
ಮರ್ಚೆಡ್ ಡೇಸ್ ಸುದ್ದಿ.
ಕನಕಗಿರಿ: ತಾಲೂಕಿನ ಇಂಗಳದಾಳ್ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 107 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆ ಸಂಪೂರ್ಣವಾಗಿ ಒಣಗಿಹೋಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೀವ್ರ ಜಲಕ್ಷಾಮ ತಲೆದೂರಿದೆ. ಇಂಗಳದಾಳ್, ಅಡವಿಭಾವಿ, ಅಡವಿಭಾವಿ ದೊಡ್ಡ ತಾಂಡಾ, ಅಡವಿಭಾವಿ ಚಿಕ್ಕ ತಾಂಡಾ ಹಾಗೂ ಹುಲಸನಹಟ್ಟಿ ಗ್ರಾಮಗಳ ಜೀವನಾಡಿಯಾಗಿದ್ದ ಈ ಬೃಹತ್ ಕೆರೆಯಲ್ಲಿ ಮಳೆಯ ಕೊರತೆಯಿಂದಾಗಿ ಪ್ರಸ್ತುತ ಹನಿ ನೀರೂ ಇಲ್ಲದಂತಾಗಿದೆ. ವಿಶಾಲವಾದ ಕೆರೆಯ ಒಡಲು ಬಿರುಕು ಬಿಟ್ಟಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಕೆರೆ ಬತ್ತಿಹೋದ ಪರಿಣಾಮ ಸುತ್ತಮುತ್ತಲಿನ ಕೃಷಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಮಳೆ ಕೈಕೊಟ್ಟ ಕಾರಣ ರೈತರು ಕೃಷಿ ಚಟುವಟಿಕೆಗಳಿಂದ ವಂಚಿತರಾಗಿದ್ದರೆ, ಮತ್ತೊಂದೆಡೆ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ಗ್ರಾಮಗಳಲ್ಲಿರುವ ಸಾವಿರಾರು ಹಸು, ಎಮ್ಮೆ, ಕುರಿ ಹಾಗೂ ಮೇಕೆಗಳಿಗೆ ಕುಡಿಯುವ ನೀರಿಲ್ಲದೆ ಮೂಕಪ್ರಾಣಿಗಳು ಕಂಗಾಲಾಗಿವೆ. ಮೇವು ಮತ್ತು ನೀರಿನ ಕೊರತೆಯಿಂದಾಗಿ ರೈತರು ಅನಿವಾರ್ಯವಾಗಿ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಆತಂಕ ಎದುರಾಗಿದೆ.
ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಗ್ರಾಮಸ್ಥರಿಗೆ ಒಂದು ಆಶಾಕಿರಣ ಗೋಚರಿಸಿದೆ. ಈ 107 ಎಕರೆ ಕೆರೆಯ ಕೂಗಳತೆಯ ದೂರದಲ್ಲೇ ಕೃಷ್ಣಾ ‘ಬಿ’ ಸ್ಕೀಮ್‌ನ ಪೈಪ್‌ಲೈನ್ ಹಾದುಹೋಗಿದೆ. ಪೈಪ್‌ಲೈನ್‌ನಲ್ಲಿ ನಿರಂತರವಾಗಿ ನೀರು ಹರಿಯುತ್ತಿದ್ದರೂ, ಪಕ್ಕದಲ್ಲೇ ಇರುವ ವಿಶಾಲ ಕೆರೆ ಮಾತ್ರ ಬಣಗುಡುತ್ತಿರುವುದು ಸ್ಥಳೀಯರ ದುರಂತಕ್ಕೆ ಸಾಕ್ಷಿಯಾಗಿದೆ. “ಹತ್ತಿರದಲ್ಲೇ ನೀರಿದ್ದರೂ ನಮಗೆ ಕುಡಿಯಲು ಸಿಗದಂತಾಗಿದೆ” ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೃಷ್ಣಾ ‘ಬಿ’ ಸ್ಕೀಮ್ ಯೋಜನೆಯ ಪೈಪ್‌ಲೈನ್‌ನಿಂದ ಲಿಫ್ಟ್ ಅಥವಾ ಪ್ರತ್ಯೇಕ ಉಪ-ಪೈಪ್‌ಲೈನ್ ಮೂಲಕ ಅಲ್ಪ ಪ್ರಮಾಣದ ನೀರನ್ನು ಈ ಕೆರೆಗೆ ತಿರುಗಿಸಿದರೆ ಇಡೀ ಭಾಗದ ಚಿತ್ರಣವೇ ಬದಲಾಗಲಿದೆ. 107 ಎಕರೆ ವಿಸ್ತೀರ್ಣದ ಈ ಜಲಾಶಯ ಭರ್ತಿಯಾದರೆ ಅಂತರ್ಜಲ ಮರುಪೂರಣಗೊಂಡು ಐದಕ್ಕೂ ಹೆಚ್ಚು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಜೊತೆಗೆ ಸಾವಿರಾರು ಜಾನುವಾರುಗಳಿಗೆ ಜೀವಜಲ ದೊರೆತು ಕೃಷಿ ಬದುಕು ಮತ್ತೆ ಚಿಗುರೊಡೆಯಲಿದೆ.
ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ವಿಳಂಬ ಮಾಡದೆ ಸ್ಥಳ ಪರಿಶೀಲನೆ ನಡೆಸಬೇಕು. ಕೃಷ್ಣಾ ‘ಬಿ’ ಸ್ಕೀಮ್‌ನಿಂದ ಕೆರೆಗೆ ನೀರು ಹರಿಸಲು ತಾಂತ್ರಿಕ ಅನುಮೋದನೆ ನೀಡಿ, ಯುದ್ಧೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳುವ ಮೂಲಕ ಜಾನುವಾರುಗಳ ಪ್ರಾಣ ರಕ್ಷಣೆ ಮಾಡಬೇಕೆಂದು ಇಂಗಳದಾಳ್, ಅಡವಿಭಾವಿ ಹಾಗೂ ಸುತ್ತಮುತ್ತಲಿನ ತಾಂಡಾಗಳ ಸಮಸ್ತ ಗ್ರಾಮಸ್ಥರು ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.