ಮರ್ಚೆಡ್ ಡೇಸ್ ಸುದ್ದಿ.
ರಾಯಚೂರು (ಜೂನ್ 23): ಆಹಾರ ಇಲಾಖೆಯಿಂದ ಸಿಂಧನೂರಿನ ಸಗಟು ಗೋದಾಮುಗಳಲ್ಲಿ ವಿವಿಧ ಪ್ರಕರಣಗಳ ಅಡಿಯಲ್ಲಿ ಜಪ್ತಿ ಮಾಡಲಾಗಿರುವ ಬರೋಬ್ಬರಿ 47.29 ಕ್ವಿಂಟಾಲ್ ಅಕ್ಕಿ ಹಾಗೂ 217.78 ಕ್ವಿಂಟಾಲ್ ಜೋಳವನ್ನು ಜುಲೈ 2 ರಂದು ಬಹಿರಂಗ ಹರಾಜು ಮಾಡಲಾಗುತ್ತಿದೆ. ಆಸಕ್ತ ಅರ್ಹ ವ್ಯಾಪಾರಿಗಳು ಈ ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಸಿಂಧನೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ ಮತ್ತು ಸಮಯ: ಜುಲೈ 02, 2026 ರಂದು ಮಧ್ಯಾಹ್ನ 12:00 ಗಂಟೆಗೆ.
ಸ್ಥಳ: ಕೆ.ಎಫ್.ಸಿ.ಎಸ್.ಸಿ (KFCSC) ಸಗಟು ಗೋದಾಮು, ಸಿಂಧನೂರು.
ಅಂದು ಪೂರ್ವಾಹ್ನ 11:30 ಗಂಟೆಯೊಳಗಾಗಿ ಸ್ಥಳದಲ್ಲಿ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳಬದು.
ಎಪಿಎಂಸಿ ಪರವಾನಿಗೆದಾರರು, ಪರವಾನಿಗೆ ಪಡೆದ ಸಗಟು/ಚಿಲ್ಲರೆ ವ್ಯಾಪಾರಿಗಳು, ಕಮಿಷನ್ ಏಜೆಂಟರು, ಅಕ್ಕಿ ಗಿರಣಿ ಮಾಲೀಕರು ಮತ್ತು ದೊಡ್ಡ ಪ್ರಮಾಣದ ಬಳಕೆದಾರ ಸಂಸ್ಥೆಗಳಿಗೆ ಮಾತ್ರ ಅವಕಾಶವಿದೆ.
ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು/ಸಂಸ್ಥೆಗಳು ಮತ್ತು ಸಾರ್ವಜನಿಕ ವಿತರಣಾ ಪದ್ಧತಿ (PDS) ಯಡಿ ಕೆಲಸ ನಿರ್ವಹಿಸುತ್ತಿರುವವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಮುಂಗಡ ಠೇವಣಿ (EMD): ಹರಾಜಿನಲ್ಲಿ ಪಾಲ್ಗೊಳ್ಳುವವರು ₹20,000 ಗಳ ಇ.ಎಂ.ಡಿ ಮೊತ್ತವನ್ನು ‘ಜಿಲ್ಲಾಧಿಕಾರಿಗಳು, ರಾಯಚೂರು’ ಇವರ ಹೆಸರಿನಲ್ಲಿ ಡಿಡಿ (DD) ಮೂಲಕ ಮುಂಗಡವಾಗಿ ಪಾವತಿಸಬೇಕು.
ಹರಾಜಿನಲ್ಲಿ ಭಾಗವಹಿಸಲು ಬರುವವರು ತಮ್ಮ ಎರಡು ಪಾಸ್‌ಪೋರ್ಟ್ ಸೈಜ್ ಭಾವಚಿತ್ರ, ವ್ಯಾಪಾರಿ/ಸಂಸ್ಥೆಯ ನೋಂದಣಿ ಪತ್ರ (ಪರವಾನಿಗೆ) ಹಾಗೂ ಆಧಾರ್ ಕಾರ್ಡ್‌ನ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ಜಪ್ತಿ ಮಾಡಲಾದ ಧಾನ್ಯಗಳನ್ನು ಇದ್ದ ಸ್ಥಿತಿಯಲ್ಲೇ ಹರಾಜು ಮಾಡಲಾಗುತ್ತಿರುವುದರಿಂದ ಬಿಡ್ಡುದಾರರು ಹರಾಜಿಗಿಂತ ಮುನ್ನ (ಪೂರ್ವಾಹ್ನ 11:00 ಗಂಟೆಯೊಳಗೆ) ಗೋದಾಮಿಗೆ ಭೇಟಿ ನೀಡಿ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳಬಹುದು.
ಹರಾಜು ಮುಗಿದ ತಕ್ಷಣ ಗರಿಷ್ಠ ಬಿಡ್ ಮಾಡಿದ ಮೊದಲ ಇಬ್ಬರನ್ನು ಹೊರತುಪಡಿಸಿ, ಉಳಿದ ಬಿಡ್ಡುದಾರರಿಗೆ ಸ್ಥಳದಲ್ಲೇ ಇ.ಎಂ.ಡಿ ಮೊತ್ತವನ್ನು ಹಿಂದಿರುಗಿಸಲಾಗುವುದು.
ಹರಾಜು ಪ್ರಕ್ರಿಯೆ ಮುಗಿದು, ಜಿಲ್ಲಾಧಿಕಾರಿಗಳ ಅನುಮೋದನೆ ದೊರೆತ ನಂತರ ನಿಗದಿತ ದಿನಾಂಕದೊಳಗೆ ಪೂರ್ಣ ಹಣ ಹಾಗೂ ಎಪಿಎಂಸಿ ಸೆಸ್/ಇತರ ಶುಲ್ಕಗಳನ್ನು ಪಾವತಿಸಬೇಕು. ಆದೇಶ ದೊರೆತ 3 ದಿನಗಳ ಒಳಗಾಗಿ ಸ್ವಂತ ಖರ್ಚಿನಲ್ಲಿ ಧಾನ್ಯಗಳನ್ನು ಗೋದಾಮಿನಿಂದ ಎತ್ತುವಳಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿ ಹಾಗೂ ಕರಾರುಗಳಿಗಾಗಿ ರಾಯಚೂರಿನ ಆಹಾರ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.