
ಮರ್ಚೆಡ್ ಡೇಸ್ ವಿಶೇಷ ಲೇಖನೆ:
ಆಕಾಶದೆತ್ತರಕ್ಕೆ ನಿಂತ ಬೃಹತ್ ಬಣ್ಣಬಣ್ಣದ ಡೇರೆ… ದೂರದಿಂದಲೇ ಕಿವಿಗೆ ಅಪ್ಪಳಿಸುತ್ತಿದ್ದ ಬ್ಯಾಂಡ್ ವಾದ್ಯಗಳ ನಿನಾದ… ಬಾಗಿಲ ಬಳಿಯೇ ಕೈಬೀಸಿ ಕರೆಯುತ್ತಿದ್ದ ಮುದ್ದಾದ ಜೋಕರ್! ಹೌದು, ಅದೊಂದು ಕಲ್ಪನೆಗೂ ಮೀರಿದ ಮಾಯಾಲೋಕ. ಇಂದಿನ 3D, 4G, 5G ಡಿಜಿಟಲ್ ಜಗತ್ತು ಕಣ್ಣಮುಂದೆ ಬರುವ ಮುನ್ನ, ಮನರಂಜನೆಯ ‘ಬಾಪ್’ ಎಂದೇ ಕರೆಸಿಕೊಂಡಿದ್ದದ್ದು ಸರ್ಕಸ್. ಜಂಬು ಸರ್ಕಸ್, ಜಮೀನಿ ಸರ್ಕಸ್, ಕೋಮಲ್ ಸರ್ಕಸ್ ಸೇರಿದಂತೆ ಹಲವು ತಂಡಗಳು ಊರಿಗೆ ಬಂದರೆ ಸಾಕು, ಆ ಊರಿಗೇ ಹಬ್ಬದ ಕಳೆ. ಡೇರೆ ಕಾಣಿಸಿಕೊಂಡ ಕ್ಷಣದಿಂದಲೇ ಮಕ್ಕಳ ಕಣ್ಣುಗಳಲ್ಲಿ ಕುತೂಹಲ, ದೊಡ್ಡವರ ಮುಖದಲ್ಲಿ ಬಾಲ್ಯದ ನಗು!
ಒಂದು ಕಾಲದಲ್ಲಿ ಊರಿಗೆ ಸರ್ಕಸ್ ಬಂತೆಂದರೆ ಅದು ಸಾಮಾನ್ಯ ಸುದ್ದಿ ಆಗಿರಲಿಲ್ಲ; ಅದೊಂದು ಸಂಭ್ರಮದ ಘೋಷಣೆ. ಟಿಕೆಟ್‌ಗಾಗಿ ಸರತಿ, ಡೇರೆಯ ಹೊರಗೆ ಬಣ್ಣಬಣ್ಣದ ಪೋಸ್ಟರ್‌ಗಳು, ಮೈಕ್‌ನಲ್ಲಿ ಮೊಳಗುತ್ತಿದ್ದ ಘೋಷಣೆಗಳು—ಎಲ್ಲವೂ ಸೇರಿ ಊರಿನ ವಾತಾವರಣವನ್ನೇ ಬದಲಿಸುತ್ತಿದ್ದವು. ಗ್ರೇಟ್ ಜಂಬೋ ಸರ್ಕಸ್, ಜಮೀನಿ ಸರ್ಕಸ್, ಕೋಮಲ್ ಸರ್ಕಸ್‌ಗಳಂತಹ ತಂಡಗಳ ಪ್ರದರ್ಶನ ನೋಡಲು ಕುಟುಂಬ ಸಮೇತ ಜನ ಮುಗಿಬೀಳುತ್ತಿದ್ದರು. ಕಣ್ಣು ಮಿಟುಕಿಸದೆ ನೋಡುವ ರೋಮಾಂಚನ, ಎದೆಯೊಡೆವ ಭಯ, ಮರುಕ್ಷಣದಲ್ಲೇ ಹೊಟ್ಟೆ ಹುಣ್ಣಾಗಿಸುವ ನಗು—ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತಿದ್ದ ಆ ಡೇರೆ ಅಂದಿನ ಭಾರತೀಯರ ಪಾಲಿನ ಮೊದಲ ‘ವಂಡರ್‌ಲ್ಯಾಂಡ್’!
ಶಾಲಾ ದಿನಗಳಲ್ಲಿ ಕುಟುಂಬ ಸಮೇತ ಸರ್ಕಸ್ ನೋಡಿದ ನೆನಪು ಇಂದಿಗೂ ಹಲವರ ಮನಸ್ಸಿನಲ್ಲಿ ಹಸಿರಾಗಿದೆ. ಪ್ರದರ್ಶನ ಮುಗಿದರೂ ಸರ್ಕಸ್ ಮುಗಿಯುತ್ತಿರಲಿಲ್ಲ; ಅದರ ಚರ್ಚೆ ಶಾಲೆಯ ಬೆಂಚಿನ ಮೇಲೂ, ಆಟದ ಮೈದಾನದಲ್ಲೂ ಮುಂದುವರಿಯುತ್ತಿತ್ತು. “ಆ ಜೋಕರ್ ಹೇಗೆ ಬಿದ್ದ ಗೊತ್ತಾ?”, “ಆ ಹುಡುಗಿ ಸೈಕಲ್ ಮೇಲೆ ಹೇಗೆ ಬ್ಯಾಲೆನ್ಸ್ ಮಾಡಿದಳು ನೋಡಿದ್ಯಾ?”, “ಆ ಬೈಕ್ ಸಾಹಸ ನೋಡಿದಿಯಾ?”—ಹೀಗೆ ಸ್ನೇಹಿತರ ಮಾತುಗಳಲ್ಲಿ ಸರ್ಕಸ್ ಮತ್ತೆ ಮತ್ತೆ ಜೀವ ಪಡೆಯುತ್ತಿತ್ತು. ಇಂದಿನ ಮೊಬೈಲ್ ಪರದೆಯಲ್ಲಿ ಒಂದರ ಹಿಂದೆ ಮತ್ತೊಂದು ರೀಲ್ಸ್ ಜಾರಿಹೋಗುವ ವೇಗದ ಮನರಂಜನೆಗಿಂತ, ಅಂದಿನ ಸರ್ಕಸ್ ಮನಸ್ಸಿನಲ್ಲಿ ಉಳಿಯುವಂತಹ ಜೀವಂತ ಅನುಭವವಾಗಿತ್ತು.
ಸರ್ಕಸ್ ಎಂದರೆ ಕೇವಲ ಆಟವಲ್ಲ; ಅದು ಇಡೀ ಕುಟುಂಬವನ್ನು ಒಂದೇ ಜಾಗದಲ್ಲಿ ಕೂರಿಸಿ ನಗಿಸುತ್ತಿದ್ದ ಅಪರೂಪದ ಮನರಂಜನಾ ತಾಣ. ಅಜ್ಜ-ಅಜ್ಜಿಯಿಂದ ಹಿಡಿದು ಕೈಕೂಸಿನವರೆಗೂ ಒಟ್ಟಿಗೆ ಕುಳಿತು ಸಂಭ್ರಮಿಸಬಹುದಾದ ಜಾಗ. ಬೃಹತ್ ರಿಂಗ್‌ನಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಆನೆಗಳು, ಸಿಂಹ-ಹುಲಿಗಳ ಸಾಹಸ ಪ್ರದರ್ಶನಗಳು, ಸೈಕಲ್ ಸವಾರಿ ಮಾಡುತ್ತಿದ್ದ ಪ್ರಾಣಿಗಳು, ಜಾದೂಗಾರನ ಕೈಚಳಕ, ಗಾಳಿಯಲ್ಲಿ ತೇಲಿದಂತೆ ಕಾಣುತ್ತಿದ್ದ ಹಗ್ಗದಾಟ—ಪ್ರೇಕ್ಷಕರ ಉಸಿರನ್ನೇ ಬಿಗಿಹಿಡಿಯುವ ದೃಶ್ಯಗಳು. ಸಾವಿನ ಬಾವಿಯಲ್ಲಿ ಬೈಕ್ ಸಾಹಸ ಮಾಡುವ ಕಲಾವಿದರಿಂದ ಹಿಡಿದು ತುತ್ತತುದಿಯ ಹಗ್ಗದ ಮೇಲೆ ಸಮತೋಲನ ಕಾಯ್ದುಕೊಳ್ಳುತ್ತಿದ್ದ ಸಾಹಸ ಕಲಾವಿದರವರೆಗೆ, ಪ್ರತಿಯೊಂದು ಪ್ರದರ್ಶನವೂ ಮನುಷ್ಯನ ಛಲ ಮತ್ತು ಕೌಶಲ್ಯದ ಪರಿಚಯವಾಗಿತ್ತು.
ನಿಜ ಹೇಳಬೇಕೆಂದರೆ, ಸರ್ಕಸ್ ಒಂದು ದೊಡ್ಡ ಬದುಕಿನ ಪಾಠವೂ ಆಗಿತ್ತು. ಹಗ್ಗದ ಮೇಲಿನ ಸಮತೋಲನ ತಪ್ಪಿದರೆ ಅಪಾಯ; ಅದೇ ಸಮತೋಲನ ಉಳಿಸಿಕೊಂಡರೆ ಚಪ್ಪಾಳೆ. ಬದುಕೂ ಹಾಗೆಯೇ ಅಲ್ಲವೇ? ಕೆಲವೊಮ್ಮೆ ನಗು, ಕೆಲವೊಮ್ಮೆ ನೋವು, ಮತ್ತೊಮ್ಮೆ ಉಸಿರು ಬಿಗಿಹಿಡಿಯುವ ಆತಂಕ. ಮುಖಕ್ಕೆ ಬಣ್ಣ ಬಳಿದುಕೊಂಡು ಜಗತ್ತನ್ನೇ ನಗಿಸುವ ಜೋಕರ್‌ನ ಹಿಂದೆ ಅಡಗಿರುವ ನೋವು, ನಮ್ಮ ಬದುಕಿನ ಹಲವು ಮುಖಗಳಿಗೆ ಕನ್ನಡಿ ಹಿಡಿಯುತ್ತಿತ್ತು. ಶಿಕ್ಷಣ, ಉದ್ಯೋಗ, ಸಾಲ, ಕುಟುಂಬದ ಜವಾಬ್ದಾರಿ—ಇವೆಲ್ಲದರ ನಡುವೆ ಪ್ರತಿದಿನ ‘ಸರ್ಕಸ್’ ಮಾಡುತ್ತಿರುವ ಸಾಮಾನ್ಯ ಮನುಷ್ಯನಿಗೂ ಆ ಡೇರೆಯ ಆಟ ತನ್ನದೇ ಬದುಕಿನ ಕಥೆಯಂತೆ ಕಾಣುತ್ತಿತ್ತು.
ಆದರೆ ಕಾಲ ಬದಲಾಯಿತು. ಪ್ರಾಣಿಗಳ ಬಳಕೆಗೆ ಸಂಬಂಧಿಸಿದ ಕಾನೂನುಗಳು, ಪ್ರಾಣಿ ಕಲ್ಯಾಣದ ವಿಚಾರಗಳು, ಬದಲಾಗುತ್ತಿರುವ ಮನರಂಜನಾ ಮಾಧ್ಯಮಗಳು ಸರ್ಕಸ್‌ಗಳ ಸ್ವರೂಪವನ್ನೇ ಬದಲಿಸಿಬಿಟ್ಟವು. ಒಮ್ಮೆ ಮಕ್ಕಳ ಕಣ್ಣುಗಳಲ್ಲಿ ಕುತೂಹಲ ಮೂಡಿಸುತ್ತಿದ್ದ ಆನೆ, ಸಿಂಹ, ಹುಲಿ ಸೇರಿದಂತೆ ಪ್ರಾಣಿಗಳ ಪ್ರದರ್ಶನಗಳು ಕಣ್ಮರೆಯಾದವು. ಮತ್ತೊಂದೆಡೆ, ಬೃಹತ್ ಡೇರೆ ಹಾಕುವುದು, ವಿದ್ಯುತ್-ಜನರೇಟರ್ ವ್ಯವಸ್ಥೆ, ಸಾರಿಗೆ, ಕಲಾವಿದರ ನಿರ್ವಹಣೆ, ಅನುಮತಿಗಳು ಮತ್ತು ಸುರಕ್ಷತಾ ವ್ಯವಸ್ಥೆಗಳ ವೆಚ್ಚ ಹೆಚ್ಚುತ್ತಲೇ ಹೋಯಿತು. ಕಲಾವಿದರ ಬದುಕಿಗೂ ಭದ್ರತೆ, ವಿಮೆ ಮತ್ತು ಸಾಮಾಜಿಕ ರಕ್ಷಣೆಯ ಪ್ರಶ್ನೆಗಳು ಎದುರಾದವು. ಡೇರೆಯೊಳಗೆ ಸಾವಿರಾರು ಜನರನ್ನು ನಗಿಸುತ್ತಿದ್ದವರ ಬದುಕು ಡೇರೆಯಾಚೆ ಮಾತ್ರ ನಿಧಾನವಾಗಿ ಕಣ್ಣೀರಿನ ಕಥೆಯಾಯಿತು.
ವರ್ಷವಿಡೀ ಊರೂರು ಅಲೆದು ಬದುಕುವ ಸರ್ಕಸ್ ಕಲಾವಿದರ ಜೀವನದ ಕಷ್ಟ ಹೇಳತೀರದು. ಇಂದು ಒಂದು ಊರು, ನಾಳೆ ಮತ್ತೊಂದು ಊರು—ಹೀಗೆ ಡೇರೆ ಬಿಚ್ಚಿ, ಮತ್ತೆ ಕಟ್ಟಿ ಸಾಗುವ ಅಲೆಮಾರಿ ಬದುಕು. ಪತಿ-ಪತ್ನಿ, ಮಕ್ಕಳ ಸಮೇತ ಬದುಕುವ ಕುಟುಂಬಗಳಿಗೆ ಮಕ್ಕಳ ಶಿಕ್ಷಣ, ಆರೋಗ್ಯ, ವಾಸಸ್ಥಳ ಎಲ್ಲವೂ ಸವಾಲೇ. ಒಂದು ಕಡೆ ಡೇರೆ, ಸಾರಿಗೆ, ಡೀಸೆಲ್, ಸಿಬ್ಬಂದಿ ಮತ್ತು ನಿರ್ವಹಣೆಯ ವೆಚ್ಚ ಏರುತ್ತಿದ್ದರೆ, ಮತ್ತೊಂದು ಕಡೆ ಪ್ರೇಕ್ಷಕರ ಸಂಖ್ಯೆ ಇಳಿಯುತ್ತಲೇ ಹೋಯಿತು. ಒಂದು ಕಾಲದಲ್ಲಿ ಟಿಕೆಟ್‌ಗಾಗಿ ಜನರು ಸಾಲಿನಲ್ಲಿ ನಿಂತಿದ್ದ ಜಾಗದಲ್ಲಿ, ನಂತರ ಪ್ರೇಕ್ಷಕರನ್ನು ಸೆಳೆಯಲು ರಿಯಾಯಿತಿ ದರದ ಟಿಕೆಟ್‌ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಜಮೀನಿ ಸರ್ಕಸ್, ಕೋಮಲ್ ಸರ್ಕಸ್, ಜಂಬು ಸರ್ಕಸ್‌ನಂತಹ ಹೆಸರುಗಳು ಒಮ್ಮೆ ಜನರ ಬಾಯಲ್ಲಿ ಕೇಳಿಬರುತ್ತಿದ್ದರೆ, ಇಂದು ಅವು ಬಹುತೇಕ ನೆನಪಿನ ಪುಟಗಳಲ್ಲಿ ಮಾತ್ರ ಉಳಿದಿವೆ.
ಸಾವಿರಾರು ಮುಖಗಳಲ್ಲಿ ನಗು ಮೂಡಿಸಿದ ಸರ್ಕಸ್ ಮಾಲೀಕರು, ಕಲಾವಿದರು ಮತ್ತು ತಂತ್ರಜ್ಞರ ಬದುಕಿನಲ್ಲಿ ಮಾತ್ರ ಇಂದು ಆ ನಗು ಕಾಣುವುದು ಅಪರೂಪ. ಮನರಂಜನೆಯ ಇತಿಹಾಸದಲ್ಲಿ ತನ್ನದೇ ಆದ ಅಧ್ಯಾಯ ಬರೆದಿದ್ದ ಈ ಜಗತ್ತು ನಿಧಾನವಾಗಿ ಮರೆಯಾಗುತ್ತಿದೆ. ಸರ್ಕಸ್ ಎನ್ನುವುದು ಕೇವಲ ಒಂದು ಡೇರೆ ಅಲ್ಲ; ಅದು ಒಂದು ತಲೆಮಾರಿನ ಬಾಲ್ಯ, ಒಂದು ಕುಟುಂಬದ ಸಂಭ್ರಮ, ಒಂದು ಕಲಾವಿದನ ಬೆವರು ಮತ್ತು ಸಾವಿರಾರು ಪ್ರೇಕ್ಷಕರ ನೆನಪು. ಇಂದು ಮೊಬೈಲ್ ಪರದೆಯಲ್ಲಿ ಕ್ಷಣಮಾತ್ರದಲ್ಲಿ ಮನರಂಜನೆ ಸಿಗುತ್ತಿದ್ದರೂ, ಆ ಬಣ್ಣದ ಡೇರೆಯೊಳಗೆ ಕುಳಿತು ಒಟ್ಟಿಗೆ ನಕ್ಕ ಅನುಭವವನ್ನು ಯಾವ ಡಿಜಿಟಲ್ ಪರದೆಯೂ ಸಂಪೂರ್ಣವಾಗಿ ಕೊಡಲಾರದು. ಜೀವನವೇ ಒಂದು ದೊಡ್ಡ ಸರ್ಕಸ್ ಎಂಬ ಸತ್ಯವನ್ನು ನಮಗೆ ಕಲಿಸಿದ ಆ ಕಲಾವಿದರ ಜಗತ್ತು ಬರೀ ಇತಿಹಾಸವಾಗದೆ, ಹೊಸ ರೂಪದಲ್ಲಿ ಮತ್ತೆ ಜೀವಂತವಾಗಲಿ ಎಂಬುದು ಆ ಡೇರೆಯ ನೆರಳಲ್ಲಿ ಬಾಲ್ಯ ಕಳೆದ ಪ್ರತಿಯೊಬ್ಬರ ಆಶಯ. ಏಕೆಂದರೆ ಸರ್ಕಸ್ ಮುಗಿದಿರಬಹುದು… ಆದರೆ ಅದರ ನೆನಪುಗಳ ಚಪ್ಪಾಳೆ ಇನ್ನೂ ನಮ್ಮ ಕಿವಿಯಲ್ಲಿ ಮೊಳಗುತ್ತಲೇ ಇದೆ!
ಲೇಖಕರು:
ಕೆ . ಎನ್. ಗುರು
ರಾಯಚೂರು.