![]()
ಸುತ್ತಲಿನ ಗ್ರಾಮಗಳ ಜನರಿಗೆ ಜಾಗೃತಿ ಯಿಂದ ಇರುವಂತೆ ಸೈರನ್ ಮುನ್ನೆಚ್ಚರಿಕೆ.
ಮರ್ಚೆಡ್ ಡೇಸ್ ಸುದ್ದಿ
ಗಂಗಾವತಿ: ತಾಲೂಕಿನ ಏಳುಗುಡ್ಡ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಂದ ಹುಲಿ ಇರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಅನುಸರಿಸಿ ಕಿಷ್ಕಿಂಧವಾಣಿ ಕನ್ನಡ ದಿನಪತ್ರಿಕೆ ಮಾಡಿದ್ದ ಸರಣಿ ವರದಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೆಟ್ಟ ಪ್ರದೇಶಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳಲ್ಲಿ ಹುಲಿ ಇರುವ ಕುರಿತು ಅರಣ್ಯ ಇಲಾಖೆ ದೃಢಪಡಿಸಿದ್ದು, ರವಿವಾರ ತೆಂಬ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಹುಲಿ ಸಂಚಾರ ಮಾಡಿದ್ದನ್ನು ಸೆರೆ ಹಿಡಿಯಲಾಗಿದ್ದು ಜಿಲ್ಲಾ ಅರಣ್ಯ ಇಲಾಖೆಯಿಂದ ಸಾಣಾಪೂರ, ಬಸಾಪೂರ,ಜಬ್ಬಲಗುಡ್ಡ, ಬೆಣಕಲ್,ಆಗೋಲಿ,ವೆಂಕಟಗಿ,ಹನುಮನಹಳ್ಳಿ, ಜಂಗ್ಲಿರಂಗಾಪೂರ ಭಾಗದಲ್ಲಿ ಸೈರನ್ ಹಾಕುವ ಮೂಲಕ ಸ್ಥಳೀಯರು,ಕುರಿಗಾಯಿಗಳು,ದನಗಾಯಿಗಳು ಹಾಗೂ ಗ್ರಾಮಸ್ಥರು ಏಳುಗುಡ್ಡ ಪ್ರದೇಶಕ್ಕೆ ತೆರಳಬಾರದು,ಒಬ್ಬಂಟಿಯಾಗಿ ತೆರಳಬಾರದು,ರಾತ್ರಿ ವೇಳೆ ಮನೆ ಹೊರಗೆ ಮಲಗಬಾರದು,ಕುರಿ,ದನ ಹಾಗೂ ಪಶು ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಬೇಕು.ಹುಲಿ ಕುರಿತು ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ತಿಳಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಏಳು ಗುಡ್ಡ ಪ್ರದೇಶ ಕಳೆದ ಮೂರು ದಿನಗಳಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಹೆಚ್ಚುವರಿಯಾಗಿ ಸಿಸಿ ಕ್ಯಾಮರಾಗಳನ್ನು ಜೋಡಣೆ ಮಾಡಲಾಗಿದೆ.
ಏಳುಗುಡ್ಡ ಪ್ರದೇಶದಲ್ಲಿ ಹುಲಿ ಇರುವ ಕುರಿತು ಸ್ಥಳಿಯರ ಮಾಹಿತಿ ಅನುಸರಿಸಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು,ಸಿಸಿ ಕ್ಯಾಮರಾಗಳಲ್ಲಿ ಹುಲಿ ಸಂಚಾರ ಮಾಡಿರುವ ಕುರಿತು ಚಿತ್ರಗಳು ಮೂಡಿದ್ದು ತೆಂಬ ಪ್ರದೇಶದಲ್ಲಿ ಈ ಚಿತ್ರ ಸ್ಪಷ್ಟವಾಗಿದೆ. ಏಳು ಗುಡ್ಡ ಪ್ರದೇಶದಲ್ಲಿ ಹುಲಿ ಇರುವ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ ಏಳು ಗುಡ್ಡ ಪ್ರದೇಶದ ಸುತ್ತಲಿನ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ವತಿಯಿಂದ ಸೈರನ್ ಮೊಳಗಿಸಿ ಮುನ್ನೆಚ್ಚರಿಕೆ ನೀಡಲಾಗಿದೆ. ಜೊತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಒಂದು ಹುಲಿ ಮಾತ್ರ ಸೆರೆಯಾಗಿದ್ದು, ಈ ಹುಲಿ ಎಲ್ಲಿಂದ ಯಾವಾಗ ಬಂತು ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಹುಲಿ ಇರುವ ಕುರಿತು ವನ್ಯಜೀವಿಗಳು ಸಂರಕ್ಷಣಾ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರಿಗೆ ಮಾಹಿತಿ ನೀಡಿದ್ದು ಅವರ ನಿರ್ದೇಶನದಂತೆ ಕ್ರಮ ವಹಿಸಲಾಗುತ್ತದೆ.
ಬೆಟ್ಟ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಜಾಗೃತಿಯಿಂದ ಇರಬೇಕು.
ಕಳೆದೆರಡು ಮೂರು ತಿಂಗಳಿಂದ ಎಷ್ಟು ಕುರಿ,ಕೋಣ,ದನಗಳನ್ನು ಹುಲಿ ತಿಂದು ಹಾಕಿದೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
-ನಿರ್ಮಾಲ ಎನ್.ಕೆ.ಡಿಸಿಎಫ್(ಐಎಫ್ಎಸ್)ಕೊಪ್ಪಳ.
