Home ಸುದ್ದಿ ಗಂಗಾವತಿ: ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ಆರೋಪ; ಕಂದಮ್ಮನ ಕಳೆದುಕೊಂಡ ತಾಯಿಯ ರೋದನ, ಆಸ್ಪತ್ರೆ ಎದುರು ಧರಣಿ.
ಸುದ್ದಿ

ಗಂಗಾವತಿ: ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ಆರೋಪ; ಕಂದಮ್ಮನ ಕಳೆದುಕೊಂಡ ತಾಯಿಯ ರೋದನ, ಆಸ್ಪತ್ರೆ ಎದುರು ಧರಣಿ.

Share
Share

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಇಲ್ಲಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಚಿಕಿತ್ಸೆಯಿಂದಾಗಿ ಎಂಟು ತಿಂಗಳ ಹಸುಗೂಸು ಸಾವನ್ನಪ್ಪಿದೆ ಎಂದು ಆರೋಪಿಸಿ, ಮಗುವಿನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆ ಎದುರು ಧರಣಿ ನಡೆಸಿದ ಮನಕಲಕುವ ಘಟನೆ ಮಂಗಳವಾರ ನಡೆದಿದೆ. ಹುಷಾರಿಲ್ಲವೆಂದು ಕರೆತಂದ ಮಗು ಆಸ್ಪತ್ರೆಯಲ್ಲೇ ಶವವಾಗಿ ಮಾರ್ಪಟ್ಟಿದ್ದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ನಗರದ ಅಂಬೇಡ್ಕರ್ ನಗರ ನಿವಾಸಿ ಮುರ್ತುಜಾ ಅವರ ಪತ್ನಿ ಆಸ್ಮಾ ಎಂಬುವವರು ತಮ್ಮ 8 ತಿಂಗಳ ಪುತ್ರ ಮೊಹಮ್ಮದ್ ಅಮಾನ್ ಜ್ವರದಿಂದ ಬಳಲುತ್ತಿದ್ದ ಕಾರಣ ಸೆಪ್ಟೆಂಬರ್ 7ರಂದು ಬೆಳಿಗ್ಗೆ ಗಂಗಾವತಿಯ 60 ಹಾಸಿಗೆಗಳ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರಕ್ತ ಪರೀಕ್ಷೆ ನಡೆಸಿ ವರದಿ ಸಹಜವಾಗಿದೆ ಎಂದು ತಿಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಒಂದು ದಿನ ನಿಗಾದಲ್ಲಿ ಇರಿಸಲು ಸೂಚಿಸಿದ್ದರು. ರಾತ್ರಿಯಿಡೀ ಮಗು ನಗುನಗುತ್ತಾ ಚುರುಕಾಗಿಯೇ ಇತ್ತು ಎಂದು ಪಾಲಕರು ತಿಳಿಸಿದ್ದಾರೆ.
ಆದರೆ ಸೆಪ್ಟೆಂಬರ್ 8ರ ಮುಂಜಾನೆ ಸುಮಾರು 6:00 ಗಂಟೆಗೆ ಆಸ್ಪತ್ರೆಯ ಶುಶ್ರೂಷಕಿ (ನರ್ಸ್) ಇಂಜೆಕ್ಷನ್ ನೀಡಲು ಬಂದಿದ್ದಾರೆ. ಮೊದಲ ಇಂಜೆಕ್ಷನ್ ನೀಡಿದಾಗ ಮಗು ಸಾಮಾನ್ಯವಾಗಿಯೇ ಇತ್ತು. ಆದರೆ ಬೆನ್ನಲ್ಲೇ ಮತ್ತೊಂದು ಇಂಜೆಕ್ಷನ್ ನೀಡಿದ ತಕ್ಷಣವೇ ಕಂದಮ್ಮ ಅಲುಗಾಡದೆ ಪ್ರಜ್ಞಾಹೀನ ಸ್ಥಿತಿಗೆ ಜಾರಿದೆ. ಗಾಬರಿಗೊಂಡ ತಾಯಿ ಏನೆಂದು ಪ್ರಶ್ನಿಸಿದಾಗ, “ಮಗುವನ್ನು ವಾರ್ಡ್‌ಗೆ ಕರೆದುಕೊಂಡು ಹೋಗಿ ಮಲಗಿಸಿ, ಏನೂ ಆಗಿಲ್ಲ” ಎಂದು ಸಿಬ್ಬಂದಿ ಉಡಾಫೆಯಾಗಿ ಸಾಗಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದೆ ಉಸಿರಾಟದಲ್ಲಿ ವ್ಯತ್ಯಾಸ ಕಂಡುಬಂದಾಗ ಗಾಬರಿಗೊಂಡ ಪೋಷಕರು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಮಗುವನ್ನು ತೋರಿಸಿದ್ದಾರೆ. ಆದರೆ ಸಿಬ್ಬಂದಿ ಯಾವುದೇ ಸ್ಪಷ್ಟ ಮಾಹಿತಿ ನೀಡದೆ ನಿಷ್ಕಾಳಜಿ ವಹಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಪಾಲಕರು ಬೆಳಿಗ್ಗೆ 8:30ರ ಸುಮಾರಿಗೆ ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿನ ವೈದ್ಯರು ಪರೀಕ್ಷಿಸಿ ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ತಂದಾಗ ಲವಲವಿಕೆಯಿಂದ ಆಟವಾಡುತ್ತಿದ್ದ ಮಗು, ನರ್ಸ್ ನೀಡಿದ ಆ ಒಂದು ತಪ್ಪಾದ ಅಥವಾ ಅತಿಯಾದ ಇಂಜೆಕ್ಷನ್‌ನಿಂದಲೇ ಕ್ಷಣಾರ್ಧದಲ್ಲಿ ಪ್ರಾಣಬಿಟ್ಟಿದೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮಗುವಿನ ಸಾವಿಗೆ ನೇರ ಕಾರಣರಾದ ಕರ್ತವ್ಯಲೋಪವೆಸಗಿದ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕುಟುಂಬದವರು ಹಾಗೂ ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಮೃತದೇಹದೊಂದಿಗೆ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು.
ಘಟನೆಗೆ ಸಂಬಂಧಿಸಿದಂತೆ ತಾಯಿ ಆಸ್ಮಾ ಅವರು ಗಂಗಾವತಿ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಅಸ್ವಾಭಾವಿಕ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಮಧ್ಯಪ್ರವೇಶಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ, ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಮತ್ತು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...