ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ಬೆಂಗಳೂರು / ರಾಯಚೂರು: ಕರ್ನಾಟಕದ ಯುವಜನತೆಯನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನೀತಿ (2025-2032)’ ಅಡಿಯಲ್ಲಿ ‘ವಿಷನ್ ಗ್ರೂಪ್ ಫಾರ್ ಸ್ಕಿಲ್ ಡೆವಲಪ್ಮೆಂಟ್’ ಉನ್ನತ ಸಲಹಾ ಸಮಿತಿಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಮೈಂಡ್ಟ್ರೀ ಸಹ-ಸಂಸ್ಥಾಪಕ ಸುಬ್ರೋಟೋ ಬಾಗ್ಚಿ ಅವರ ಸಾರಥ್ಯದ ಈ ಪ್ರತಿಷ್ಠಿತ ಸಮಿತಿಯಲ್ಲಿ ರಾಯಚೂರಿನ ಹೆಮ್ಮೆಯ ಪುತ್ರ ಚನ್ನಬಸವ ಮಾಲಿಪಾಟೀಲ್ ಅವರು ಮಹತ್ವದ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಜಾಗಿರ್ ವೆಂಕಟಾಪುರದವರಾಗಿದ್ದು, ಶ್ರೀಮತಿ ಈರಮ್ಮ ಮತ್ತು ಮಲ್ಲಿಕಾರ್ಜುನ ಮಾಲಿ ಪಾಟೀಲ್ ದಂಪತಿಯ ಪುತ್ರ ಸದ್ಯ ರಾಯಚೂರಿನ ಡ್ಯಾಡಿ ಕಾಲೋನಿ ನಿವಾಸಿಯಾಗಿದ್ದಾರೆ. ರಾಜ್ಯದ ಕೈಗಾರಿಕಾ ರಂಗ, ಶಿಕ್ಷಣ ಹಾಗೂ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಭವಿಷ್ಯದ ಕೌಶಲ್ಯ ಕಾರ್ಯತಂತ್ರ ರೂಪಿಸುವ ಜವಾಬ್ದಾರಿಯುತ ಸ್ಥಾನಕ್ಕೆ ಇವರನ್ನು ಆಯ್ಕೆ ಮಾಡಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ.
ಈ ಮಹತ್ವದ ಸಾಧನೆಗೆ ಮನೆ ಗುರುಗಳಾದ ನಂದಿ ಮಠದ ಶ್ರೀ ವೇದಮೂರ್ತಿ ಡೋಣ್ಣಯ್ಯ ಸ್ವಾಮಿಗಳು ಹಾಗೂ ಶ್ರೀ ವೇದಮೂರ್ತಿ ಶರಣಬಸವ ಸ್ವಾಮಿಗಳ ಪೂಜ್ಯರು ಚನ್ನಬಸವ ಮಾಲಿಪಾಟೀಲ್ ಅವರಿಗೆ ವಿಶೇಷ ಆಶೀರ್ವಾದ ಸಲ್ಲಿಸಿದ್ದಾರೆ. ಉನ್ನತ ಸಮಿತಿಯಲ್ಲಿ ಸ್ಥಾನ ಪಡೆದು ಯುವಜನತೆಯ ಕೌಶಲ್ಯ ವೃದ್ಧಿಗೆ ಶ್ರಮಿಸುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಚನ್ನಬಸವ ಮಾಲಿಪಾಟೀಲ್ ಅವರ ಈ ಸಾಧನೆಗೆ ಕುಟುಂಬಸ್ಥರಾದ ಶ್ರೀಮತಿ ಲಕ್ಷ್ಮಿ, ಲಿಂಗನಗೌಡ ಮಾಲಿಪಾಟೀಲ್, ಹಂಪಣ್ಣ ಗೌಡ ಸೇರಿದಂತೆ ಅಪಾರ ಬಂಧು-ಮಿತ್ರರು, ಹಿತೈಷಿಗಳು ಹಾಗೂ ಗಣ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಸಾರ್ವಜನಿಕ ಸೇವೆ ಮತ್ತು ಯುವ ಸಬಲೀಕರಣದ ಕಾರ್ಯಗಳಿಗೆ ಶುಭ ಹಾರೈಸಿದ್ದಾರೆ.