

ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ: ನಗರದಾದ್ಯಂತ ಕತ್ತಲನ್ನು ಹೋಗಲಾಡಿಸಿ ಬೆಳಕು ನೀಡಬೇಕಾದ ಬೀದಿದೀಪಗಳ ನಿರ್ವಹಣಾ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಕಗ್ಗತ್ತಲು ಆವರಿಸಿದೆ. ಗಂಗಾವತಿ ನಗರಸಭೆಯ ಬೀದಿದೀಪಗಳ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ, ನಿಯಮಗಳ ಸ್ಪಷ್ಟ ಉಲ್ಲಂಘನೆ ಹಾಗೂ ಕಾರ್ಮಿಕರ ಅಮಾನವೀಯ ಶೋಷಣೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯ ಕೇಳಿಬಂದಿದೆ.
ಕಳೆದ ಏಳು ವರ್ಷಗಳಿಂದ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ‘ಶ್ರೀ ಎಂಟರ್ಪ್ರೈಸಸ್’ ಸಂಸ್ಥೆಯು ಪ್ರಭಾವಿಗಳಿಗೆ ಕಾನೂನುಬಾಹಿರವಾಗಿ ಒಳ-ಗುತ್ತಿಗೆ (ಸಬ್-ಲೆಟಿಂಗ್) ನೀಡಿದೆ ಎಂದು ಆರೋಪಿಸಲಾಗಿದೆ. ಟೆಂಡರ್ ಪಡೆದ ಸಂಸ್ಥೆಯ ಬಳಿ ಕಡ್ಡಾಯವಾಗಿ ಇರಬೇಕಾದ ಲೇಬರ್ ಲೈಸೆನ್ಸ್ ಕೂಡ ಇಲ್ಲದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ, ಪಿಎಫ್ (PF) ಹಾಗೂ ಇಎಸ್ಐ (ESI) ಸೌಲಭ್ಯಗಳನ್ನು ಗುತ್ತಿಗೆದಾರರು ನುಂಗಿ ಹಾಕಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಪ್ರಾಣದ ಹಂಗು ತೊರೆದು ಕಂಬ ಹತ್ತುವ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕಿಟ್ಗಳನ್ನು ನೀಡದೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಸಂಘದ ರಾಜ್ಯ ಕಾರ್ಯದರ್ಶಿ ರಾಜಾಸಾಬ್ ಹೊಸಪೇಟೆ ಅವರ ವೇತನ ತಡೆಹಿಡಿದು ವಜಾಗೊಳಿಸಿದ ಬೆನ್ನಲ್ಲೇ, ಅವರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ.
2026–27ನೇ ಸಾಲಿನ ಹೊಸ ಟೆಂಡರ್ ಪ್ರಕ್ರಿಯೆಯಲ್ಲೂ ಹಳೆ ಗುತ್ತಿಗೆದಾರರೇ ಪರೋಕ್ಷವಾಗಿ ಭಾಗಿಯಾಗಿದ್ದು, ಇಲ್ಲಿಯೂ ಭಾರಿ ಅಕ್ರಮಕ್ಕೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಗರಸಭೆಯ ಹೊಸ ಎಲ್ಇಡಿ ದೀಪಗಳ ಬಳಕೆ ಹಾಗೂ ಸಾಮಗ್ರಿಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಹಳೆಯ ಸಾಮಗ್ರಿಗಳನ್ನು ಉಗ್ರಾಣಕ್ಕೆ ಮರಳಿಸದೆ ಕಾಟಾಚಾರಕ್ಕೆ ಲೆಕ್ಕ ತೋರಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಅಕ್ರಮಗಳ ವಿರುದ್ಧ ಉತ್ತರ ಕರ್ನಾಟಕ ಯುವ ವೇದಿಕೆ ಧ್ವನಿ ಎತ್ತಿದ್ದು, ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಚ್ಚಿಬಿದ್ದ ಗುತ್ತಿಗೆದಾರರು, ಕಳಪೆ ಗುಣಮಟ್ಟದ ಸುರಕ್ಷತಾ ಕಿಟ್ಗಳನ್ನು ಕಾರ್ಮಿಕರಿಗೆ ವಿತರಿಸಿದ್ದಾರೆ. ಇದಲ್ಲದೆ, ನೂತನ ಟೆಂಡರ್ನಲ್ಲಿ “ಕಾರ್ಮಿಕರಿಗೂ ನಗರಸಭೆಗೂ ಯಾವುದೇ ಸಂಬಂಧವಿರುವುದಿಲ್ಲ” ಎಂಬ ವಿಚಿತ್ರ ಷರತ್ತು ಸೇರಿಸುವ ಮೂಲಕ ನಗರಸಭೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದೆ ಎಂದು ಸಂಘಟನೆ ಕಿಡಿಕಾರಿದೆ.
ಈ ಭ್ರಷ್ಟಾಚಾರದ ಕಗ್ಗತ್ತಲನ್ನು ಹೋಗಲಾಡಿಸಲು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ನಗರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ಸರ್ಕಾರ ತಕ್ಷಣವೇ ರಚಿಸಬೇಕು ಎಂದು ರಾಜಾಸಾಬ್ ಹೊಸಪೇಟೆ ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.