
ಮರ್ಚೆಡ್ ಡೇಸ್ ಸುದ್ದಿ | ಗಂಗಾವತಿ,
ಗಂಗಾವತಿ : ನಗರಸಭೆಯಲ್ಲಿ ಸಾರ್ವಜನಿಕರ ಪತ್ರ ವ್ಯವಹಾರ ಹಾಗೂ ಅರ್ಜಿಗಳನ್ನು ಸ್ವೀಕರಿಸಬೇಕಾದ ಪ್ರಮುಖ ಆವಕ-ಜಾವಕ ವಿಭಾಗವು ಕಚೇರಿ ವೇಳೆಯಲ್ಲೂ ಬೀಗ ಹಾಕಿಕೊಂಡು ಕುಳಿತಿರುವುದು, ಜನಸಾಮಾನ್ಯರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಂಗಳವಾರ ದಿನಾಂಕ 11-08-2026 ರಂದು ಬೆಳಿಗ್ಗೆ 11:35 ರ ಸುಮಾರಿಗೆ ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಆವಕ-ಜಾವಕ ವಿಭಾಗದ ಬಾಗಿಲು ಹಾಫ್ ಟಿಕೆಟ್ ಸಿನಿಮಾದ ಹಾಗೆ ಸಂಪೂರ್ಣ ಬಂದ್ ಆಗಿರುವುದು ಕಂಡುಬಂತು. ಕಚೇರಿ ಸಮಯದಲ್ಲಿ ಕನಿಷ್ಠ ಒಬ್ಬ ಸಿಬ್ಬಂದಿಯೂ ಸ್ಥಳದಲ್ಲಿ ಇರಲಿಲ್ಲ.
ದೂರದೂರುಗಳಿಂದ ಅರ್ಜಿಗಳು, ಮನವಿ ಪತ್ರಗಳು ಹಾಗೂ ವಿವಿಧ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ ಸಾರ್ವಜನಿಕರು ಗಂಟೆಗಟ್ಟಲೆ ಬಾಗಿಲು ಕಾಯ್ದು ಸುಸ್ತಾದರು. ಇತ್ತ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಯಾರು ಇದ್ದಾರೆ ನಮಗೆ ಗೊತ್ತಿಲ್ಲ”, “ಇವತ್ತು ಬಂದಿಲ್ಲ ಬಿಡಿ” ಎಂಬ ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯ ನೂರಾರು ಅರ್ಜಿಗಳು, ದೂರುಗಳು, ತೆರಿಗೆ ಪಾವತಿ ಮತ್ತು ಎನ್ಒಸಿ (NOC) ಸಂಬಂಧಿತ ಪತ್ರಗಳು ನಗರಸಭೆಗೆ ಬರುತ್ತವೆ. ಇಂತಹ ಅತಿಮುಖ್ಯ ವಿಭಾಗದಲ್ಲೇ ಸಿಬ್ಬಂದಿ ಗೈರುಹಾಜರಾಗಿರುವುದು ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸರ್ಕಾರಿ ಕಚೇರಿಗೆ ಬಂದ್ರೆ ನೌಕರರು ಬಚ್ಚಿಟ್ಕೊಳ್ಳೋದು ಕಾಮನ್ ಬಿಡಿ,ಆದ್ರೆ ಆಫೀಸ್ ಬಾಗಿಲಿಗೇ ಬೀಗ ಹಾಕಿ ಮಾಯವಾಗೋದ್ರಲ್ಲಿ ಈ ಸಿಬ್ಬಂದಿ ನಂಬರ್ ಒನ್, ಎಂದು ಬಂದಿದ್ದ ನಾಗರಿಕರು ವ್ಯಂಗ್ಯವಾಡಿದರು. “ಪತ್ರ ಕೊಟ್ಟರೂ ಸ್ವೀಕರಿಸಲು ಯಾರೂ ಇಲ್ಲ, ರಸೀದಿ ಕೇಳಿದ್ರೆ ದೇವ್ರೆ ಗತಿ. ಇದು ಜನರಿಗೆ ಮಾಡುತ್ತಿರುವ ಮೋಸ ಅಲ್ಲದೆ ಮತ್ತೇನು?” ಎಂದು ತೀವ್ರ ಆಕ್ರೋಶ ಹೊರಹಾಕಿದರು.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಆವಕ-ಜಾವಕ ವಿಭಾಗಕ್ಕೆ ಖಾಯಂ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಸಾರ್ವಜನಿಕರಿಗೆ ನಿತ್ಯ ಪರದಾಟಕ್ಕೆ ಬ್ರೇಕ್ ಹಾಕಬೇಕು ಎಂದು ನಗರದ ಜನತೆ ಒತ್ತಾಯಿಸಿದ್ದಾರೆ.