ಮರ್ಚೇಡ್ ಡೇಸ್ ಸುದ್ದಿ.
ರಾಯಚೂರು: ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 34 ವರ್ಷಗಳ ಸುದೀರ್ಘ ಹಾಗೂ ನಿಷ್ಕಳಂಕ ಸೇವೆ ಸಲ್ಲಿಸಿ, ಪೊಲೀಸ್ ಕಾಲೋನಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾಗಿ ನಿವೃತ್ತರಾದ ಮಂಜುನಾಥ ಐಲಿ ಅವರಿಗೆ, ಕೆಇಬಿ ಪ್ರೌಢಶಾಲೆ ಹತ್ತಿರವಿರುವ ಸ್ಕೌಟ್ ಅಂಡ್ ಗೈಡ್ಸ್ ಭವನದಲ್ಲಿ ಅದ್ದೂರಿ ಹಾಗೂ ಭಾವನಾತ್ಮಕ ವಿದಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ರಾಯಚೂರು ಕೋಟೆ ಅಧ್ಯಯನ ಸಮಿತಿಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು, ಅವರ ಅಪಾರ ವಿದ್ಯಾರ್ಥಿ ಬಳಗ, ಸ್ನೇಹಿತರು ಮತ್ತು ಶಿಕ್ಷಣಾಭಿಮಾನಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆ ಅಧ್ಯಯನ ಸಮಿತಿಯ ಅಧ್ಯಕ್ಷರಾದ ಕೆ. ಸತ್ಯನಾರಾಯಣ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಸಮಿತಿಯ ಗೌರವಾಧ್ಯಕ್ಷರಾದ ಜಯಣ್ಣ ಮತ್ತು ಇತರ ಗಣ್ಯರು ಜಂಟಿಯಾಗಿ ಉದ್ಘಾಟಿಸಿದರು. ಈ ವೇಳೆ ವೇದಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ. ಮಲ್ಲಿಕಾರ್ಜುನ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ನಿರ್ದೇಶಕರಾದ ಡಾ. ಅಮರೇಶ್ ಯಾತಗಲ್, ನಿವೃತ್ತ ನಿರ್ದೇಶಕ ಕೆ. ಶರಣಪ್ಪ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು, ಪ್ರಾಧ್ಯಾಪಕರು, ಸಾಹಿತಿಗಳು ಮತ್ತು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು, ಮಂಜುನಾಥ ಐಲಿ ಅವರ ಸುದೀರ್ಘ ಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಮಂಜುನಾಥ ಐಲಿ ಅವರು ಶಿಕ್ಷಣ ಇಲಾಖೆಗೆ ನೀಡಿದ ಅನುಪಮ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕರಾಗಿ, ಇಲಾಖೆಯ ಪಾಲಿಗೆ ಆದರ್ಶ ಅಧಿಕಾರಿಯಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ, ಉತ್ತಮ ಆರೋಗ್ಯದೊಂದಿಗೆ ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಮಾರ್ಗದರ್ಶನವನ್ನು ಮುಂದುವರಿಸಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸೈಯದ್ ಅಫೀಜುಲ್ಲಾ, ಹೆಚ್. ಹೆಚ್. ಮ್ಯಾದರ್ ಸೇರಿದಂತೆ ಕೋಟೆ ಅಧ್ಯಯನ ಸಮಿತಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡು ಸನ್ಮಾನಿಸಿದರು.
ಸಮಾರಂಭದಲ್ಲಿ ರಮೇಶ್ ಗಬ್ಬೂರು, ನರಸಪ್ಪ ಭಂಡಾರಿ, ಸೋಮಶೇಖರ ಹೊಕ್ರಾಣಿ, ಬಿ. ಜಿ. ಹುಲಿ, ಮಹಾಂತೇಶ ಮಸ್ಕಿ, ವೀರ ಹನುಮಾನ್, ನಾಗೇಂದ್ರಪ್ಪ, ಕುಮಾರ ಐಲಿ ಹಾಗೂ ಡಾ. ಮಂಜುನಾಥ ಕುರುಗೋಡು ವಾಸ್ತುತಜ್ಞರು. ಸೇರಿದಂತೆ ಗಣ್ಯರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಂಜುನಾಥ ಐಲಿ ಅವರ ಸೇವೆಯ ದಿನಗಳನ್ನು ನೆನಪಿಸಿಕೊಂಡ ಹಲವು ಹಳೆಯ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು, ಅವರು ನೀಡಿದ ಮೌಲ್ಯಾಧಾರಿತ ಶಿಕ್ಷಣ ಮತ್ತು ಬೆಂಬಲವನ್ನು ಸ್ಮರಿಸಿ ಭಾವುಕರಾದರು.
ಐತಿಹಾಸಿಕ ವೇದಿಕೆಯಲ್ಲಿ ಅಸಂಖ್ಯಾತ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಈ ಬಿಳ್ಕೊಡುವ ಸಮಾರಂಭವು, ಸಮಾಜದಲ್ಲಿ ಶಿಕ್ಷಕನೊಬ್ಬನಿಗೆ ಸಿಗುವ ಗೌರವ ಮತ್ತು ಪ್ರೀತಿಯ ನಿದರ್ಶನವಾಗಿ ಉಳಿಯಿತು. ಮಂಜುನಾಥ ಐಲಿ ಅವರು ತಮ್ಮ ವೃತ್ತಿ ಜೀವನದ ಪ್ರತಿ ಹಂತದಲ್ಲೂ ತೋರಿದ ಬದ್ಧತೆಯನ್ನು ಇಡೀ ಶಿಕ್ಷಣ ಸಮುದಾಯವೇ ಅಭಿನಂದಿಸಿ, ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಿತು.