Home ಸುದ್ದಿ ಜಿರಾಳಕಲ್ಗುಡಿ ತೋಟದ ಮನೆಯಲ್ಲಿ ಲಕ್ಷಾಂತರ ರೂ. ಇಸ್ಪೀಟ್ ಅಡ್ಡೆ: 7 ತಿಂಗಳಿನಿಂದ ನಿರಂತರ ಜೂಜು, ಪೊಲೀಸರ ಮೌನಕ್ಕೆ ಸಾರ್ವಜನಿಕರ ಆಕ್ರೋಶ.
ಸುದ್ದಿ

ಜಿರಾಳಕಲ್ಗುಡಿ ತೋಟದ ಮನೆಯಲ್ಲಿ ಲಕ್ಷಾಂತರ ರೂ. ಇಸ್ಪೀಟ್ ಅಡ್ಡೆ: 7 ತಿಂಗಳಿನಿಂದ ನಿರಂತರ ಜೂಜು, ಪೊಲೀಸರ ಮೌನಕ್ಕೆ ಸಾರ್ವಜನಿಕರ ಆಕ್ರೋಶ.

Share
Share

 

ಮರ್ಚೆಡ್ ಡೇಸ್ ಸುದ್ದಿ|ಕನಕಗಿರಿ.

ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜಿರಾಳಕಲ್ಗುಡಿ ಗ್ರಾಮದ ದೊಡ್ಡಕಲೇವ್ ಸಮೀಪದ ಜಮೀನಿನಲ್ಲಿರುವ ಕೊಠಡಿಯೊಂದು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಬೇಕಿದ್ದ ತೋಟದ ಮನೆಯ ಕೋಣೆಯಲ್ಲಿ ಕಳೆದ ಸುಮಾರು ಏಳು ತಿಂಗಳುಗಳಿಂದ ಯಾವುದೇ ಅಂಜಿಕೆಯಿಲ್ಲದೆ ರಾಜಾರೋಷವಾಗಿ ಅಕ್ರಮ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂದು ಸ್ಥಳೀಯರು ನೇರವಾಗಿ ದೂರಿದ್ದಾರೆ.

ಹಗಲು-ರಾತ್ರಿ ಎನ್ನದೆ ನಡೆಯುತ್ತಿರುವ ಈ ಜೂಜಿನ ಅಡ್ಡೆಯಲ್ಲಿ ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ಕೈಬದಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ, ನಿತ್ಯ ಅಂದಾಜು ₹7 ಲಕ್ಷದಿಂದ ₹8 ಲಕ್ಷದವರೆಗೆ ಭಾರೀ ಮೊತ್ತದ ನಗದು ಹಣವನ್ನು ಪಣಕ್ಕಿಟ್ಟು ಈ ಜೂಜಾಟ ನಡೆಸಲಾಗುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಮಾತ್ರವಲ್ಲದೆ, ದೂರದ ಊರುಗಳಿಂದಲೂ ಜೂಜು ಪ್ರಿಯರು ನಿತ್ಯ ವಾಹನಗಳಲ್ಲಿ ಇಲ್ಲಿಗೆ ಬಂದು ಜೂಜಾಟದಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಆರೋಪಗಳು ದಟ್ಟವಾಗಿವೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಳೆದ ಏಳೆಂಟು ತಿಂಗಳುಗಳಿಂದ ಅಕ್ರಮ ದಂಧೆ ರಾಜಾರೋಷವಾಗಿ ಸಾಗುತ್ತಿದ್ದರೂ, ಸ್ಥಳೀಯ ಪೊಲೀಸ್ ಇಲಾಖೆಗೆ ಇದರ ಸುಳಿವು ಸಿಕ್ಕಿಲ್ಲವೇ ಅಥವಾ ಮಾಹಿತಿ ಇದ್ದರೂ ಜಾಣಕುರುಡು ಪ್ರದರ್ಶಿಸಲಾಗುತ್ತಿದೆಯೇ ಎಂಬ ಸಂಶಯ ಸ್ಥಳೀಯರಲ್ಲಿ ತೀವ್ರವಾಗಿ ಕಾಡುತ್ತಿದೆ. ಇಷ್ಟು ದೀರ್ಘ ಕಾಲ ನಿರಂತರವಾಗಿ ಜೂಜು ನಡೆಯುತ್ತಿರುವುದು ಇಲಾಖೆಯ ಕಾರ್ಯವೈಖರಿಯ ಮೇಲೆಯೇ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತೆ ಮಾಡಿದೆ.

ಅಕ್ರಮ ಇಸ್ಪೀಟ್ ಅಡ್ಡೆಯಿಂದಾಗಿ ಶಾಂತಿಯುತವಾಗಿದ್ದ ಹಳ್ಳಿ ಪ್ರದೇಶದಲ್ಲಿ ಈಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಿನನಿತ್ಯ ಅಪರಿಚಿತ ವ್ಯಕ್ತಿಗಳ ಓಡಾಟ ಹೆಚ್ಚಾಗಿದ್ದು, ಜೂಜಾಟದ ಮಂಪರಿನಲ್ಲಿ ಕಿರಿಕ್, ಗಲಾಟೆಗಳು ನಡೆಯುವ ಭೀತಿ ಎದುರಾಗಿದೆ. ಜೂಜಿಗೆ ಬಲಿಯಾಗಿ ಹಲವು ಕುಟುಂಬಗಳು ಆರ್ಥಿಕವಾಗಿ ಬೀದಿಗೆ ಬೀಳುತ್ತಿದ್ದು, ಇದು ನೇರವಾಗಿ ಗ್ರಾಮದ ಶಾಂತಿ ಹಾಗೂ ನೆಮ್ಮದಿಗೆ ಕೊಳ್ಳಿ ಇಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ನೆಮ್ಮದಿಗೆ ಭಂಗ ತರುತ್ತಿರುವ ಈ ಅಕ್ರಮ ಅಡ್ಡೆಯನ್ನು ಕೂಡಲೇ ಮಟ್ಟಹಾಕಬೇಕೆಂದು ಗ್ರಾಮಸ್ಥರು ಒಕ್ಕೊರಲ ಆಗ್ರಹ ಮಾಡಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಜಿರಾಳಕಲ್ಗುಡಿಯ ದೊಡ್ಡಕಲೇವ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು. ಆರೋಪ ಸಾಬೀತಾದರೆ ಜೂಜಾಟದ ಸೂತ್ರಧಾರಿಗಳು ಮತ್ತು ಜಮೀನಿನ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ ಈಗಲಾದರೂ ಎಚ್ಚೆತ್ತುಕೊಳ್ಳುವುದೇ? ನಿರಂತರವಾಗಿ ಸಾಗುತ್ತಿರುವ ಈ ಜೂಜಾಟದ ಅಡ್ಡೆಗೆ ಖಾಕಿ ಪಡೆ ಬೀಗ ಜಡಿದು ಕಠಿಣ ಕ್ರಮ ಕೈಗೊಳ್ಳುವುದೇ ಅಥವಾ ಆರೋಪಗಳು ಗಾಳಿಯಲ್ಲಿ ತೂರಿಹೋಗುವುದೇ ಎಂಬುದನ್ನು ಇನ್ನು ಕಾದು ನೋಡಬೇಕಾಗಿದೆ.

Share
Related Articles
ಸುದ್ದಿ

13 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ: ನಾಳೆ (ನ.19) ವಿಶ್ವದಾದ್ಯಂತ ‘GTA 6’ ಗ್ರ್ಯಾಂಡ್ ಎಂಟ್ರಿ!

  ಮರ್ಚೆಡ್ ಡೇಸ್ ಸುದ್ದಿ:ಬೆಂಗಳೂರು / ನವದೆಹಲಿ. ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತದಲ್ಲಿ ಲಭ್ಯ; ₹12,600...

ಸುದ್ದಿ

ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಪ್ರ. ದರ್ಜೆ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನದ ಗೆಲುವು.

ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.  ಗವಿಸಿದ್ದೇಶ್ವರ ಕಾಲೇಜಿಗೆ ದ್ವಿತೀಯ ಸ್ಥಾನ.ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿಗೆ ಶ್ರೀರಾಮನಗರದ ಜನತೆಯ...

ಸುದ್ದಿ

ಹಿಮಾಲಯದ ತಪ್ಪಲಿನಿಂದ ತುಂಗಭದ್ರಾ ತೀರಕ್ಕೆ ಮಾದಕ ನಶೆ! ಸಾಣಾಪುರದಲ್ಲಿ 16 ಲಕ್ಷದ ಚರಸ್ ವಶ, ಮೂವರು ಅಂದರ್.

        ಮರ್ಚೆಡ್ ಡೇಸ್ ಸುದ್ದಿ|ಕೊಪ್ಪಳ. ಕೊಪ್ಪಳ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ...

ಸಂಪಾದಕೀಯಸುದ್ದಿ

ಮಕ್ಕಳ ಹಿತದ ಜೊತೆಗೆ ಬಿಸಿಯೂಟ ನೌಕರರ ಬದುಕೂ ಉಳಿಯಲಿ: ಏಕಾಏಕಿ ಕ್ಲಸ್ಟರ್ ಕಿಚನ್ ಬೇಡ, ಮೊದಲು ಪರೀಕ್ಷೆಯಾಗಲಿ…

ಮರ್ಚೆಡ್ ಡೇಸ್ | ಸಂಪಾದಕೀಯ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಸಾಮಾಜಿಕ ಹೊಣೆಗಾರಿಕೆ. ಸರ್ಕಾರಿ...