Home ಸುದ್ದಿ 55ರ ವಯಸ್ಸಿನಲ್ಲೂ 50ನೇ ಬಾರಿ ರಕ್ತದಾನ: ಇತರರಿಗೆ ಮಾದರಿಯಾದ ಶ್ರೀರಾಮನಗರದ ರವಿಕುಮಾರ್.
ಸುದ್ದಿ

55ರ ವಯಸ್ಸಿನಲ್ಲೂ 50ನೇ ಬಾರಿ ರಕ್ತದಾನ: ಇತರರಿಗೆ ಮಾದರಿಯಾದ ಶ್ರೀರಾಮನಗರದ ರವಿಕುಮಾರ್.

Share
Share
ಮರ್ಚೆಡ್ ಡೇಸ್ ಸುದ್ದಿ.|ಗಂಗಾವತಿ.

ಗಂಗಾವತಿ:ತುರ್ತು ಸಂದರ್ಭದಲ್ಲಿರುವ ಗಾಯಾಳುಗಳು, ಗರ್ಭಿಣಿಯರು ಹಾಗೂ ರೋಗಿಗಳಿಗೆ ಒಮ್ಮೆ ರಕ್ತದಾನ ಮಾಡಲು ಯುವಜನತೆ ಹಿಂದೇಟು ಹಾಕುವ ಇಂದಿನ ಕಾಲದಲ್ಲಿ, ಇಲ್ಲೊಬ್ಬರು 55ರ ವಯಸ್ಸಿನಲ್ಲೂ ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ನಿವಾಸಿ ರವಿಕುಮಾರ್ ಎಂ.ಜೆ. ಅವರು ಬರೋಬ್ಬರಿ 50ನೇ ಬಾರಿಗೆ ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ಥಳೀಯ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಬಂಡ್ರಾಳ್ ಗ್ರಾಮದ ಮಧು ಎಂಬ ಯುವತಿಗೆ ತುರ್ತಾಗಿ ರಕ್ತದ ಅಗತ್ಯವಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ರವಿಕುಮಾರ್ ಅವರು ರಕ್ತದಾನ ಮಾಡುವ ಮೂಲಕ ಯುವತಿಯ ಜೀವ ಉಳಿಸಲು ನೆರವಾದರು.

ರವಿಕುಮಾರ್ ಅವರ ಈ ರಕ್ತದಾನ ಪಯಣದ ಹಿಂದೆ ಹೃದಯಸ್ಪರ್ಶಿ ಕಥೆಯಿದೆ. 1992ರಲ್ಲಿ ತಂದೆಯ ಅಕಾಲಿಕ ನಿಧನದಿಂದಾಗಿ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. 1993ರ ಸುಮಾರಿಗೆ ಪರಿಚಿತರೊಬ್ಬರು ‘ರಕ್ತ ಕೊಟ್ಟರೆ 150 ರೂಪಾಯಿ ಸಿಗುತ್ತದೆ’ ಎಂದು ಸಲಹೆ ನೀಡಿದ್ದರು. ಅಂದಿನ ಕಾಲಕ್ಕೆ 150 ರೂಪಾಯಿ ದೊಡ್ಡ ಮೊತ್ತವಾಗಿದ್ದರಿಂದ, ಕಷ್ಟ ಪರಿಹರಿಸಿಕೊಳ್ಳಲು ಬಳ್ಳಾರಿಯ ವಿಮ್ಸ್ (ಅಂದಿನ ಒಪಿಡಿ) ಆಸ್ಪತ್ರೆಗೆ ತೆರಳಿ ಮೊದಲ ಬಾರಿಗೆ ರಕ್ತ ನೀಡಿದ್ದರು.

ರಕ್ತದಾನದ ನಂತರ ಹಣ ಪಡೆಯಲು ರೋಗಿಯ ಬಳಿ ಹೋದಾಗ, ಆ ಕುಟುಂಬವು ತಮಗಿಂತಲೂ ದಟ್ಟ ದಾರಿದ್ರ್ಯ ಮತ್ತು ಕಡುಬಡತನದಲ್ಲಿರುವುದನ್ನು ಕಂಡರು. ತಾನು ನೀಡಿದ ರಕ್ತದಿಂದ ಆ ಜೀವ ಉಳಿದಿದ್ದನ್ನು ಕಂಡು ರವಿಕುಮಾರ್ ಅವರ ಮನಸ್ಸು ಕರಗಿತು. ಅಂದೇ ಹಣಕ್ಕಾಗಿ ರಕ್ತ ಮಾರಾಟ ಮಾಡಬಾರದು ಎಂದು ಸಂಕಲ್ಪ ತೊಟ್ಟ ಅವರು, ತಂದೆಯ ಸ್ಮರಣಾರ್ಥ ಉಚಿತ ರಕ್ತದಾನ ಸೇವೆ ಆರಂಭಿಸಿದರು. ಕಳೆದ 33 ವರ್ಷಗಳಿಂದ ನಿರಂತರವಾಗಿ ಈ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

“ಕಳೆದ ಮೂರು ದಶಕಗಳಿಂದ ವರ್ಷಕ್ಕೆ ಒಂದು, ಎರಡು ಅಥವಾ ಮೂರು ಬಾರಿ ರಕ್ತದಾನ ಮಾಡುತ್ತಾ ಬಂದಿದ್ದೇನೆ. ನಿರಂತರ ರಕ್ತದಾನದಿಂದಾಗಿ ನನಗೆ 55ರ ವಯಸ್ಸಿನಲ್ಲೂ ರಕ್ತದೊತ್ತಡ (ಬಿಪಿ) ಅಥವಾ ಸಕ್ಕರೆ ಕಾಯಿಲೆಯಂತಹ (ಶುಗರ್) ಯಾವುದೇ ಆರೋಗ್ಯ ಸಮಸ್ಯೆಗಳು ಬಂದಿಲ್ಲ. ವರ್ಷಕ್ಕೆ ಒಂದೆರಡು ಬಾರಿ ರಕ್ತದಾನ ಮಾಡುವುದು ಸ್ವಂತ ಆರೋಗ್ಯಕ್ಕೂ ಅತ್ಯಂತ ಹಿತಕರ” ಎಂದು ರವಿಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಮ್ಮ ಈ 50ನೇ ರಕ್ತದಾನದ ಸಾಧನೆಗೆ ಸ್ನೇಹಿತರು ಹಾಗೂ ರಕ್ತದಾನಿಗಳ ಬಳಗದ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...