Home ಸುದ್ದಿ ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಜೀವ ಸುರಕ್ಷತೆಗೆ ಸೂಕ್ಷ್ಮಜೀವ ವಿಜ್ಞಾನ ಸಹಕಾರಿ: (ಆಂಧ್ರ ಪ್ರದೇಶ) ಶಾಸಕ ಗದ್ದೆ ರಾಮಮೋಹನ್. 
ಸುದ್ದಿ

ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಜೀವ ಸುರಕ್ಷತೆಗೆ ಸೂಕ್ಷ್ಮಜೀವ ವಿಜ್ಞಾನ ಸಹಕಾರಿ: (ಆಂಧ್ರ ಪ್ರದೇಶ) ಶಾಸಕ ಗದ್ದೆ ರಾಮಮೋಹನ್. 

Share
Share

 

ಮರ್ಚೇಡ್ ಡೇಸ್ ಸುದ್ದಿ.

ಕಲಬುರಗಿ: “ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಮಾನವನ ಜೀವದ ಸುರಕ್ಷತೆ ಕಾಪಾಡಲು ಸೂಕ್ಷ್ಮಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಂತ ಸಹಕಾರಿಯಾಗಿದೆ. ಭವಿಷ್ಯದ ಆರೋಗ್ಯಕರ ಪ್ರಪಂಚಕ್ಕಾಗಿ ಕೃಷಿ, ಪರಿಸರ, ವೈದ್ಯಕೀಯ, ಕೈಗಾರಿಕೆ ಮತ್ತು ಔಷಧ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಜೀವರಕ್ಷಣೆಗೆ ನೆರವಾಗಲಿವೆ” ಎಂದು ಆಂಧ್ರಪ್ರದೇಶದ ಶಾಸಕ ಹಾಗೂ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಗದ್ದೆ ರಾಮಮೋಹನ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ವಿಭಾಗದ ಪ್ಯಾಶ್ಚರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸುವರ್ಣ ಮಹೋತ್ಸವ ವರ್ಷಾಚರಣೆ’ ಮತ್ತು ಉತ್ತಮ ನಾಳೆಗಾಗಿ ತಂತ್ರಜ್ಞಾನ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೋವಿಡ್‌ನಂತಹ ವಿಷಮ ಸ್ಥಿತಿಯಲ್ಲಿ ಜಾಗತಿಕ ಆರೋಗ್ಯ ರಕ್ಷಣೆ ದೊಡ್ಡ ಸವಾಲಾಗಿತ್ತು ಎಂದ ಗದ್ದೆ ರಾಮಮೋಹನ್, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಸೋಂಕಿನ ಅರಿವು, ರೋಗದ ಮುನ್ನೆಚ್ಚರಿಕೆ, ನಿಯಂತ್ರಣ, ಲಸಿಕೆ ಹಾಗೂ ಚಿಕಿತ್ಸೆ ಸುಧಾರಣೆ ಬಗ್ಗೆ ಮುಂಜಾಗ್ರತೆ ವಹಿಸುವುದು ಮುಖ್ಯ. ತಂತ್ರಜ್ಞಾನ ಬೆಳೆದಂತೆ ವೈದ್ಯ ವಿಜ್ಞಾನದ ಮುಂದೆ ಹಲವು ಸವಾಲುಗಳು ಎದುರಾಗುತ್ತಿದ್ದು, ವಿದ್ಯಾರ್ಥಿಗಳು ಇತ್ತೀಚಿನ ಪ್ರವೃತ್ತಿ ಮತ್ತು ಪ್ರಯೋಗಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖ ಗಣ್ಯರ ನುಡಿಗಳು

ಪ್ರೊ. ಶಶಿಕಾಂತ ಎಸ್. ಉಡಿಕೇರಿ (ಕುಲಪತಿಗಳು, ಗುಲಬರ್ಗಾ ವಿವಿ):

“ಸುವರ್ಣ ಮಹೋತ್ಸವವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಬೆಸೆಯುವ ಕಾರ್ಯಕ್ರಮವಾಗಿದೆ. ದಿನದಿಂದ ದಿನಕ್ಕೆ ಜನರಲ್ಲಿ ಆರೋಗ್ಯ ಕಾಳಜಿ, ಉತ್ತಮ ಆಹಾರ ಸೇವನೆ ಮತ್ತು ಸಾವಯವ ಪದಾರ್ಥಗಳ ಬಳಕೆ ಬಗ್ಗೆ ಅರಿವು ಮೂಡುತ್ತಿದೆ. ಸೂಕ್ಷ್ಮಜೀವಿಗಳು ಮತ್ತು ಮಾನವನ ಅಂಗಗಳ ಸುರಕ್ಷತೆ, ವೈರಸ್‌ಗಳ ನಿಯಂತ್ರಣದಲ್ಲಿ ನೂತನ ತಂತ್ರಜ್ಞಾನ ಸಹಾಯಕವಾಗಿದೆ.”

ದಯಾನಂದ ಅಗಸರ (ವಿಶ್ರಾಂತ ಕುಲಪತಿಗಳು):

“ಆಧುನಿಕ ಜೀವನ ಶೈಲಿಯಿಂದ ಜೀವ ಸಂಕುಲವನ್ನು ಅನೇಕ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬಾಧಿಸುತ್ತಿವೆ. ಪ್ರಸ್ತುತ ದಿನಗಳಲ್ಲಿ ಮಾನವ ಜೀವರಕ್ಷಣೆ ಮತ್ತು ಭವಿಷ್ಯದ ನಾಳೆಗಾಗಿ ಆಲೋಚಿಸುವ ಅಗತ್ಯವಿದೆ. ವಿಭಾಗದ ಏಳಿಗೆಗೆ ಶ್ರಮಿಸಿರುವ ಎಲ್ಲಾ ತಜ್ಞರ ಕೊಡುಗೆ ಅಪಾರ.”

ಪ್ರೊ. ಎಂ.ಬಿ. ಸುಲೋಚನಾ (ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ):

“ಈ ಸಮ್ಮೇಳನದಲ್ಲಿನ ವಿದ್ವಾಂಸರ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಕಲಿಕೆ ಉತ್ಸಾಹ, ಸಂಶೋಧನೆಯ ಹೊಸ ಪರಿಕಲ್ಪನೆ ಹಾಗೂ ಇತ್ತೀಚಿನ ತಂತ್ರಜ್ಞಾನದ ಅರಿವನ್ನು ಮೂಡಿಸಲು ಮತ್ತು ಕಿರಿಯ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಲಿದೆ.

ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ. ಚಂದ್ರಕಾಂತ್ ಕೆಳಮನಿ ಅತಿಥಿಗಳನ್ನು ಸ್ವಾಗತಿಸಿ ವಿಭಾಗದ ಸಾಧನೆಗಳನ್ನು ಪರಿಚಯಿಸಿ ಸೂಕ್ಷ್ಮಜೀವಶಾಸ್ತ್ರ ವಿಭಾಗವು ಕಳೆದ 50 ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದೆ.

ಇಲ್ಲಿನ ವಿದ್ಯಾರ್ಥಿಗಳು ದೇಶ-ವಿದೇಶಗಳ ಪ್ರಸಿದ್ಧ ಸಂಸ್ಥೆಗಳಲ್ಲಿ ಬೋಧಕರಾಗಿ, ಸಂಶೋಧಕರಾಗಿ, ಕೈಗಾರಿಕೋದ್ಯಮಿಗಳಾಗಿ ಮತ್ತು ಔಷಧ ತಯಾರಿಕೆ ಕಂಪನಿಗಳಲ್ಲಿ ವಿಜ್ಞಾನಿಗಳಾಗಿ ಗುರುತಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಈ ವಿಭಾಗವು ಉತ್ಕೃಷ್ಟ ಸಂಶೋಧನೆ ಮತ್ತು ಶ್ರೇಷ್ಠ ಪ್ರಕಟಣೆಗಳನ್ನು ತಂದಿದೆ.

ಕಾರ್ಯಕ್ರಮದಲ್ಲಿ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆಯನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಿದರು.

ಧಾರವಾಡ ಕೃಷಿ ವಿಜ್ಞಾನ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಸಾವಳಗಿ, ಶ್ರೀಮತಿ ಅನುರಾಧ ಗದ್ದೆ, ಕುಲಸಚಿವ ರಮೇಶ್ ಲಂಡನಕರ್, ಸಿಂಡಿಕೇಟ್ ಸದಸ್ಯ ಪೀರಜಾದೆ ಫಹೀಮುದ್ದೀನ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ. ಲಿಂಗಪ್ಪ ಉಪಸ್ಥಿತರಿದ್ದರು.

ಡಾ. ಯಶವಂತ ಮೆಂಜಿ ಹಾಗೂ ಡಾ. ಮಹೇಶ್ ದಿವಟರ್ ಅತಿಥಿಗಳನ್ನು ಪರಿಚಯಿಸಿದರು. ಹುಜ್ಮಾ ಮತ್ತು ಹುಸ್ನಾ ಕಾರ್ಯಕ್ರಮ ನಿರ್ವಹಿಸಿದರು. ನರ್ಮದಾ ತಳ್ಳೋಳ್ಳಿ ವಂದಿಸಿದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು.

ಈ ಭವ್ಯ ಸುವರ್ಣ ಸಂಭ್ರಮಾಚರಣೆಯಲ್ಲಿ ವಿವಿಧ ಜೀವವಿಜ್ಞಾನ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...