ಮರ್ಚೆಡ್ ಡೇಸ್ ವಿಶೇಷ ವರದಿ.
ರಾಯಚೂರು: ಕಡಿಮೆ ಶ್ರಮ, ದುಪ್ಪಟ್ಟು ಲಾಭ, ಮನೆಯಿಂದಲೇ ಕೆಲಸ ಈ ಆಕರ್ಷಕ ಆಮಿಷಗಳಿಗೆ ಬಲಿಯಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನೂರಾರು ಹಳ್ಳಿ ಹಾಗೂ ನಗರ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಬೀದಿಗೆ ಬೀಳುವಂತಾಗಿದೆ. ರಾಯಚೂರು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ‘SLV ಮಹಿಳಾ ಮಾರ್ಟ್’ (SLV Mahila Mart) ಸಂಸ್ಥೆಯು ಕೋಟ್ಯಂತರ ರೂಪಾಯಿ ವಂಚನೆ (10 . ಕೋಟಿಗಿಂತ ಹೆಚ್ಚು) ಎಸಗಿ, ಕಚೇರಿಗೆ ಬೀಗ ಜಡಿದು ಪರಾರಿಯಾಗಿರುವ ಗಂಭೀರ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ನಿರುದ್ಯೋಗದ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ
ಸಂಸ್ಥೆಯಲ್ಲಿ ₹1,00,000 (ಒಂದು ಲಕ್ಷ ರೂಪಾಯಿ) ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹20,000 ವರೆಗೆ ಸ್ಥಿರ ಆದಾಯ ನೀಡುವುದಾಗಿ ನಂಬಿಸಲಾಗಿತ್ತು.
ಮನೆಯಿಂದಲೇ ಕೆಲಸ ಮಹಿಳೆಯರಿಗೆ ಸುಲಭವಾಗಿ ಮಾಡಬಹುದಾದ ಅಗರಬತ್ತಿ ಪ್ಯಾಕಿಂಗ್, ಕರಕುಶಲ ವಸ್ತುಗಳ ತಯಾರಿಕೆಯಂತಹ ಕೆಲಸ ನೀಡಿ, ಅದಕ್ಕೆ ದೊಡ್ಡ ಮೊತ್ತದ ವೇತನ ನೀಡುವುದಾಗಿ ಆಸೆ ತೋರಿಸಲಾಗಿತ್ತು.
ಯಾವುದೇ ಹಗರಣದಂತೆ ಇಲ್ಲೂ ಕೂಡ ಆರಂಭದ ಕೆಲವು ತಿಂಗಳುಗಳ ಕಾಲ ಮಹಿಳೆಯರಿಗೆ ಸರಿಯಾಗಿ ಹಣ ಪಾವತಿಸಿ ನಂಬಿಕೆ ಗಳಿಸಲಾಯಿತು. ಈ ನಂಬಿಕೆಯಿಂದಾಗಿ ಮಹಿಳೆಯರು ತಮ್ಮ ಆಸ್ತಿ, ಒಡವೆ ಮಾರಿ ಹಾಗೂ ಸಾಲ ಮಾಡಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದರು. ಆದರೆ, ದೊಡ್ಡ ಮಟ್ಟದ ಹಣ ಸಂಗ್ರಹವಾಗುತ್ತಿದ್ದಂತೆ ಮಾಲೀಕರು ಕಚೇರಿ ಮುಚ್ಚಿ ನಾಪತ್ತೆಯಾಗಿದ್ದಾರೆ.
ಈ ವಂಚನೆ ಕೇವಲ ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಸಂಸ್ಥೆಯ ಏಜೆಂಟರ ಮೂಲಕ ತುಮಕೂರು, ಹಾವೇರಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೂ ಈ ಜಾಲ ವಿಸ್ತರಿಸಿದ್ದು, ಸಾವಿರಾರು ಮಹಿಳೆಯರು ಇಂದು ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ನೊಂದ ಮಹಿಳೆಯರು ಬೀದಿಗಿಳಿದು ಆಕ್ರೋಶ ಹೊರಹಾಕುತ್ತಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಫೈನಾನ್ಸಿಯಲ್ ಸ್ಕ್ಯಾಮ್ಗಳು, ಕ್ರೈಂ ಮತ್ತು ಮಿಸ್ಸಿಂಗ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಒಂದೆರಡು ವರ್ಷಗಳ ಹಿಂದಷ್ಟೇ
ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ‘ಧರ್ಮೇಶ್ ಬ್ಯಾಂಕ್’ ಹಗರಣ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಮುಳುಗಿದ ಪ್ರಕರಣಜನರ ಮನಸ್ಸಿನಿಂದ ಮಾಸುವ ಮುನ್ನವೇ, ಈಗ ಮತ್ತೊಂದು ಬೃಹತ್ ವಂಚನೆ ಸೃಷ್ಟಿಯಾಗಿದೆ.
ಜಿಲ್ಲೆಯ ಜನರ ಒಂದು ಬಹುದೊಡ್ಡ ವಿಶೇಷತೆ ಎಂದರೆ ಇವರು ಯಾರನ್ನಾದರೂ ಸುಲಭವಾಗಿ ನಂಬುವ ಇವರ ಗುಣವನ್ನೇ ವಂಚಕರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿಸುವ/ಮರುಳು ಮಾಡುವ ಈ ವಂಚಕರು ಸೂಟು-ಬೂಟು ಧರಿಸಿ, ದೊಡ್ಡ ಕಚೇರಿ ತೆರೆದು ಬಣ್ಣಬಣ್ಣದ ಮಾತುಗಳನ್ನಾಡಿ ಜನರ ಮನಸ್ಥಿತಿಯೊಂದಿಗೆ ಆಟವಾಡುತ್ತಿದ್ದಾರೆ. ಪರಿಣಾಮವಾಗಿ, ದಿನನಿತ್ಯ ಇಂತಹ ಮೋಸದ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಲೇ ಇವೆ.
ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಒಂದೇ ತಿಂಗಳಲ್ಲಿ ಶೇ. 20% ರಷ್ಟು ಲಾಭ ₹1 ಲಕ್ಷಕ್ಕೆ ₹20,000 ಲಾಭಾಂಶ ನೀಡುತ್ತೇವೆ ಎಂದಾಗ ಇಂತಹ ಆಫರ್ ಬಂದ ತಕ್ಷಣ ಅದು ವಂಚನೆ ಎಂದು ತಿಳಿಯಿರಿ.
ಯಾವುದೇ ಖಾಸಗಿ ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಡೆಪಾಸಿಟ್ ಇಡುವ ಮುನ್ನ ಅಥವಾ ಮನೆಯಿಂದಲೇ ಕೆಲಸ ದ ಸೆಕ್ಯೂರಿಟಿ ಡೆಪಾಸಿಟ್ ನೀಡುವ ಮುನ್ನ ಆ ಸಂಸ್ಥೆಗೆ RBI, SEBI ಅಥವಾ ಸರ್ಕಾರದ ಮಾನ್ಯತೆ ಇದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ.
ಅಪರಿಚಿತ ಸಂಸ್ಥೆಗಳು ತಾವಾಗಿಯೇ ಬಂದು ಕೊಡುವ ಆಮಿಷಗಳ ಹಿಂದೆ ದೊಡ್ಡ ಜಾಲವಿರುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಇಂತಹ ನಕಲಿ ಕಂಪನಿಗಳಿಗೆ ಕೊಟ್ಟು ಮೋಸಹೋಗಬೇಡಿ.
ಪೊಲೀಸರು ಮತ್ತು ಆಡಳಿತ ಯಂತ್ರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಲೆಮರೆಸಿಕೊಂಡಿರುವ SLV ಮಹಿಳಾ ಮಾರ್ಟ್ನ ಮಾಲೀಕರನ್ನು ಬಂಧಿಸಿ ಬಡ ಮಹಿಳೆಯರಿಗೆ ನಿಜವಾಗಲೂ ನ್ಯಾಯ ಕೊಡಿಸಬೇಕಿದೆ. ಮತ್ತು ಇಂಥ ಪ್ರಕರಣಗಳು ಮತ್ತೆ ಘಟಿಸಿದಂತೆ ಎಲ್ಲಾರು ಎಚ್ಚರ ವಹಿಸಬೇಕಾಗಿದೆ.