Home ಸುದ್ದಿ ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.
ಸುದ್ದಿ

ಹಾಲುಮತದ ಪುಣ್ಯಕಾಶಿ ಹುಲಜಂತಿಯಲ್ಲಿ ಕಲಿಯುಗದ ಪವಾಡ: ಮಾಳಿಂಗರಾಯನ ಶಿಖರಕ್ಕೆ ಶಿವ-ಪಾರ್ವತಿಯರಿಂದ ರೇಷ್ಮೆ ಮುಂಡಾಸು ಸೇವೆ.

Share
Share

ಮರ್ಚೆಡ್ ಡೇಸ್ ಸುದ್ದಿ|ಹುಲಿಜಂತಿ.

ಹುಲಿಜಂತಿ:ಹಾಲುಮತದ ಶ್ರದ್ಧಾ ಕೇಂದ್ರ ಹುಲಜಂತಿ ಕ್ಷೇತ ಸಮಸ್ತ ಹಾಲುಮತ ಸಂಸ್ಕೃತಿಯ ಆರಾಧ್ಯ ದೈವ ಹಾಗೂ ಭಕ್ತರ ದೈವಿಕ ತಾಣವೆಂದೇ ಖ್ಯಾತಿಗಳಿಸಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಮಂಗಳವೇಢ ತಾಲೂಕಿನ ಹುಲಜಂತಿ ಗ್ರಾಮದ ಶ್ರೀ ಮಾಳಿಂಗರಾಯ ದೇವಸ್ಥಾನವು ಅಪರೂಪದ ಆಧ್ಯಾತ್ಮಿಕ ವೈಭವಕ್ಕೆ ಸಾಕ್ಷಿಯಾಗಿದೆ. ಹಾಲುಮತ ಜನಾಂಗದ ಪುಣ್ಯಕಾಶಿ ಎಂದೇ ಕರೆಯಲ್ಪಡುವ ಈ ಪವಿತ್ರ ಸನ್ನಿಧಿಗೆ ದೀಪಾವಳಿಯ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಧಾವಿಸಿ ಬರುತ್ತಾರೆ.

ಪ್ರತಿವರ್ಷ ದೀಪಾವಳಿ ಅಮಾವಾಸ್ಯೆಯ ಮಧ್ಯರಾತ್ರಿ ನಡೆಯುವ ರೇಷ್ಮೆ ಮುಂಡಾಸು (ರುಮಾಲು) ಕಟ್ಟುವ ಪದ್ಧತಿಯು ಇಡೀ ಭಕ್ತಸಮೂಹವನ್ನು ನಿಬ್ಬೆರಗಾಗಿಸುತ್ತದೆ. ಕತ್ತಲಾವರಿಸಿದ ಮಧ್ಯರಾತ್ರಿಯಲ್ಲಿ ದೇವಸ್ಥಾನದ ಗರ್ಭಗುಡಿಯ ಗೋಪುರದ ಶಿಖರಕ್ಕೆ ನಡೆಯುವ ಈ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಾರೆ.

ಭಕ್ತರ ಅಚಲ ನಂಬಿಕೆ ಮತ್ತು ಪ್ರತೀತಿಯ ಪ್ರಕಾರ, ಪರಮಶಿವ ಹಾಗೂ ಪಾರ್ವತಿ ದೇವಿಯರು ಸ್ವತಃ ಭೂಲೋಕಕ್ಕೆ ಜೋಡಿಯಾಗಿ ಇಳಿದು ಬರುತ್ತಾರೆ. ತಮ್ಮ ಪರಮ ಶಿಷ್ಯನಾದ ಶ್ರೀ ಮಾಳಿಂಗರಾಯನ ಮೇಲಿನ ಪ್ರೀತಿ-ವಾತ್ಸಲ್ಯದಿಂದ, ದೇವಸ್ಥಾನದ ಗರ್ಭಗುಡಿಯ ಗೋಪುರದ ಶಿಖರಕ್ಕೆ ತಾವೇ ಖುದ್ದಾಗಿ ರೇಷ್ಮೆ ಮುಂಡಾಸನ್ನು ಕಟ್ಟಿ ಹರಸುತ್ತಾರೆ ಎಂಬುದು ಇಲ್ಲಿನ ಹಿರಿಯರ ನಂಬಿಕೆಯಾಗಿದೆ.

ಯಾರೂ ಗೋಪುರವನ್ನು ಏರದಿದ್ದರೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಶಿಖರಕ್ಕೆ ನಿಖರವಾಗಿ ಮುಂಡಾಸು ಸುತ್ತಿಕೊಳ್ಳುವುದು ಕಲಿಯುಗದ ಅಚ್ಚರಿಯ ಪವಾಡ ಎಂದೇ ಬಣ್ಣಿಸಲಾಗುತ್ತದೆ. ಈ ಮುಂಡಾಸು ಹೇಗೆ ಮತ್ತು ಯಾರ ನೆರವಿನಿಂದ ಸುತ್ತುತ್ತದೆ ಎಂಬುದು ಇಂದಿಗೂ ಮಾನವನ ಗ್ರಹಿಕೆಗೆ ನಿಲುಕದ ವಿಸ್ಮಯವಾಗಿಯೇ ಉಳಿದಿದೆ.

ಪ್ರಸ್ತುತ ವರ್ಷವೂ ನವೆಂಬರ್ 8 ಮತ್ತು 9ರ ರಾತ್ರಿ ಸರಿಯಾಗಿ 12 ಗಂಟೆಗೆ ಗರ್ಭಗುಡಿಯ ಶಿಖರಕ್ಕೆ ರೇಷ್ಮೆ ಮುಂಡಾಸು ಸುತ್ತಲಾಗಿದ್ದು, ನೆರೆದಿದ್ದ ಸಾವಿರಾರು ಭಕ್ತರಲ್ಲಿ ರೋಮಾಂಚನ ಮೂಡಿಸಿತು. ಈ ದೈವಿಕ ಕ್ಷಣಕ್ಕೆ ಸಾಕ್ಷಿಯಾದ ಭಕ್ತರು ‘ಶ್ರೀ ಮಾಳಿಂಗರಾಯ ಮಹಾರಾಜ್ ಕಿ ಜೈ’ ಎಂಬ ಜಯಘೋಷ ಮೊಳಗಿಸಿ ಭಕ್ತಿಪರವಶರಾದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗಗಳು ಸೇರಿದಂತೆ ದಕ್ಷಿಣ ಭಾರತದ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಅಪಾರ ಭಕ್ತ ಸಮೂಹವು ಈ ವಿಸ್ಮಯವನ್ನು ಕಣ್ತುಂಬಿಕೊಂಡಿತು. ಹಳದಿ ಭಂಡಾರದ ಓಕುಳಿಯೊಂದಿಗೆ ದೇಗುಲದ ಆವರಣವೆಲ್ಲವೂ ಭಕ್ತಿಭಾವದ ಹೊನಲಿನಲ್ಲಿ ಮಿಂದೆದ್ದಿತು.

ತಲೆತಲಾಂತರಗಳಿಂದ ಚಾಲ್ತಿಯಲ್ಲಿರುವ ಈ ದೈವಿಕ ಪದ್ಧತಿಯು ಹಾಲುಮತ ಪರಂಪರೆಯ ಶ್ರೇಷ್ಠತೆಗೆ ಮತ್ತು ಭಕ್ತರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ. ವಿಜ್ಞಾನಕ್ಕೂ ನಿಲುಕದ ಈ ಅಲೌಕಿಕ ಸಂಪ್ರದಾಯವು ಹುಲಜಂತಿ ಕ್ಷೇತ್ರವನ್ನು ಹಾಲುಮತ ಬಾಂಧವರ ಜಾಗೃತ ಶಕ್ತಿಪೀಠವನ್ನಾಗಿ ಇಂದಿಗೂ ಬೆಳಗಿಸುತ್ತಿದೆ.

Share
Related Articles
ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...

ಸುದ್ದಿ

ಜಿಟಿಎ 6′ ಕ್ರೇಜ್ ನಡುವೆ ಕನ್ನಡಿಗರದ್ದೇ ಹೊಸ ಹವಾ: ಈಗ ವೆಬ್‌ಸೈಟ್‌ನಲ್ಲೇ ಆಡಬಹುದು ನಮ್ಮ ‘ಜಿಟಿಎ ಬೆಂಗಳೂರು’ ಗೇಮ್.

    ಮರ್ಚೆಡ್ ಡೇಸ್|ವಿಶೇಷ ವರದಿ ಬೆಂಗಳೂರು. ಜಗತ್ತಿನ ಗೇಮಿಂಗ್ ಲೋಕಕ್ಕೆ ಇದೇ ತಿಂಗಳ ನವೆಂಬರ್...