ಮರ್ಚೆಡ್ ಡೇಸ್ ಸುದ್ದಿ|ಉಡುಪಿ ,ಮಣಿಪಾಲ್.
ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ನಿರಂತರ ಕಾಟ ಮತ್ತು ಜಗಳಕ್ಕೆ ಬೇಸತ್ತು ಆಸ್ಪತ್ರೆಯ ಕಟ್ಟಡದಿಂದಲೇ ಸಾಹಸಮಯವಾಗಿ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ(ಸ್ಪೈಡರ್ ಮ್ಯಾನ್) ಈ ದೃಶ್ಯ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.
ವರದಿಯ ಪ್ರಕಾರ, ಈತ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಪತ್ನಿಯೊಂದಿಗೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಹಾಗೂ ಗಲಾಟೆ ನಡೆದಿದೆ ಎನ್ನಲಾಗಿದೆ. ದಿನೇದಿನೆ ಹೆಚ್ಚಾದ ಪತ್ನಿಯ ಕಾಟವನ್ನು ಆಸ್ಪತ್ರೆಯ ಮಂಚದ ಮೇಲೂ ಸಹಿಸಿಕೊಳ್ಳಲಾಗದ ಆತ, ಅಲ್ಲಿಂದ ಹೇಗಾದರೂ ತಪ್ಪಿಸಿಕೊಂಡರೆ ಸಾಕೆಂದು ತೀರ್ಮಾನಿಸಿದ್ದಾನೆ.
ಮುಖ್ಯ ದ್ವಾರದ ಮೂಲಕ ಹೊರಹೋದರೆ ಮತ್ತೆ ಪತ್ನಿಯ ಕಣ್ಣಿಗೆ ಬೀಳಬಹುದು ಎಂಬ ಭಯದಿಂದ, ಆಸ್ಪತ್ರೆಯ ಮೇಲ್ಮಹಡಿಯ ಕಿಟಕಿಯ ಜಾಲರಿಯನ್ನು ಸರಿಸಿ ಹೊರಬಂದಿದ್ದಾನೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ, ಬರಿ ಮೈಯಲ್ಲೇ ಆಸ್ಪತ್ರೆಯ ಹೊರಭಾಗದ ಜಾಲರಿ ಗೋಡೆಯನ್ನು ಹಿಡಿದುಕೊಂಡು ಕೆಳಗೆ ಇಳಿಯಲು ಯತ್ನಿಸಿದ್ದಾನೆ.
ಕಟ್ಟಡದ ಹೊರಗೋಡೆಯ ಮೇಲೆ ಆತ ಸ್ಪೈಡರ್‌ಮ್ಯಾನ್‌ನಂತೆ ಇಳಿಯುತ್ತಿದ್ದ ಈ ಆಘಾತಕಾರಿ ದೃಶ್ಯವನ್ನು ಸ್ಥಳೀಯರು ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಎತ್ತರದಿಂದ ಕಾಲು ಜಾರಿ ಬಿದ್ದರೆ ಪ್ರಾಣಕ್ಕೆ ಕುತ್ತು ಬರುವ ಅಪಾಯವಿದ್ದರೂ, ಹೆಂಡತಿಯ ಮೇಲಿನ ಭಯದಿಂದ ಆತ ಗೋಡೆ ಇಳಿದು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಪ್ರಸ್ತುತ ಈ ವಿಡಿಯೋ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು “ಹೆಂಡತಿ ಕಾಟ ಎಂದರೆ ಇದೇನಾ!”, “ಸಿನಿಮಾ ಸ್ಟಂಟ್‌ಗಿಂತ ಕಮ್ಮಿ ಇಲ್ಲ” ಎಂದು ಬಗೆಬಗೆಯ ತಮಾಷೆಯ ಕಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಹೈಡ್ರಾಮಾ ಘಟನೆಯಿಂದ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಕೆಲಕಾಲ ದಂಗಾಗಿದ್ದಾರೆ.