Home ಅಂಕಣ 24×7 ಚಿಲ್ಡ್( ಕೋಲ್ಡ್) ಬಿಯರ್ ಸಿಗುತ್ತೆ, ಆದರೆ ಬಹುತೇಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ: ಇದು ಕಲ್ಯಾಣ ಕರ್ನಾಟಕದ ಕಹಿ ಸತ್ಯ ಕತೆ.
ಅಂಕಣಸುದ್ದಿ

24×7 ಚಿಲ್ಡ್( ಕೋಲ್ಡ್) ಬಿಯರ್ ಸಿಗುತ್ತೆ, ಆದರೆ ಬಹುತೇಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ: ಇದು ಕಲ್ಯಾಣ ಕರ್ನಾಟಕದ ಕಹಿ ಸತ್ಯ ಕತೆ.

Share
Share
ಮರ್ಚೆಡ್ ಡೇಸ್ ವಿಶೇಷ ವರದಿ.

ರಾಯಚೂರು : ಸೆಪ್ಟೆಂಬರ್ 17ರ ವಿಮೋಚನಾ ದಿನದ ಸಂಭ್ರಮದ ನಡುವೆಯೂ, ಸ್ವಾತಂತ್ರ್ಯ ದೊರೆತು ದಶಕಗಳು ಕಳೆದರೂ ಕಲ್ಯಾಣ ಕರ್ನಾಟಕದ ಜನರ ಬವಣೆ,

ಕಲ್ಯಾಣ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಬಾಯಾರಿಕೆ ತಣಿಸಿಕೊಳ್ಳಲು ಶುದ್ಧ ಕುಡಿಯುವ ನೀರಿಲ್ಲ. ಶೇ. 90ರಷ್ಟು ಪ್ರದೇಶಗಳಲ್ಲಿ ಕಲುಷಿತ ನೀರೇ ಗತಿ. ಆದರೆ, ಹಳ್ಳಿ ಹಳ್ಳಿಗಳಲ್ಲೂ ದಿನದ 24 ಗಂಟೆಯೂ ಕೋಲ್ಡ್ ಬಿಯರ್ ಸುಲಭವಾಗಿ ಸಿಗುತ್ತದೆ! ಮುತ್ತಾತನ ಕಾಲದಿಂದಲೂ ಇಲ್ಲಿಯೇ ಬದುಕುತ್ತಿರುವ ಮೂಲ ನಿವಾಸಿಗಳಿಗೆ ಬೇಸಿಗೆ ಬಂದರೆ ನಿರಾಶ್ರಿತರಂತೆ ಟ್ಯಾಂಕರ್ ನೀರೇ ಗತಿಯಾಗಿದ್ದು, ಫೌಂಡೇಶನ್ ಹೆಸರಿನ ಸಮಾಜ ಸೇವಕರಿಗೆ ಇದು ಪ್ರಚಾರದ ಸರಕಾಗಿದೆ.

ಯಾದಗಿರಿ, ರಾಯಚೂರು, ಕೊಪ್ಪಳ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಕೃಷ್ಣೆ, ತುಂಗಭದ್ರೆಯಂತಹ ಮಹಾನದಿಗಳು ಹರಿಯುತ್ತವೆ. ಪ್ರತಿಯೊಂದು ಜಿಲ್ಲೆಗೂ ಎರಡು-ಮೂರು ನದಿಗಳ ಸಂಪರ್ಕವಿದ್ದರೂ ಇಡೀ ಭೂಭಾಗಕ್ಕೆ ಸಮಗ್ರ ನೀರಾವರಿ ಕಲ್ಪಿಸುವ ಯೋಜನೆಗಳು ಕಾಗದದಲ್ಲೇ ಉಳಿದಿವೆ. ಕಾಲುವೆಗಳ ನಿರ್ಲಕ್ಷ್ಯದಿಂದ ಭೂಮಿ ಬಂಜರಾಗಿದ್ದು, ಕೆರೆಗಳು ಹೂಳೆತ್ತದೆ ಪಾಳುಬಿದ್ದಿವೆ.

ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿ ಸರ್ಕಾರಗಳು ಕೈತೊಳೆದುಕೊಂಡಿವೆ. ಹೆಸರಿನಲ್ಲಿ ಕಲ್ಯಾಣವಿದೆ ವಿನಃ ಬದುಕಿನಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕೇವಲ ಬೋರ್ಡ್ ಬದಲಾವಣೆಯಿಂದ ಜನರ ಹಣೆಬರಹ ಬದಲಾಗುವುದಿಲ್ಲ ಎಂಬುದಕ್ಕೆ ಈ ಭಾಗದ ಇಂದಿನ ಸ್ಥಿತಿಯೇ ಸಾಕ್ಷಿ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ಕಟ್ಟಡಗಳೇನೋ ಇವೆ, ಕೆಲವೆಡೆ ಸಲಕರಣೆಗಳೂ ಇವೆ. ಆದರೆ, ನುರಿತ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ದಿನಕ್ಕೆ ಕೇವಲ ಐದಾರು ರೋಗಿಗಳನ್ನು ನೋಡಿ ಕೈತೊಳೆಯುವ ಪ್ರಾಥಮಿಕ ಕೇಂದ್ರಗಳಿಂದಾಗಿ ಬಡ ರೋಗಿಗಳು ತುರ್ತು ಚಿಕಿತ್ಸೆಗೂ ದೂರದ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಮುಂದುವರಿದಿದೆ.

ಬೆಂಗಳೂರು-ಮೈಸೂರು ಭಾಗದ ಬೆಳವಣಿಗೆಗೆ ಅಗತ್ಯವಿರುವ ಸಿಮೆಂಟ್, ಉಕ್ಕು, ವಿದ್ಯುತ್ ಹಾಗೂ ಪರಿಸರ ಮಾರಕ ಕೆಮಿಕಲ್ ಕಾರ್ಖಾನೆಗಳನ್ನು ಇಲ್ಲಿಗೆ ತಂದು ಸುರಿಯಲಾಗುತ್ತದೆ. ಇದರಿಂದ ಜನರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆದರೆ, ಐಐಟಿ, ಐಐಎಂ ಅಥವಾ ಏಮ್ಸ್‌ನಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪಡೆಯಲು ಮಾತ್ರ ಈ ಭಾಗದ ಯುವಜನರು ವರ್ಷಗಟ್ಟಲೆ ಬೀದಿಗಿಳಿದು ಹೋರಾಟ ಮಾಡಬೇಕಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಂದ ಕಡ್ಡಾಯವಾಗಿ ತೆರಿಗೆ ಕಟ್ಟಿಸಿಕೊಳ್ಳುವ ಅಧಿಕಾರಿಗಳು, ಅದಕ್ಕೆ ತಕ್ಕ ಕನಿಷ್ಠ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಪ್ರಜೆಗಳು ಮತ್ತು ಪಂಚಾಯಿತಿ ಆಡಳಿತ ಪರಸ್ಪರ ವಿರೋಧಿಗಳಂತೆ ಕಾದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಚರಂಡಿ, ಬೀದಿ ದೀಪದಂತಹ ಸಣ್ಣ ಕೆಲಸಗಳಿಗೂ ಜನಸಾಮಾನ್ಯರು ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಬೇಕಿದೆ.

ಯಾವುದೇ ಸರ್ಕಾರಿ ಯೋಜನೆ ಅಥವಾ ಸಬ್ಸಿಡಿ ತಲುಪಬೇಕಾದರೂ ಪಕ್ಷದ ಕಾರ್ಯಕರ್ತರು, ಪುಡಾರಿಗಳು ಹಾಗೂ ಮಧ್ಯವರ್ತಿಗಳ ಶಿಫಾರಸು ಪತ್ರವೇ ಬೇಕು. ಸರ್ಕಾರದ ಎಲ್ಲಾ ಫಲಾನುಭವಿ ಯೋಜನೆಗಳು ಸ್ಥಳೀಯ ನಾಯಕರ ನೆಂಟರಿಷ್ಟರಿಗೆ ಮತ್ತು ಹಿಂಬಾಲಕರಿಗೆ ಮಾತ್ರ ದಕ್ಕುತ್ತಿದ್ದು, ನೈಜ ಬಡ ಮತದಾರರು ಕಚೇರಿಗಳ ಮೆಟ್ಟಿಲು ಹತ್ತಿ ಇಳಿಯುತ್ತಿದ್ದಾರೆ.

ಮಳೆಗಾಲ ಆರಂಭವಾದರೆ ಸಾಕು, ಹಳ್ಳ-ಕೊಳ್ಳಗಳಿಗೆ ಕಿರು ಸೇತುವೆಗಳಿಲ್ಲದೆ ನೂರಾರು ಹಳ್ಳಿಗಳ ಸಂಪರ್ಕ ಕಡಿದುಹೋಗುತ್ತದೆ. ಬೀದಿ ದೀಪಗಳಿಲ್ಲದ ಕತ್ತಲೆಯ ಗ್ರಾಮಗಳು, ಶಿಕ್ಷಕರೇ ಇಲ್ಲದ ಪಾಳುಬಿದ್ದ ಸರ್ಕಾರಿ ಶಾಲೆಗಳು ಈ ಭಾಗದ ಗ್ರಾಮೀಣ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ದೂಡುತ್ತಿವೆ.

ಉದ್ಯೋಗವಿಲ್ಲದೆ, ಕೃಷಿಗೆ ನೀರಿಲ್ಲದೆ ಲಕ್ಷಾಂತರ ಕುಟುಂಬಗಳು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಮುಂತಾದ ಮಹಾನಗರಗಳಿಗೆ ಕಟ್ಟಡ ಕಾರ್ಮಿಕರಾಗಿ ವಲಸೆ ಹೋಗುತ್ತಿವೆ. ವರ್ಷಕ್ಕೊಮ್ಮೆ ಊರಿನ ಮಾರಮ್ಮನ ಜಾತ್ರೆ, ಕರಿಯಮ್ಮನ ಹಬ್ಬ, ಮೊಹರಂ ಅಥವಾ ಉರುಸ್‌ಗಳಿಗೆ ಮಾತ್ರ ಬಂದು ಹೋಗುವ ಈ ಜನ ತಮ್ಮ ತವರು ನೆಲದಲ್ಲೇ ‘ಅತಿಥಿ’ಗಳಂತೆ ಬದುಕುತ್ತಿದ್ದಾರೆ.

ಹಲವು ದಶಕಗಳಿಂದ ಈ ಭಾಗದ ಜನರನ್ನು ತಾತ್ಕಾಲಿಕ ಟೆಂಟ್‌ಗಳು, ಬೇಸಿಗೆಯ ಟ್ಯಾಂಕರ್‌ಗಳ ಮೂಲಕವೇ ನಡೆಸಿಕೊಳ್ಳಲಾಗುತ್ತಿದೆ. “ನಾವು ಎಲ್ಲಿಂದಲೋ ವಲಸೆ ಬಂದ ನಿರಾಶ್ರಿತರಲ್ಲ; ತಲೆಮಾರುಗಳಿಂದ ಇಲ್ಲಿಯೇ ಬದುಕುತ್ತಿರುವ ನೆಲದ ಮಕ್ಕಳು. ಇನ್ನು ಮುಂದಾದರೂ ತಾತ್ಕಾಲಿಕ ಮುಲಾಮು ಬಿಟ್ಟು, ಸಮಗ್ರ ನೀರಾವರಿ ಹಾಗೂ ಮೂಲಸೌಕರ್ಯದ ಶಾಶ್ವತ ಪರಿಹಾರವನ್ನು ಸರ್ಕಾರ ರೂಪಿಸಬೇಕು” ಎಂಬುದು ಇಲ್ಲಿನ ಜನರ ಒಕ್ಕೊರಲ ಒತ್ತಾಯ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...