ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು:ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಜುಲೈ 10ರಂದು ರಾಯಚೂರು ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂಬಂಧ ಅವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿದ್ದು, ಅಧ್ಯಕ್ಷರು ಜುಲೈ 9ರ ಸಂಜೆ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಆರಂಭಿಸಿ, ರಾತ್ರಿ 11 ಗಂಟೆಗೆ ನಗರಕ್ಕೆ ಆಗಮಿಸಲಿದ್ದಾರೆ.
ತಮ್ಮ ಪ್ರವಾಸದ ಅಂಗವಾಗಿ, ಜುಲೈ 10ರ ಬೆಳಿಗ್ಗೆ 10 ಗಂಟೆಗೆ ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಅವರು ನೇರ ಸಂವಾದ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿರುವ ಶ್ರೀ ಅಮರೇಶ್ವರ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ವೇದಾಂತ ಸಮ್ಮೇಳನದ ‘ಮಾತೃ ನಮನ’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಗಳ ನಂತರ ಅಂದು ರಾತ್ರಿ 10.30ಕ್ಕೆ ರಾಯಚೂರು ನಗರಕ್ಕೆ ಮರಳಲಿದ್ದಾರೆ. ಬಳಿಕ ರಾತ್ರಿ 11.45ಕ್ಕೆ ರೈಲು ಮಾರ್ಗವಾಗಿ ಪುನಃ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಈ ಭೇಟಿಯು ಜಿಲ್ಲೆಯ ಶೈಕ್ಷಣಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ವಲಯದ ಮೇಲೆ ಗಮನ ಹರಿಸಲಿದ್ದಾರೆ.