ಮರ್ಚೆಡ್ ಡೇಸ್ ಸುದ್ದಿ| ಗಂಗಾವತಿ.
ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಯಲ್ಲಿ ಕಚೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಎಚ್.ಜಿ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕರ್ತವ್ಯನಿರತ ಅಧಿಕಾರಿಯೊಬ್ಬರು ಈ ರೀತಿಯ ದುಡುಕಿನ ನಿರ್ಧಾರಕ್ಕೆ ಮುಂದಾಗಿರುವುದು ಇಲಾಖೆಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವಡ್ಡರಹಟ್ಟಿ ಹಾಗೂ ಆರಾಳ ಗ್ರಾಮಗಳ ಮಧ್ಯೆ ಹಾದುಹೋಗುವ ತುಂಗಭದ್ರಾ ಎಡದಂಡೆ ಕಾಲುವೆಯ ದಂಡೆಯ ಬಳಿ ಮಂಜುನಾಥ್ ಅವರ ಸ್ಕೂಟರ್ ಪತ್ತೆಯಾಗಿದೆ. ಸ್ಕೂಟರ್ ಕಾಲುವೆ ದಂಡೆಯ ಮೇಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಅವರು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಇನ್ನು ಮಂಜುನಾಥ್ ಅವರು ಕಾಲುವೆಗೆ ತೆರಳುವ ಮುನ್ನ ತಮ್ಮ ಮನೆಯಲ್ಲೇ ಡೆತ್ನೋಟ್ ಬರೆದಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಡೆತ್ನೋಟ್ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಿಂದ ತಮಗೆ ತೀವ್ರ ಕಿರುಕುಳವಾಗುತ್ತಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹಾಗೂ ಸಂಬಂಧಪಟ್ಟ ರಕ್ಷಣಾ ಸಿಬ್ಬಂದಿ, ಕಾಲುವೆಯ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆಯಿರುವ ಮೃತದೇಹದ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಚೇರಿಯ ಅಧಿಕಾರಿಗಳ ಕಿರುಕುಳದ ಆರೋಪದ ಕುರಿತಾಗಿಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.