
ಮರ್ಚೆಡ್ ಡೇಸ್ ವಿಶೇಷ ವರದಿ|ಗಂಗಾವತಿ.
ಗಂಗಾವತಿ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಲಿಂಗಸುಗೂರಿನಿಂದ ಬಳ್ಳಾರಿಯವರೆಗೆ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ಕೇವಲ ಸರ್ಕಾರದ ವಿರುದ್ಧದ ಹೋರಾಟವಾಗಿ ಉಳಿದಿಲ್ಲ; ಬದಲಿಗೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಮಹತ್ವದ ರಾಜಕೀಯ ತಿರುವಿಗೆ ವೇದಿಕೆಯಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಆರಂಭವಾಗಿರುವ ಈ ಪಾದಯಾತ್ರೆಯಲ್ಲಿ ಉತ್ತರ ಕರ್ನಾಟಕದ ಘಟಾನುಘಟಿ ನಾಯಕರು, ಶಾಸಕರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದು, ಬಳ್ಳಾರಿಯಲ್ಲಿ ನಾಳೆ ನಡೆಯಲಿರುವ ಸಮಾರೋಪ ಸಮಾವೇಶಕ್ಕೆ ಕಲ್ಯಾಣ ಕರ್ನಾಟಕ ಸಜ್ಜಾಗಿದೆ.
ಸಾಮಾನ್ಯವಾಗಿ ಬಿಜೆಪಿ ಪಕ್ಷದ ಯಾವುದೇ ಪ್ರತಿಭಟನೆ, ರ್ಯಾಲಿ, ಸಮಾವೇಶ ಅಥವಾ ಆಂದೋಲನಗಳಿರಲಿ, ಅಲ್ಲಿ ಸಂಪೂರ್ಣವಾಗಿ ಕೇಸರಿ ಬಾವುಟ, ಕೇಸರಿ ಶಾಲುಗಳೇ ರಾರಾಜಿಸುತ್ತವೆ. ಇಡೀ ವಾತಾವರಣವೇ ಕೇಸರಿಮಯವಾಗಿ ‘ಕೇಸರಿ ಮಳೆ’ ಸುರಿದ ಅನುಭವ ಉಂಟಾಗುವುದು ಬಿಜೆಪಿಯ ಸಾಂಪ್ರದಾಯಿಕ ಶೈಲಿ. ಆದರೆ, ಲಿಂಗಸುಗೂರಿನಿಂದ ಬಳ್ಳಾರಿಯವರೆಗಿನ ಈ ಪಾದಯಾತ್ರೆ ಮಾತ್ರ ಎಂದಿನ ಬಿಜೆಪಿ ಕಾರ್ಯಕ್ರಮಗಳಿಗಿಂತ ಅತ್ಯಂತ ವಿಶಿಷ್ಟ, ವಿಭಿನ್ನ ಹಾಗೂ ಎಲ್ಲರ ಹುಬ್ಬೇರಿಸುವಂತೆ ಮತ್ತು ಹೂಸ ದಿಕ್ಕಿನತ್ತ ಸಾಗಿದೆ.
ಈ ಪಾದಯಾತ್ರೆಯ ಅತಿ ದೊಡ್ಡ ಅಚ್ಚರಿ ಮತ್ತು ರಾಜಕೀಯ ಚರ್ಚೆಗೆ ಕಾರಣವಾಗಿರುವುದು ‘ಹಳದಿ ಶಾಲು’ಗಳ ಪ್ರವೇಶ. ಕೇಸರಿ ಟವಲ್ ಜತೆಗೆ ನಾಯಕರ ಕೊರಳಲ್ಲಿ ರಾರಾಜಿಸಿದ ಹಳದಿ ಶಾಲುಗಳು, ಕೈಯಲ್ಲಿದ್ದ ಕಪ್ಪು ಕಂಬಳಿ ಹಾಗೂ ದಾರಿಯುದ್ದಕ್ಕೂ ಕಾರ್ಯಕರ್ತರು ಮತ್ತು ಸ್ಥಳೀಯರು ನಾಯಕರಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ಕುರಿಮರಿಗಳು ಇಡೀ ಯಾತ್ರೆಯ ಕೇಂದ್ರಬಿಂದುವಾದವು. ಸಾಂಪ್ರದಾಯಿಕ ಕೇಸರಿ ಬಿಟ್ಟು ಹಳದಿ ಹಾಗೂ ಕಂಬಳಿಯ ಸಂಸ್ಕೃತಿಗೆ ಬಿಜೆಪಿ ತೆರೆದುಕೊಂಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ನಾಂದಿ ಹಾಡಿದೆ.
ಮೇಲ್ನೋಟಕ್ಕೆ ಇದು ಸಹಜ ಸ್ವಾಗತದಂತೆ ಕಂಡರೂ, ರಾಜಕೀಯವಾಗಿ ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ಪ್ರಬಲ ಚುನಾವಣಾ ಲೆಕ್ಕಾಚಾರವಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿರುವ ‘ಅಹಿಂದ’ ಮತಬ್ಯಾಂಕ್, ಅದರಲ್ಲೂ ಪ್ರಮುಖವಾಗಿ ಕುರುಬ ಸಮುದಾಯ ಮತ್ತು ಇತರೆ ಹಿಂದುಳಿದ ವರ್ಗಗಳನ್ನು (OBC) ತನ್ನತ್ತ ಸೆಳೆಯಲು ಬಿಜೆಪಿ ಹೂಡಿದ ಹೊಸ ತಂತ್ರವಿದು. ಕನಕದಾಸರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹಿನ್ನೆಲೆಯ ಹಳದಿ ಮತ್ತು ಕಂಬಳಿಯನ್ನು ಅಪ್ಪಿಕೊಳ್ಳುವ ಮೂಲಕ ತಾನು ಹಿಂದುಳಿದವರ ಪರ ಎಂಬ ಬಲವಾದ ಸಂದೇಶವನ್ನು ಪಕ್ಷ ರವಾನಿಸುತ್ತಿದೆ.
ಉತ್ತರ ಕರ್ನಾಟಕ ಬಿಜೆಪಿಯಲ್ಲಿ ನಾಯಕರ ನಡುವಿನ ಮುಸುಕಿನ ಗುದ್ದಾಟ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದವು. ಆದರೆ ಈ ಪಾದಯಾತ್ರೆಯಲ್ಲಿ ಅದೆಲ್ಲವನ್ನೂ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸುವ ಜತೆಗೆ, ಯಾವೊಂದು ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರದಂತೆ ನಾಯಕರು ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಟ್ಟಿದ್ದಾರೆ. ಕೇವಲ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮಾತ್ರ ಜನರ ಮುಂದಿಟ್ಟು, ಹಿಂದುಳಿದ ಸಮುದಾಯಗಳನ್ನು ಭಾವನಾತ್ಮಕವಾಗಿ ಬೆಸೆಯುವ ಕೆಲಸ ಅಚ್ಚುಕಟ್ಟಾಗಿ ನಡೆದಿದೆ.
ಕರ್ನಾಟಕದಲ್ಲಿ ಬಿಜೆಪಿ ಎಂದರೆ ಕೇವಲ ಮೇಲ್ವರ್ಗದ ಪಕ್ಷ ಅಥವಾ ನಿರ್ದಿಷ್ಟ ಲಿಂಗಾಯತ-ಬ್ರಾಹ್ಮಣ ಮತಬ್ಯಾಂಕ್ ಎಂಬ ಹಣೆಪಟ್ಟಿ ಇತ್ತು. ಅದನ್ನು ಕಳಚಿ, ಯಾವುದೇ ಸದ್ದುಗದ್ದಲವಿಲ್ಲದೆ ಒಬಿಸಿ ಮತಗಳನ್ನು ತನ್ನ ತೆಕ್ಕಿಗೆ ತೆಗೆದುಕೊಳ್ಳಲು ಬಿಜೆಪಿ ನಾಯಕತ್ವ ಒಂದು ಹೆಜ್ಜೆ ಕೆಳಗಿಳಿದು ತಳಮಟ್ಟದ ಜನರನ್ನು ತಬ್ಬಿಕೊಂಡಿದೆ. ಹಿಂದುಳಿದ ವರ್ಗಗಳ ವಿಶ್ವಾಸ ಗೆಲ್ಲಲು ವಿಜಯೇಂದ್ರ ಹಾಗೂ ತಂಡ ರೂಪಿಸಿರುವ ಈ ‘ಹಳದಿ ಟವಲ್’ ಪ್ರಯೋಗ, ರಾಜ್ಯದಲ್ಲಿ ಬಿಜೆಪಿಯ ಮತಬ್ಯಾಂಕ್ ವಿಸ್ತರಣೆಗೆ ಅತ್ಯಂತ ಪೂರಕ ವಾತಾವರಣ ಸೃಷ್ಟಿಸಿದೆ.
ಹಿಂದೆ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನೇಕ ನಿಗಮ-ಮಂಡಳಿಗಳು, ಅನುದಾನ ಮತ್ತು ಉನ್ನತ ಸ್ಥಾನಮಾನಗಳನ್ನು ನೀಡಿತ್ತು. ಈಗ ಅದೇ ಅಡಿಪಾಯದ ಮೇಲೆ ನಿಂತು, ಕಾಂಗ್ರೆಸ್ ಪಕ್ಷ ಸಾಂಪ್ರದಾಯಿಕವಾಗಿ ಹೊಂದಿದ್ದ ಒಬಿಸಿ ಪ್ರಾಬಲ್ಯಕ್ಕೆ ಲಗ್ಗೆಯಿಡಲು ಮುಂದಾಗಿದೆ. ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಬಿಜೆಪಿ ನಾಯಕರು ಸ್ವತಃ ಹಳದಿ ಶಾಲು ಧರಿಸಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದ ನೂತನ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ಒಟ್ಟಾರೆಯಾಗಿ, ಲಿಂಗಸುಗೂರು-ಬಳ್ಳಾರಿ ಪಾದಯಾತ್ರೆಯು ಬರೀ ಸರ್ಕಾರದ ವಿರುದ್ಧದ ಜನಾಕ್ರೋಶ ವ್ಯಕ್ತಪಡಿಸುವ ವೇದಿಕೆಯಾಗಿ ಉಳಿಯದೆ, ಹಿಂದುಳಿದ ವರ್ಗಗಳ ಮತಗಳನ್ನು ತನ್ನ ತೆಕ್ಕಿಗೆ ಸೆಳೆದುಕೊಳ್ಳುವ ಅತ್ಯಂತ ಚಾಣಾಕ್ಷ ರಾಜಕೀಯ ನಡೆಯಾಗಿದೆ.
‘ಕೇಸರಿ’ ಜತೆಗೆ ‘ಹಳದಿ’ಯನ್ನು ಮುನ್ನೆಲೆಗೆ ತರುವ ಮೂಲಕ ಬಿಜೆಪಿ ಇಟ್ಟಿರುವ ಈ ಹೊಸ ಹೆಜ್ಜೆ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ, ವಿಶೇಷವಾಗಿ ಅಹಿಂದ ಕೇಸರಿ ಕೋಟೆಯಲ್ಲಿ ‘ಹಳದಿ’ (ಟವಲ್) ಕ್ರಾಂತಿ: ಅಹಿಂದ ಮತಬುಟ್ಟಿಗೆ ಕೈಹಾಕಲು ಬಿಜೆಪಿಯ ರಣತಂತ್ರ, ವಿಜಯೇಂದ್ರ ಪಾದಯಾತ್ರೆಯ ಒಳಮರ್ಮ! ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.