ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು: 2026-27ನೇ ಸಾಲಿನ ಮುಂಗಾರು ಹಂಗಾಮಿನ ಡಿಜಿಟಲ್ ಬೆಳೆ ಸಮೀಕ್ಷೆ ಕಾರ್ಯಕ್ಕೆ ರಾಯಚೂರು ಜಿಲ್ಲೆಯಾದ್ಯಂತ ಚಾಲನೆ ದೊರೆತಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರವನ್ನು ದಾಖಲಿಸಲು ಆಗಸ್ಟ್ 31ರ ಗಡುವು ವಿಧಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ರೈತರು ತಾವೇ ಸ್ವತಃ ತಮ್ಮ ಮೊಬೈಲ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸರಳೀಕೃತ ‘ರೈತರ ಬೆಳೆ ಸಮೀಕ್ಷೆ 2026-27’ ಆ್ಯಪ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ.
ಆಸಕ್ತ ರೈತರು ಗೂಗಲ್ ಪ್ಲೇ-ಸ್ಟೋರ್‌ನಿಂದ ಅಥವಾ ಕ್ಯೂಆರ್ ಕೋಡ್ ಬಳಸಿಕೊಂಡು ಈ ಮೊಬೈಲ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹೊಸ ಆ್ಯಪ್ ಫ್ರೂಟ್ಸ್ ತಂತ್ರಾಂಶದ ಎಫ್‌ಐಡಿ (FID) ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದರಿಂದ, ಸಮೀಕ್ಷೆ ನಡೆಸಲು ರೈತರು ಕಡ್ಡಾಯವಾಗಿ ಎಫ್‌ಐಡಿ ಸಂಖ್ಯೆಯನ್ನು ಹೊಂದಿರಬೇಕು. ಒಂದು ವೇಳೆ ಎಫ್‌ಐಡಿ ಇಲ್ಲದ ರೈತರು ತಕ್ಷಣವೇ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ತೋಟಗಾರಿಕೆ ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಎಫ್‌ಐಡಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ರೈತರು ದಾಖಲಿಸುವ ಈ ಬೆಳೆ ಮಾಹಿತಿಯು ಸರ್ಕಾರದ ಬಹುಮುಖಿ ಯೋಜನೆಗಳ ಅನುಷ್ಠಾನಕ್ಕೆ ಅತ್ಯಗತ್ಯವಾಗಿದೆ. ಪ್ರವಾಹ ಮತ್ತು ಬರಗಾಲದ ಸಂದರ್ಭದಲ್ಲಿ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ವಿಮಾ ಪರಿಹಾರದ ಪರಿಶೀಲನೆಗೆ ಇದು ಪ್ರಮುಖ ಆಧಾರವಾಗಿದೆ. ಅಲ್ಲದೆ, ಕೃಷಿ ವಿಸ್ತೀರ್ಣ ವರದಿ, ಬೆಳೆ ಕಟಾವು ಪ್ರಯೋಗಗಳು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸಲು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಈ ಸಮೀಕ್ಷೆ ಸಹಕಾರಿಯಾಗಲಿದೆ.
ಜಿಲ್ಲೆಯ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಸಮಯದೊಳಗೆ ತಮ್ಮ ಜಮೀನಿನ ಬೆಳೆ ವಿವರವನ್ನು ಸರ್ಕಾರಕ್ಕೆ ವರದಿ ಮಾಡಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿ ಅಥವಾ ತಾಂತ್ರಿಕ ಸಹಾಯಕ್ಕಾಗಿ ಬೆಳೆ ಸಮೀಕ್ಷೆಯ ಸಹಾಯವಾಣಿ ಸಂಖ್ಯೆ: 1800 425 3553ಕ್ಕೆ ಕರೆ ಮಾಡಬಹುದು ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.