
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ: ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ, ಗಂಗಾವತಿ ತಾಲೂಕು ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಅಹಿಂದ ವರ್ಗದ ನಾಯಕರ ಪ್ರತಿಮೆಯನ್ನು ಏಕಾಏಕಿ ತೆರವುಗೊಳಿಸಿರುವುದು ಸಮಸ್ತ ಅಭಿಮಾನಿಗಳಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಮಾಡಿದ ಘೋರ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅದೇ ಸ್ಥಳದಲ್ಲಿ ಪುತ್ಥಳಿಯನ್ನು ಗೌರವಪೂರ್ವಕವಾಗಿ ಮರುಸ್ಥಾಪಿಸಬೇಕೆಂದು ಪಟ್ಟುಹಿಡಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಪ್ರತಿಭಟನಾ ಜಾಥಾ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಸಾಗಿತು. 500ಕ್ಕೂ ಹೆಚ್ಚು ಬೈಕ್ಗಳಲ್ಲಿ ಆಗಮಿಸಿದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಶಕ್ತಿ ಪ್ರದರ್ಶನ ನಡೆಸಿದರು. ನಂತರ ಸ್ಥಳೀಯ ತಹಸೀಲ್ದಾರ್ ಕಚೇರಿಗೆ ತೆರಳಿ, ಪುತ್ಥಳಿ ತೆರವುಗೊಳಿಸಲು ಆದೇಶಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು ಹಾಗೂ ಅದೇ ಜಾಗದಲ್ಲಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶ್ರೀಕನಕದಾಸ ಹಾಲುಮತ ಕುರುಬರ ಸಂಘದ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ, ಸಾಲೋಣಿ ಮರಿಯಪ್ಪ, ಕೆ. ನಾಗೇಶಪ್ಪ ಹಾಗೂ ಶರಣೇಗೌಡ, 17 ಬಜೆಟ್ ಮಂಡಿಸಿ ರಾಜ್ಯದ ಸಮಸ್ತ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಜನನಾಯಕ ಸಿದ್ದರಾಮಯ್ಯ ಅವರ ಪುತ್ಥಳಿ ಸ್ಥಾಪನೆಗೆ ಅಭಿಮಾನಿಗಳು ನಿಯಮಾನುಸಾರ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಆದರೂ ಪಾಲಿಕೆ ಅಧಿಕಾರಿಗಳು ಪರವಾನಗಿ ನೀಡದೆ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿದ್ದಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಮುಖಂಡರು ಮಾತನಾಡಿ, ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿಸಲಾದ ಇತರೆ ಮಹನೀಯರ ಪುತ್ಥಳಿಗಳನ್ನು ಮುಟ್ಟದ ಜಿಲ್ಲಾಡಳಿತ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದ ಸಿದ್ದರಾಮಯ್ಯನವರ ಪುತ್ಥಳಿಯನ್ನು ಮಾತ್ರ ಗುರಿಯಾಗಿಸಿಕೊಂಡು ರಾತ್ರೋರಾತ್ರಿ ತೆರವುಗೊಳಿಸಿರುವುದು ತಾರತಮ್ಯದ ಪರಮಾವಧಿ. ತಕ್ಷಣವೇ ತೆರವುಗೊಳಿಸಿದ ಸ್ಥಳದಲ್ಲೇ ಪುತ್ಥಳಿಯನ್ನು ಮರುಸ್ಥಾಪಿಸಬೇಕು; ಇಲ್ಲವಾದಲ್ಲಿ ರಾಜ್ಯಾದ್ಯಂತ ಕುರುಬ ಮತ್ತು ಅಹಿಂದ ಸಮಾಜದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಹಾಗೂ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಾಲುಮತ ಸಮಾಜದ ಗುರುಗಳಾದ ಬಸಾಪಟ್ಟಣದ ನಂಜುಂಡೇಶ್ವರ ಮಠದ ಪೂಜ್ಯ ಸಿದ್ದರಾಮಯ್ಯ ತಾತಾ, ಪ್ರಮುಖರಾದ ಸಣ್ಣಕ್ಕಿ ನೀಲಪ್ಪ, ಅಶೋಕಗೌಡ, ರುದ್ರೇಶ ಗಂಗಾವತಿ, ಬೆಟ್ಟಪ್ಪ ಬೆಣಕಲ್, ಶಿವು ಹೊಸಳ್ಳಿ, ಮೋರಿ ದುರುಗಪ್ಪ, ವಿರೂಪಾಕ್ಷಪ್ಪ, ಬಿ. ಫಕೀರಯ್ಯ, ಬಿ. ಶರಣಪ್ಪ, ಹೊಸಳ್ಳಿ ನೀಲಕಂಠ, ರುದ್ರೇಶ ಡ್ಯಾಗಿ, ಪುಂಡಗೌಡ, ಗಿಡ್ಡಿ ಹನುಮಂತಪ್ಪ, ಬಕ್ಕಂಡಿ ಬಸವರಾಜ, ಬಸವರಾಜ ಉಣ್ಣೆ, ವೀರನಗೌಡ, ಕರಿಯಪ್ಪ, ಕೆ. ವೆಂಕಟೇಶ, ತಾವರೆಪ್ಪ, ಗಡ್ಡಿ ಮುದುಕಪ್ಪ, ಯಮನೂರಪ್ಪ, ಅಡ್ಡಿ ಶಾಮಣ್ಣ, ತಿರುಕಪ್ಪ, ರಾಮಕೃಷ್ಣ, ಮರಿಸ್ವಾಮಿ, ವಿಕ್ರಂ, ಕೃಷ್ಣ ಢಣಾಪೂರ, ಹನುಮೇಶ ಆಗೋಲಿ, ಮಂಜುನಾಥ ವೆಂಕಟಗಿರಿ, ಅಯ್ಯಪ್ಪ ಹೊಸಳ್ಳಿ, ಪರಶುರಾಮ ಇಟಗಿ, ಕೆ. ಪವನಕುಮಾರ, ಡೊಳ್ಳಿನ ಯಲ್ಲಪ್ಪ, ಮಲ್ಲಪ್ಪ ಬಸಾಪಟ್ಟಣ, ಕಲ್ಲಪ್ಪ ಸೇರಿದಂತೆ ಕುರುಬ ಹಾಗೂ ಅಹಿಂದ ಸಂಘಟನೆಗಳ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.