ಮರ್ಚಡ್ ಡೇಸ್ ಸುದ್ದಿ.
ರಾಯಚೂರು ಜೂನ್ 22 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಜೂನ್ 28 ರಂದು ಜರುಗುವ ಹುಟ್ಟಿನಿಂದ 05 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಲಾಗುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವಿವಿಧ ಇಲಾಖೆಗಳಿಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಅಭಿಯಾನದ ಯಶಸ್ವಿಗೆ ಶ್ರಮಿಸಬೇಕೆಂದು ಜಿಲ್ಲಾಧಿಕಾರಿಗಳು ಪೂವಿತಾ ಎಸ್. ಅವರು ಹೇಳಿದರು.
ಜೂನ್ 22ರ ಸೋಮವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಷ್ಟಿಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ರಾಯಚೂರು, ಸಿಂಧನೂರು, ನಗರ ಹಾಗೂ ಮಾನವಿ, ಲಿಂಗಸೂಗೂರು, ದೇವದುರ್ಗ ಪಟ್ಟಣಗಳಲ್ಲಿ ವಿವಿಧ ಸ್ಥಳಗಳಲ್ಲಿ ಅನುಷ್ಠಾನ ಮಾಡುವ ಪೋಲಿಯೋ ಬೂತ್‌ಗಳ ಮಾಹಿತಿ ಪಡೆದು, ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 2,60,002 ಮಕ್ಕಳನ್ನು ಗುರುತಿಸಲಾಗಿದ್ದು, ಮಕ್ಕಳಿಗೆ ಲಸಿಕೆ ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 1,132 ಬೂತ್‌ಗಳು ಹಾಗೂ ಸಂತೆ, ಜಾತ್ರೆ, ಮಾರುಕಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಜನ ವಸತಿ ಪ್ರದೇಶ ಸೇರಿದಂತೆ ಮುಂತಾದವುಗಳಲ್ಲಿ ಲಸಿಕೆ ಹಾಕಲು 53 ಟ್ರಾನ್ಸಿಟ್ ಬೂತ್‌ಗಳು ಹಾಗೂ ವಲಸೆ ಪ್ರದೇಶ, ಕಟ್ಟಡ ಕಾಮಗಾರಿ, ಇಟ್ಟಿಗೆ ಬಟ್ಟಿ, ಕಬ್ಬು ಕಡೆಯುವ ಜಾಗೆ, ಕುರಿಹಟ್ಟಿ, ಕೊಳಚೆ ಪ್ರದೇಶ, ತೋಟದ ಮನೆ, ಮುಂತಾದ ಸ್ಥಳಗಳಲ್ಲಿರುವ ಮಕ್ಕಳಿಗೆ ಲಸಿಕೆ ಹಾಕಲು 33 ಸಂಚಾರಿ ತಂಡ ಹಾಗೂ 248 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು ನಗರದ ಪ್ರದೇಶದ ಜನತೆಯು ತಮ್ಮ ಮೊಬೈಲ್‌ಗಳ ಸಹಾಯದಿಂದ ಪೂರ್ವದಲ್ಲಿಯೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಲು ಎಲ್ಲ ಗ್ರೂಪ್‌ಗಳಿಗೆ ಶೇರ್ ಮಾಡಲು ತಿಳಿಸಿ ನಿಗದಿತ ಗುರಿ ಸಾಧಿಸಲು ಸೂಚಿಸಿದರು.
ಪಲ್ಸ್ ಪೋಲಿಯೋ ಕಾರ್ಯದಲ್ಲಿ ಸಾಲು ರಜೆಗಳ ಹಿನ್ನಲೆ ಮುಂಚಿತವಾಗಿ ಬೂತ್‌ಗಳನ್ನು ಹೊಂದಿದ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಸ್ವಚ್ಚಗೊಳಿಸಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಪಾಲಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲು ಯಾವುದೆ ನ್ಯೂನ್ಯತೆಯಿಲ್ಲದೆ ಸಿದ್ದಪಡಿಸಲು ಸೂಚಿಸಿದರು.
ಜೂನ್ 23, 24 ಹಾಗೂ 25ರ ಮೂರು ದಿನಗಳ ಕಾಲ ಪ್ರೀ ಆ್ಯಕ್ಟಿವಿಟಿ ಮೂಲಕ ಅಂಗನವಾಡಿ, ಖಾಸಗಿ ಮೊಂಟೇಸ್ಸ್ರಿಗಳಲ್ಲಿ ಎಲ್ಲ 05 ವರ್ಷದ ಮಕ್ಕಳಿಗೆ ಲಸಿಕೆ ಲಸಿಕೆ ಹಾಕಲು ಜಿಲ್ಲಾಧಿಕಾರಿಗಳು ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವ ನಿಗದಿಯಂತೆ ಎಲ್ಲ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಸಂರಕ್ಷಿಸಲು ಸತತವಾಗಿ ವಿದ್ಯುತ್ ಪೊರೈಕೆ, ಲಸಿಕೆ ಸಾಗಿಸಲು ವಾಹನಗಳ ಒದಗಿಸುವಿಕೆ, ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಜಿಂಗಲ್ಸ್ ಹಾಕಲು ಎಲ್ಲ ಸ್ಥಳಿಯ ಸಂಸ್ಥೆಯವರಿಗೆ. ಎರಡು ದಿನಗಳ ಕಾಲ ಸ್ಥಳೀಯ ಹಂತದಲ್ಲಿ ಜಾಥಾ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಾದ್ಯಂತ ಈಗಿನಿಂದಲೇ ಮನೆ ಭೇಟಿಯ ಮೂಲಕ ಪಾಲಕರಿಗೆ ಮಾಹಿತಿ ನೀಡಬೇಕು. ಪತ್ರಿಕೆಗಳಲ್ಲಿ ಪ್ರಚಾರ, ಮೈಕಿಂಗ್, ಟಾಂ ಟಾಂ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಸಂಬಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪೋಸ್ಟರ್ ಬಿಡುಗಡೆ: ರಾಷ್ಟಿಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಪಲ್ಸ್ ಪೋಲಿಯೋ ಪ್ರಚಾರದ ಪೋಸ್ಟರ್ ಹಾಗೂ ಲಸಿಕಾ ಕೇಂದ್ರದ ಕ್ಯೂ ಆರ್ ಕೋಡ್‌ನ್ನು ವಿವಿಧ ಗಣ್ಯರಿಂದ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ರಾಯಚೂರು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು, ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಧಿಕಾರಿ ಡಾ.ನಂದಿತಾ ಎಮ್. ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಆರತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಶಿವಮಾನ್ಯಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.