Home ಅಂಕಣ ಬೆಂಗಳೂರಿನಲ್ಲಿ ಕೋ-ಲಿವಿಂಗ್ ಪಿಜಿ ಕ್ರಾಂತಿಯೋ, ಸಂಸ್ಕೃತಿಯ ಅವನತಿಯೋ?: ‘ಜೆನ್-ಜಿ’ ಜೀವನಶೈಲಿಯ ಬೆನ್ನೇರಿದ ಯುವಜನತೆ.
ಅಂಕಣಸುದ್ದಿ

ಬೆಂಗಳೂರಿನಲ್ಲಿ ಕೋ-ಲಿವಿಂಗ್ ಪಿಜಿ ಕ್ರಾಂತಿಯೋ, ಸಂಸ್ಕೃತಿಯ ಅವನತಿಯೋ?: ‘ಜೆನ್-ಜಿ’ ಜೀವನಶೈಲಿಯ ಬೆನ್ನೇರಿದ ಯುವಜನತೆ.

Share
Share
ಮರ್ಚೆಡ್ ಡೇಸ್|ವಿಶೇಷ ಆರ್ಟಿಕಲ್.

ಊರು, ಕೇರಿ ಬಿಟ್ಟು ಕನಸುಗಳ ಬೆನ್ನೇರಿ ರಾಜಧಾನಿ ಬೆಂಗಳೂರಿಗೆ ಕಾಲಿಡುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಉದ್ಯೋಗಾಕಾಂಕ್ಷಿಯ ಮೊದಲ ಸವಾಲೇ ಊಟ ಮತ್ತು ವಸತಿ. ಮನೆಯನ್ನು ಬಿಟ್ಟು ದೂರದೂರಿನಲ್ಲಿ ನೆಲೆಕಂಡುಕೊಳ್ಳಲು ಹೊರಡುವ ಮಧ್ಯಮ ವರ್ಗದ ಯುವಜನತೆಗೆ ಈ ಮಹಾನಗರ ಆರಂಭದಲ್ಲೇ ಕಠಿಣ ಪರೀಕ್ಷೆಗಳನ್ನೊಡ್ಡುತ್ತದೆ. ಕೈತುಂಬಾ ಹಣವಿಲ್ಲದ, ಸ್ವಂತ ಸೂರು ಹೊಂದಿರದ ಅದೆಷ್ಟೋ ಮಂದಿಗೆ ಪೇಯಿಂಗ್ ಗೆಸ್ಟ್ (ಪಿಜಿ) ವ್ಯವಸ್ಥೆಯೇ ಏಕೈಕ ಆಸರೆಯಾಗಿದೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಬಾಡಿಗೆ ಮನೆ ಹುಡುಕುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಬ್ಯಾಚುಲರ್ ಹುಡುಗರಿಗೆ ಅಥವಾ ಯುವತಿಯರಿಗೆ ಬಾಡಿಗೆಗೆ ಮನೆ ಕೊಡಲು ಮನೆ ಮಾಲೀಕರು ನೂರಾರು ಷರತ್ತುಗಳನ್ನು ವಿಧಿಸುತ್ತಾರೆ. ಇನ್ನು ಮಾಲೀಕರ ಎಲ್ಲ ನಿರೀಕ್ಷೆಗಳನ್ನು ಪೂರೈಸಿ ಮನೆ ಪಡೆದುಕೊಂಡರೂ, ಅದು ಕೆಲಸದ ಸ್ಥಳ ಅಥವಾ ಕಾಲೇಜಿಗೆ ಬಹಳ ದೂರವಿರುತ್ತದೆ. ದಿನವಿಡೀ ಟ್ರಾಫಿಕ್‌ನಲ್ಲೇ ಅರ್ಧ ಆಯಸ್ಸು ಕಳೆಯುವ ಪರಿಸ್ಥಿತಿ ನಿರ್ಮಾಣವಾಗುವುದರಿಂದ ಅನಿವಾರ್ಯವಾಗಿ ಬಹುತೇಕರು ಪಿಜಿಗಳತ್ತ ಮುಖ ಮಾಡುತ್ತಾರೆ.

ಹಿಂದೆ ಕೇವಲ ಬಾಯ್ಸ್ ಪಿಜಿ ಅಥವಾ ಲೇಡೀಸ್ ಹಾಸ್ಟೆಲ್ ಎಂಬ ಕಟ್ಟುನಿಟ್ಟಿನ ನಿಯಮಗಳ ಪ್ರತ್ಯೇಕ ವ್ಯವಸ್ಥೆಗಳಿದ್ದವು. ಇವುಗಳಲ್ಲಿ ಸಣ್ಣಪುಟ್ಟ ಕೊರತೆಗಳಿದ್ದರೂ, ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಬೇಕಿತ್ತು. ಕೆಲವೆಡೆ ರೂಮು ಚೆನ್ನಾಗಿದ್ದರೆ ಊಟ ಸರಿ ಇರುತ್ತಿರಲಿಲ್ಲ, ಇನ್ನು ಕೆಲವೆಡೆ ಊಟ ರುಚಿಯಾಗಿದ್ದರೆ ಇರಲು ಯೋಗ್ಯವಾಗಿರುತ್ತಿರಲಿಲ್ಲ. ಇಂತಹ ಕುಂದುಕೊರತೆಗಳ ನಡುವೆಯೇ ಹತ್ತಾರು ವರ್ಷಗಳಿಂದ ಪೇಯಿಂಗ್ ಗೆಸ್ಟ್ ಸಂಸ್ಕೃತಿ ರಾಜಧಾನಿಯಲ್ಲಿ ಬೇರೂರಿ ಬೆಳೆದಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮೂರನೇ ಬಗೆಯ ಹೊಸ ಮಾದರಿಯ ವಸತಿ ಸಂಸ್ಕೃತಿ ವಿಪರೀತ ಜನಪ್ರಿಯತೆ ಪಡೆಯುತ್ತಿದೆ. ಅದೇ ‘ಕೋ-ಪೇಯಿಂಗ್ ಗೆಸ್ಟ್’ ಅಥವಾ ‘ಕೋ-ಲಿವಿಂಗ್’ (Co-living) ಸ್ಪೇಸ್‌ಗಳು. ಈ ವ್ಯವಸ್ಥೆಯಲ್ಲಿ ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳಿಲ್ಲದೆ, ಯುವಕರು ಮತ್ತು ಯುವತಿಯರು ಒಂದೇ ಸೂರಿನಡಿ, ಒಂದೇ ಕೋಣೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಉಳಿದುಕೊಳ್ಳಬಹುದಾದ ವಾತಾವರಣವನ್ನು ಪಿಜಿ ಆಡಳಿತ ಮಂಡಳಿಗಳೇ ಅಧಿಕೃತವಾಗಿ ಒದಗಿಸುತ್ತಿವೆ.

ಇಂತಹ ಯಾವುದೇ ಕಟ್ಟುಪಾಡುಗಳಿಲ್ಲದ, ಸಂಪೂರ್ಣ ಸ್ವಾತಂತ್ರ್ಯ ಸಿಗುವ ಕಾರಣದಿಂದಾಗಿ ಐಟಿ ಕಾರಿಡಾರ್‌ಗಳಿಂದ ಹಿಡಿದು ಗಲ್ಲಿಗಲ್ಲಿಗಳವರೆಗೂ ನಾಯಿಕೊಡೆಗಳಂತೆ ‘ಕೋ-ಲಿವಿಂಗ್ ಪಿಜಿ’ಗಳು ತಲೆಯೆತ್ತಿವೆ. ಇವುಗಳು ಕೇವಲ ವಾಸಸ್ಥಳವಾಗಿ ಉಳಿಯದೆ, ಯಾವುದೇ ಮುಕ್ತ ನಿರ್ಬಂಧವಿಲ್ಲದ ಆಧುನಿಕ ಜೀವನಶೈಲಿಯ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಇದರಿಂದಾಗಿ ಮನೆ ಮಾಲೀಕರ ತಪಾಸಣೆ ಇಲ್ಲದೆ ಯುವ ಸಮುದಾಯಕ್ಕೆ ಬೇಕಾದಷ್ಟು ಸ್ವಾತಂತ್ರ್ಯ ದೊರಕಿದಂತಾಗಿದೆ.

ಈ ಅತಿಯಾದ ಮುಕ್ತ ವಾತಾವರಣವು ಕೌಟುಂಬಿಕ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಓದಲಿ, ಕೆಲಸ ಮಾಡಲಿ ಎಂದು ನಗರಕ್ಕೆ ಕಳುಹಿಸಿದ ಹೆತ್ತವರು ಊರಿಗೆ ಮರಳಿ ಬರುವಂತೆ ಅಂಗಲಾಚಿ ಕರೆದರೂ ಹಲವು ಯುವಕ-ಯುವತಿಯರು ಹಿಂದಿರುಗಲು ಮನಸ್ಸು ಮಾಡುತ್ತಿಲ್ಲ. ಕುಟುಂಬದ ಜವಾಬ್ದಾರಿ, ಬಾಂಧವ್ಯಗಳಿಗಿಂತ ನಗರದ ಈ ನಿರ್ಬಂಧಗಳಿಲ್ಲದ ಜೀವನಶೈಲಿಯೇ ಅವರಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿರುವುದು ಇಂದಿನ ಕಟು ಸತ್ಯವಾಗಿದೆ.

ಮತ್ತೊಂದೆಡೆ, ಈ ಜೀವನಕ್ರಮವು ಸಮಾಜದ ಮದುವೆ ಹಾಗೂ ಕುಟುಂಬ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆಯೇ ಎಂಬ ಚರ್ಚೆಯೂ ತೀವ್ರಗೊಂಡಿದೆ. ವಯಸ್ಸು ಮೀರಿದರೂ ಮದುವೆಯಾಗಲು ನಿರಾಕರಿಸುವುದು, ಸಂಸಾರಿಕ ಹೊಣೆಗಾರಿಕೆಗಳಿಂದ ದೂರ ಸರಿಯುವುದು ಹೆಚ್ಚುತ್ತಿದೆ. ‘ಆರು ತಿಂಗಳು ಜೊತೆಗಿದ್ದು ಬೋರ್ ಆದರೆ ಮತ್ತೊಬ್ಬ ಪಾರ್ಟ್ನರ್ ಜೊತೆ ಕೋ-ಲಿವಿಂಗ್ ಶುರು’ ಎನ್ನುವಷ್ಟರ ಮಟ್ಟಿಗೆ ಸಂಬಂಧಗಳು ಕ್ಷಣಿಕ ಹಾಗೂ ಯಾಂತ್ರಿಕವಾಗುತ್ತಿವೆ ಎಂಬ ಆತಂಕಕಾರಿ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಈ ಎಲ್ಲ ಬೆಳವಣಿಗೆಗಳನ್ನು ಇಂದಿನ ‘ಜೆನ್-ಜಿ’ (Gen Z) ಪೀಳಿಗೆಯ ಸಹಜ ನಡವಳಿಕೆ ಎಂದು ಕೆಲವರು ಬಣ್ಣಿಸುತ್ತಾರೆ. ಇಂದಿನ ಯುವಪೀಳಿಗೆ ಪ್ರತಿಯೊಂದನ್ನೂ ಹಗುರವಾಗಿ, ಸಮಾನವಾಗಿ ತೆಗೆದುಕೊಳ್ಳುತ್ತದೆ; ಯಾವುದನ್ನೂ ಅತಿಯಾಗಿ ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ ಎಂಬ ಸಮರ್ಥನೆಗಳೂ ಇವೆ. ಆದರೆ, ಸಂಪ್ರದಾಯ ಮತ್ತು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆದ ಸಮಾಜಕ್ಕೆ ಈ ಧೋರಣೆ ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳಿಗೆ ಧಕ್ಕೆ ತರುವಂತಹ ಮಾರಕ ಪ್ರವೃತ್ತಿಯಂತೆ ಭಾಸವಾಗುತ್ತಿದೆ.

ಹಿಂದೆ ಶಿಕ್ಷಣ ರಂಗದಲ್ಲಿ ಬಾಯ್ಸ್ ಸ್ಕೂಲ್, ಗರ್ಲ್ಸ್ ಕಾಲೇಜುಗಳಿದ್ದ ಕಾಲದಿಂದ ‘ಕೋ-ಎಜುಕೇಶನ್’ (ಸಹಶಿಕ್ಷಣ) ಬಂದಾಗಲೂ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಸಹಶಿಕ್ಷಣವು ಲಿಂಗ ಸಮಾನತೆ, ಆರೋಗ್ಯಕರ ಸ್ಪರ್ಧೆ ಮತ್ತು ಹೊಂದಾಣಿಕೆಯನ್ನು ಕಲಿಸುತ್ತದೆ ಎಂದು ಸಮಾಜ ಒಪ್ಪಿಕೊಂಡಿತ್ತು. ಆದರೆ, ಇಂದಿನ ‘ಕೋ-ಲಿವಿಂಗ್’ ಪರಿಕಲ್ಪನೆಯು ಆ ಶೈಕ್ಷಣಿಕ ಸಹಬಾಳ್ವೆಯ ಎಲ್ಲ ಗಡಿಗಳನ್ನು ಮೀರಿ, ವೈಯಕ್ತಿಕ ಸಂಬಂಧಗಳ ನೈತಿಕ ನೆಲೆಗಟ್ಟನ್ನೇ ಬದಲಾಯಿಸುತ್ತಿದೆ ಎಂಬುದು ಸಮಾಜ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಹಿಂದೆ ಮಹಾನಗರಗಳಲ್ಲಿ ಮನೆ ಬಾಡಿಗೆ ಹಂಚಿಕೊಳ್ಳಲು ಆರಂಭವಾದ ‘ಲಿವಿಂಗ್ ಟುಗೆದರ್’ ಪದ್ಧತಿ ಈಗ ಅಧಿಕೃತವಾಗಿ ಕೋ-ಲಿವಿಂಗ್ ಪಿಜಿಗಳ ಮೂಲಕ ಸಂಸ್ಥೀಕರಣಗೊಂಡಿದೆ. ಇದು ಯುವಜನತೆಯ ವೈಯಕ್ತಿಕ ಸ್ವಾತಂತ್ರ್ಯದ ಸಂಕೇತವೋ ಅಥವಾ ಭಾರತೀಯ ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳ ಅವನತಿಯ ಮುನ್ಸೂಚನೆಯೋ ಎಂಬ ಜಿಜ್ಞಾಸೆ ಶುರುವಾಗಿದೆ. ಮಹಾನಗರದ ಅಬ್ಬರದ ನಡುವೆ ಈ ಸಂಸ್ಕೃತಿಯ ಅಲೆಯು ಯುವ ಜನಾಂಗವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

ಲೇಖಕರು: ಟಿಎಸ್ ಮರ್ಚೆಡ್.
Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...