ಮರ್ಚೆಡ್ ಡೇಸ್ ಸುದ್ದಿ|ಕಂಪ್ಲಿ.
ಕಂಪ್ಲಿ: ರಕ್ಷಣೆ ನೀಡಬೇಕಾದ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಖದೀಮರು ತಮ್ಮ ಕೈಚಳಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ನಡುಕ ಹುಟ್ಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ಗಣೇಶ್ ಪ್ರಾವಿಷನ್ ಸ್ಟೋರ್ಗೆ ತಡರಾತ್ರಿ ಕನ್ನ ಹಾಕಿರುವ ಕಳ್ಳರು, ಸುಮಾರು ₹50,000 ಮೌಲ್ಯದ ವಸ್ತುಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ತಡರಾತ್ರಿ ಯಾರೂ ಇಲ್ಲದ ವೇಳೆ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಖದೀಮರು, ಗಲ್ಲಾಪೆಟ್ಟಿಗೆಯಲ್ಲಿದ್ದ ₹5,000 ನಗದು ಹಣ ಹಾಗೂ ಸುಮಾರು ₹45,000 ಮೌಲ್ಯದ ದುಬಾರಿ ಸಿಗರೇಟ್ ಪ್ಯಾಕೆಟ್ಗಳನ್ನು ಕ್ಷಣಾರ್ಧದಲ್ಲಿ ಬಾಚಿಕೊಂಡು ಪರಾರಿಯಾಗಿದ್ದಾರೆ. ಬೆಳಗಾಗುತ್ತಿದ್ದಂತೆ ಅಂಗಡಿಯ ಬೀಗ ಮುರಿದಿರುವುದು ಕಂಡುಬಂದಿದ್ದು, ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.
ಖುದ್ದು ಪೊಲೀಸ್ ಠಾಣೆಯ ಮೂಗಿನ ಕೆಳಗೆಯೇ ಈ ಕಳ್ಳತನ ನಡೆದಿರುವುದು ಸ್ಥಳೀಯ ವ್ಯಾಪಾರಿಗಳು ಮತ್ತು ನಾಗರಿಕರಲ್ಲಿ ತೀವ್ರ ಆತಂಕ ಹಾಗೂ ಅಚ್ಚರಿ ಮೂಡಿಸಿದೆ. ಕಳ್ಳರ ಈ ಧೈರ್ಯಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ರಾತ್ರಿ ಗಸ್ತು ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳ್ಳರು ಅಂಗಡಿಗೆ ನುಗ್ಗಿ ಕೈಚಳಕ ತೋರಿರುವ ಸಂಪೂರ್ಣ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಕಂಪ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.