಿಸಿದ ವಿಚಾರಗಳು ನಿಮ್ಮ ಗುರಿ ಸಾಧನೆಗೆ ಹೊಸ ಮಾರ್ಗ ತೋರಿಸುತ್ತವೆ ಎಂದರು.

ಸಂಘದ ಅಧ್ಯಕ್ಷ ಪ್ರೊ. ಕೆ. ಲಿಂಗಪ್ಪ ಮಾತನಾಡಿ ಸುವರ್ಣ ಮಹೋತ್ಸವ ಮತ್ತು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಹಳೆಯ ವಿದ್ಯಾರ್ಥಿಗಳು ಆಗಮಿಸಿರುವುದೇ ನಮಗೆ ನವಚೈತನ್ಯ ಬಂತಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಉದಾರ ಮನದ ಸಹಾಯದಿಂದ ಈ ಸಂಭ್ರಮ ಮತ್ತು ವಿಭಾಗದ ಸಾಧನೆಯ ಮೈಲಿಗಲ್ಲುಗಳು ಹಂಚಿಕೊಳ್ಳುವ ಸೌಭಾಗ್ಯ ನಮಗೆ ದೊರೆತಿದೆ. ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಹಿರಿಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸ್ಪೂರ್ತಿ ಎಂದು ಬಾವಿಸಿದ್ದೇನೆ. ಮುಂದೆಯೂ ನಿಮ್ಮಲ್ಲರ ಬೆಂಬಲ, ಸಹಾಯ ಮತ್ತು ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ಹೇಳುವ ಮೂಲಕ ಅಭಿನಂದನೆ ಸಲ್ಲಿಸಿದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ. ಅನ್ನಪೂರ್ಣ ನಿಂಬರಗಿ ವಿಭಾಗದಲ್ಲಿ ಕಲಿತ ಅನುಭವಗಳನ್ನು ಭಾವನಾತ್ಮಕ ನುಡಿಗಳಲ್ಲಿ ಹಂಚಿಕೊಂಡರು.

ಮುಖ್ಯಸ್ಥೆ ಹಾಗೂ ಸಂಯೋಜಕಿ ಪ್ರೊ. ಎಂ.ಬಿ. ಸುಲೋಚನಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ. ಚಂದ್ರಕಾಂತ್ ಕೆಳಮನಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮ್ಮೇಳನದಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸಿದ ಸಂಶೋಧಕರಿಗೆ ಬೆಸ್ಟ ಓರಲ್ ಪ್ರಸಂಟೇಷನ್ ಮತ್ತು ಬೆಸ್ಟ್ ಪೋಸ್ಟರ್ ಪ್ರೆಸಂಟೇಷನ್ ಅವಾರ್ಡ್ ಪ್ರಮಾಣಪತ್ರಗಳನ್ನು ನೀಡಲಾಯಿತು.

ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಬಳಗ, ದೇಶದ ವಿವಿಧ ಶೈಕ್ಷಣಿಕ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಕೈಗಾರಿಕೆ, ಪ್ರಯೋಗಾಲಯದ ವಿಜ್ಞಾನಿಗಳು, ತಜ್ಞರು, ಹಾಗೂ ಜೀವವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಕೆಬಿಎನ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ತಸ್ಲಿಮ ಬಾನು ಸಮ್ಮೇಳನ ಕುರಿತು ಅನಿಸಿಕೆ ಹಂಚಿಕೊಂಡರು. ಪ್ರೊ. ಯಶವಂತರಾವ್ ಮೆಂಜಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಸುದರ್ಶನ ಎ. ವಂದಿಸಿದರು.

ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಐವತ್ತು ವರ್ಷಗಳ ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಅದರ ಅಂಗವಾಗಿ ಆಲುಮ್ನಿ ಸಹಯೋಗದಲ್ಲಿ ರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಂಡಿದೆ. ದೇಶದ ವಿವಿಧ ಭಾಗಗಳಿಂದ ಖ್ಯಾತ ವಿಜ್ಞಾನಿಗಳು ಸಂಶೋಧಕರ ಮೌಖಿಕ ಮತ್ತು ಪೋಸ್ಟರ್ ಪ್ರಬಂಧ ಮಂಡಿಸಿ ವಿದ್ವಾಂಸರಿಂದ ಮೆಚ್ಚುಗೆ ಪಡೆದಿರುವುದು ಹೆಮ್ಮೆ ತಂದಿದೆ. ಸೂಕ್ಷ್ಮಜೀವ ವಿಜ್ಞಾನ ಒಳಗೊಂಡ ಬಹುಶಿಸ್ತೀಯ ವಿಷಯಗಳ ವೈಜ್ಞಾನಿಕ ಚಿಂತನೆ, ಅಡ್ವಾನ್ಸಡ್ ಟೆಕ್ನಾಲಜಿಗಳ ಮಾಹಿತಿಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಅಳವಡಿಕೆ ಮತ್ತು ತರಬೇತಿಗೆ ಮತ್ತಷ್ಟು ಉತ್ಸಾಹ, ವಿಶೇಷ ಆಸಕ್ತಿ ಮೂಡಿಸಿದೆ. ಸಮ್ಮೇಳನದಲ್ಲಿ ಸುಮಾರು 200 ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದ ನಾನಾ ರಾಜ್ಯಗಳಿಂದ 20 ವಿಜ್ಞಾನಿಗಳು ಉಪನ್ಯಾಸ ನೀಡಲು ಆಗಮಿಸಿದ್ದರು. 30 ಸಂಶೋಧನಾ ಲೇಖನಗಳು ಸ್ವೀಕೃತಗೊಂಡಿದ್ದವು.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...