

ಮರ್ಚೆಡ್ ಡೇಸ್ ವಿಶೇಷ ವರದಿ.
ಗಂಗಾವತಿ: ಭತ್ತದ ನಾಡು, ಅಂಜನಾದ್ರಿಯ ಪುಣ್ಯಭೂಮಿ, ತುಂಗಭದ್ರೆಯ ಮಡಿಲಲ್ಲಿರುವ ಗಂಗಾವತಿ ನಗರದ ಸಾಂಸ್ಕೃತಿಕ ಲೋಕದ ಅವಿಭಾಜ್ಯ ಅಂಗವಾಗಿದ್ದ ಐತಿಹಾಸಿಕ ‘ಜೂನಿಯರ್ ಕಾಲೇಜು ಗ್ರೌಂಡ್ ಬೈಲು ರಂಗಮಂದಿರ’ ಇಂದು ಇತಿಹಾಸದ ಪುಟ ಸೇರಿದೆ. ದಶಕಗಳ ಕಾಲ ನಾಟಕ, ಬಯಲಾಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ಈ ತಾಣ, ಇಂದು ಜೆಸಿಬಿ ಯಂತ್ರದ ಅಬ್ಬರದೊಂದಿಗೆ ಧರೆಗುರುಳಿದೆ.
ನಗರದ ಹಿರಿಯ ಸಾಂಸ್ಕೃತಿಕ ಕಲಾಭಿಮಾನಿಗಳ ಪಾಲಿಗೆ ಈ ಬೈಲು ರಂಗಮಂದಿರ ಕೇವಲ ಕಲ್ಲು-ಮಣ್ಣಿನ ಕಟ್ಟಡವಾಗಿರಲಿಲ್ಲ; ಅದೊಂದು ಭಾವನೆ. ಅಂದಿನ ಕಾಲದ ಪ್ರಸಿದ್ಧ ನೀನಾಸಂ ನಾಟಕಗಳು, ಸಾಣೆಹಳ್ಳಿ ರೆಪರ್ಟರಿಯ ‘ತಿರುಘಾಟ’ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಕಲಾವಿದರ ಅಸಂಖ್ಯಾತ ಬಯಲಾಟಗಳಿಗೆ ಈ ವೇದಿಕೆ ಸಾಕ್ಷಿಯಾಗಿತ್ತು. ಇಲ್ಲಿನ ಪ್ರತಿಯೊಂದು ಕಲ್ಲುಗಳಿಗೂ ಒಂದು ಕಥೆ ಇದೆ ಎಂದು ನೆರೆದಿದ್ದ ಹಿರಿಯರು ಭಾವುಕರಾಗಿ ಗತವೈಭವವನ್ನು ನೆನಪಿಸಿಕೊಂಡರು.
ಕಾಲಚಕ್ರದ ಉರುಳಿದಂತೆ, ನಿರ್ವಹಣೆಯ ಕೊರತೆಯಿಂದಾಗಿ ಈ ಸಾಂಸ್ಕೃತಿಕ ತಾಣ ಕ್ರಮೇಣ ಅನಾಥವಾಗಿತ್ತು. ಕಸದ ರಾಶಿ, ಮದ್ಯಪಾನೀಯಗಳ ಬಾಟಲಿಗಳು, ಕೊಳೆತ ಹಣ್ಣುಗಳ ರಾಶಿ ಮತ್ತು ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದ್ದ ಈ ಜಾಗ, ಸಮಾಜಘಾತುಕ ಚಟುವಟಿಕೆಗಳ ಅಡ್ಡೆಯಾಗಿ
ಆತಂಕವನ್ನು ಹುಟ್ಟುಹಾಕಿತ್ತು. ಒಂದು ಕಾಲದ ಸಾಂಸ್ಕೃತಿಕ ದೇಗುಲವು ಈ ಸ್ಥಿತಿಗೆ ತಲುಪಿದ್ದು ಸಾರ್ವಜನಿಕರಲ್ಲಿ ತೀವ್ರ ನೋವನ್ನು ಉಂಟುಮಾಡಿತ್ತು.
ಬೈಲು ರಂಗಮಂದಿರದ ನೆಲಸಮದ ದೃಶ್ಯವನ್ನು ಕಂಡು ಅನೇಕರು ಭಾವುಕರಾದರಾದರೂ, ವಾಸ್ತವದ ಅರಿವಿರುವ ಸಾರ್ವಜನಿಕರು ಈ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. “ಇಲ್ಲಿ ನಡೆಯುತ್ತಿದ್ದ ಅನಿಷ್ಟ ಚಟುವಟಿಕೆಗಳಿಗಿಂತ, ಈ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಜ್ಜುಗೊಳಿಸುವುದು ಉತ್ತಮ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಜಾಗವನ್ನು ಫುಟ್ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಗತಕಾಲದ ಸಾಂಸ್ಕೃತಿಕ ಕಲೆಗಳ ನೆನಪು ಮಾಯವಾದರೂ, ಈ ಸ್ಥಳವು ಇನ್ನು ಮುಂದೆ ನಗರದ ಜನಸಾಮಾನ್ಯರ ಬದುಕಿಗೆ ಆಸರೆಯಾಗಲಿ ಎಂಬುದು ಗಂಗಾವತಿ ನಾಗರಿಕರ ಆಶಯವಾಗಿದೆ.