ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಮುಂಡರಗಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವ ಶ್ರೀ ಮುಂಡರಗಿ ಶಿವರಾಯ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಇದೇ ಸೆಪ್ಟೆಂಬರ್ 14, 2026ರಂದು ಅತ್ಯಂತ ಸಡಗರ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರೆಯ ಅಂಗವಾಗಿ ಅಂದು ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ಸಕಲ ವಾದ್ಯಮೇಳ, ಡೊಳ್ಳು ಕುಣಿತ ಹಾಗೂ ಭಜನಾ ತಂಡಗಳ ಹರ್ಷೋದ್ಗಾರದ ನಡುವೆ ಸಂಜೆ ವೈಭವದ ಪಲ್ಲಕ್ಕಿ ಉತ್ಸವ ಮತ್ತು ನಂದಿಕೋಲು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಗಳಿಂದ ಸಾಗಲಿದೆ.
ಈ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಮುಂಡರಗಿ ಗ್ರಾಮವನ್ನು ತಳಿರು-ತೋರಣ, ಕೇಸರಿ ಧ್ವಜಗಳು ಹಾಗೂ ಆಕರ್ಷಕ ವಿದ್ಯುದ್ದೀಪಗಳಿಂದ ಸಿಂಗಾರಗೊಳಿಸಲಾಗಿದ್ದು, ಹಬ್ಬದ ವಾತಾವರಣ ಮನೆಮಾಡಿದೆ. ನೆರೆಹೊರೆಯ ಗ್ರಾಮಗಳು, ತಾಲೂಕು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು, ಆಪ್ತರು ಆಗಮಿಸುತ್ತಿದ್ದು, ಊರಿಗೆ ಊರೇ ಸಂಭ್ರಮದಲ್ಲಿ ಮಿಂದೇಳುತ್ತಿದೆ.
ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಯಾವುದೇ ರೀತಿಯ ಅನನುಕೂಲವಾಗದಂತೆ ಗ್ರಾಮಸ್ಥರು ಹಾಗೂ ಜಾತ್ರಾ ಆಡಳಿತ ಮಂಡಳಿಯ ವತಿಯಿಂದ ನಿರಂತರ ಮಹಾ ಅನ್ನದಾಸೋಹ, ಶುದ್ಧ ಕುಡಿಯುವ ನೀರು, ನೆರಳಿನ ಆಸರೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ವಾಹನ ನಿಲುಗಡೆ ಹಾಗೂ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ಮುಂಡರಗಿ ಶಿವರಾಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮದ ಮುಖಂಡರು, ಯುವಕರು ಹಾಗೂ ಭಕ್ತ ಮಂಡಳಿ ಆದರದಿಂದ ಕೋರಿದೆ.