ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ಬಸ್ ನಿಲ್ದಾಣದಿಂದ ಸಿಂಧನೂರು ಕಡೆಗೆ ಸಾಗುತ್ತಿದ್ದ ಸಾರಿಗೆ ಬಸ್ಸಿನ ಹಿಂಬದಿ ಚಕ್ರದಡಿ ರಾಯಲ್ ಎನ್‌ಫೀಲ್ಡ್ (ಬುಲೆಟ್) ಬೈಕ್ ಸಿಲುಕಿ, ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ರೋಮ್ಯಾಂಚಕ ಘಟನೆ ನಗರದ ಹೃದಯಭಾಗದ ನೀಲಕಂಠೇಶ್ವರ ವೃತ್ತದಲ್ಲಿ ನಡೆದಿದೆ. ಬಸ್ಸಿನ ಅಡಿಗೆ ಬೈಕ್ ನುಗ್ಗಿದ ರಭಸಕ್ಕೆ ಸ್ಥಳದಲ್ಲಿದ್ದ ಜನರು ಕ್ಷಣಕಾಲ ಬೆಚ್ಚಿಬಿದ್ದಿದ್ದು, ಸವಾರ ಯಾವುದೇ ಗಂಭೀರ ಗಾಯಗಳಿಲ್ಲದೆ ಪವಾಡಸದೃಶವಾಗಿ ಎದ್ದು ಬಂದಿರುವುದು ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಹಿಂದಿನ ಗಾಲಿಯಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗಾಗಲಿ, ರಸ್ತೆಯಲ್ಲಿದ್ದ ಪಾದಚಾರಿಗಳಿಗಾಗಲಿ ಯಾವುದೇ ತೊಂದರೆಯಾಗಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಸಂಚಾರಿ ಪೊಲೀಸರು ಧಾವಿಸಿ ಬಂದು ಪರಿಸ್ಥಿತಿ ನಿಯಂತ್ರಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಗರದ ಅತಿ ಹೆಚ್ಚು ಜನಸಂದಣಿ ಇರುವ ನೀಲಕಂಠೇಶ್ವರ ಸರ್ಕಲ್‌ನಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದೇ ಈ ದುರ್ಘಟನೆಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ. ನಾಲ್ಕೂ ದಿಕ್ಕುಗಳಿಂದ ಏಕಕಾಲಕ್ಕೆ ನುಗ್ಗುವ ಬೈಕುಗಳು, ಆಟೋಗಳು ಹಾಗೂ ಭಾರಿ ವಾಹನಗಳಿಗೆ ಯಾವುದೇ ಸನ್ನೆ ಅಥವಾ ನಿಯಂತ್ರಣವಿಲ್ಲದೆ ಇರುವುದರಿಂದ, ಯಾವ ವಾಹನಕ್ಕೆ ಯಾರು ದಾರಿ ಬಿಡಬೇಕು ಎಂಬ ಗೊಂದಲದಲ್ಲಿ ಸವಾರರು ನಿತ್ಯವೂ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ.
ಈ ಪ್ರಮುಖ ವೃತ್ತದಲ್ಲಿ ಇಂತಹ ಅವಘಡಗಳು ಪದೇಪದೇ ಮರುಕಳಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೆಟ್ಟುನಿಂತಿರುವ ಸಿಗ್ನಲ್ ದೀಪಗಳನ್ನು ತಕ್ಷಣವೇ ದುರಸ್ತಿಗೊಳಿಸಿ, ಸಂಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.