Home ಸುದ್ದಿ ರೆಡ್ಡಿ, ತಂಗಡಗಿ ಇಬ್ಬರೂ ರಾಜೀನಾಮೆ ನೀಡಿ ಮರುಸ್ಪರ್ಧಿಸಿ ಶಕ್ತಿ ಪ್ರದರ್ಶಿಸಲಿ: ಬಸವರಾಜ ಮ್ಯಾಗಳಮನಿ ಸವಾಲು.
ಸುದ್ದಿ

ರೆಡ್ಡಿ, ತಂಗಡಗಿ ಇಬ್ಬರೂ ರಾಜೀನಾಮೆ ನೀಡಿ ಮರುಸ್ಪರ್ಧಿಸಿ ಶಕ್ತಿ ಪ್ರದರ್ಶಿಸಲಿ: ಬಸವರಾಜ ಮ್ಯಾಗಳಮನಿ ಸವಾಲು.

Share
Share
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಯ ವೇಳೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಚಿವ ಶಿವರಾಜ ತಂಗಡಗಿ ಕುರಿತು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. “ತಂಗಡಗಿ ಮೊದಲ ಬಾರಿ ಶಾಸಕರಾಗಲು ಹಣ ನೀಡಿ ಗೆಲ್ಲಿಸಿದ್ದು, ಮಂತ್ರಿ ಮಾಡಿದ್ದು ನಾನೇ” ಎಂದು ರೆಡ್ಡಿ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ, ಅಂದು ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧವೇ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದನ್ನು ಸ್ವತಃ ಸಾಬೀತುಪಡಿಸಿಕೊಂಡಿದ್ದಾರೆ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿಂದೆ ಕೆಆರ್‌ಪಿಪಿ ಪಕ್ಷ ಕಟ್ಟಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದ ಜನಾರ್ದನ ರೆಡ್ಡಿ, ಈಗ “ಬಿಜೆಪಿ ನನ್ನ ರಕ್ತದ ಕಣಕಣದಲ್ಲೂ ಹರಿಯುತ್ತಿದೆ” ಎಂದು ಸುಳ್ಳು ಹೇಳುತ್ತಾ ಹೈಕಮಾಂಡ್ ಮೆಚ್ಚಿಸಲು ಬಣ್ಣದ ಮಾತುಗಳನ್ನಾಡುತ್ತಿದ್ದಾರೆ ಎಂದು ಮ್ಯಾಗಳಮನಿ ವ್ಯಂಗ್ಯವಾಡಿದ್ದಾರೆ. ರೆಡ್ಡಿಯವರು ಹೇಳಿದಂತೆ ತಂಗಡಗಿಯವರಿಗೆ ಎಷ್ಟು ಕೋಟಿ ಹಣ ನೀಡಿದ್ದಾರೆ ಎಂಬ ಸತ್ಯಾಂಶವನ್ನು ಪತ್ರಿಕಾ ಮುಖಾಂತರ ಸಾರ್ವಜನಿಕರೆದುರು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಶಾಸಕ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ ನೆಲೆಸದೆ, ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವಾಗಿದ್ದು, ಜನತೆ ಶಾಸಕರ ನಡವಳಿಕೆಗೆ ಬೇಸತ್ತು ಶಪಿಸುತ್ತಿದ್ದಾರೆ. ಮತ್ತೊಂದೆಡೆ, ಶಿವರಾಜ ತಂಗಡಗಿ ಎಷ್ಟು ಬಾರಿ ಗೆದ್ದಿದ್ದಾರೋ ಅಷ್ಟು ಬಾರಿಯೂ ಮಂತ್ರಿಯಾಗಿದ್ದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಅಧಿಕಾರದ ಮದದಲ್ಲಿ ತೇಲುತ್ತಿರುವ ಜನಪ್ರತಿನಿಧಿಗಳ ಧೋರಣೆಯಿಂದ ಕ್ಷೇತ್ರದ ಮತದಾರರು ರೋಸಿಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಸಂಘಟನೆಯ ವತಿಯಿಂದ ಕ್ಷೇತ್ರದ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಇಬ್ಬರೂ ನಾಯಕರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರೂ ಮೂಲತಃ ಈ ಜಿಲ್ಲೆಯವರಲ್ಲದಿದ್ದರೂ ಕ್ಷೇತ್ರದ ಜನತೆ ಪ್ರೀತಿಯಿಂದ ಆಶೀರ್ವದಿಸಿ ಗೆಲ್ಲಿಸಿದ್ದಾರೆ. ಆದರೆ, ಜನರ ಋಣ ತೀರಿಸುವ ಅಭಿವೃದ್ಧಿಯ ಇಚ್ಛಾಶಕ್ತಿ ಇಬ್ಬರಲ್ಲೂ ಸಂಪೂರ್ಣವಾಗಿ ಕೊರತೆಯಾಗಿದೆ ಎಂದು ಮ್ಯಾಗಳಮನಿ ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜನತೆ ಮಳೆ-ಬೆಳೆ ಇಲ್ಲದೆ, ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಅಕ್ಷರಶಃ ಬೆಂದು ಹೋಗಿದ್ದಾರೆ. ಜನಸಾಮಾನ್ಯರಿಗೆ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಮಾಡಬೇಕಾದ ಹೊಣೆಗಾರಿಕೆಯನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮರೆತಿದೆ. ಇತ್ತ ವಿರೋಧ ಪಕ್ಷವಾದ ಬಿಜೆಪಿ, ಸರ್ಕಾರದ ವೈಫಲ್ಯಗಳ ವಿರುದ್ಧ ರಚನಾತ್ಮಕ ಹೋರಾಟ ರೂಪಿಸುವುದನ್ನು ಬಿಟ್ಟು, ಪಾದಯಾತ್ರೆಯ ಹೆಸರಿನಲ್ಲಿ ಕೇವಲ ವೈಯಕ್ತಿಕ ಕೀಳುಮಟ್ಟದ ನಿಂದನೆ, ಕೆಸರೆರಚಾಟದಲ್ಲಿ ಕಾಲಹರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಉ ಕುಮಾರನಂತೆ ಬರೀ ಬೊಗಳೆ ಬಿಡುವುದನ್ನು ಮತ್ತು ಜಂಭ ಕೊಚ್ಚಿಕೊಳ್ಳುವುದನ್ನು ನಾಯಕರು ಮೊದಲು ನಿಲ್ಲಿಸಬೇಕು. ಕ್ಷೇತ್ರದ ಮತದಾರರ ಅಪೇಕ್ಷೆಯಂತೆ, ಗಾಲಿ ಜನಾರ್ದನ ರೆಡ್ಡಿ ಹಾಗೂ ಸಚಿವ ಶಿವರಾಜ ತಂಗಡಗಿ ಇಬ್ಬರೂ ತಮ್ಮ ಶಾಸಕ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ಸಲ್ಲಿಸಲಿ. ಧೈರ್ಯವಿದ್ದರೆ ಮತ್ತೊಮ್ಮೆ ಜನತಾ ನ್ಯಾಯಾಲಯದ ಮುಂದೆ ಬಂದು ಸ್ಪರ್ಧಿಸಿ ತಮ್ಮ ನಿಜವಾದ ಶಕ್ತಿ-ಸಾಮರ್ಥ್ಯವನ್ನು ಸಾಬೀತುಪಡಿಸಲಿ ಎಂದು ಬಸವರಾಜ ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ನೇರ ಸವಾಲು ಹಾಕಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...