ಮರ್ಚೆಡ್ ಡೇಸ್ ಸುದ್ದಿ.
ಕೊಪ್ಪಳ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಇನ್ಮುಂದೆ ಕಡ್ಡಾಯವಾಗಿ ‘ಕರ್ತವ್ಯ’ (ಕಾಮ್ಸ್ – KAAMS) ಮೊಬೈಲ್ ಅಪ್ಲಿಕೇಷನ್ನಲ್ಲಿ ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ರಾಜ್ಯದ ಎಲ್ಲಾ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಸೇವೆಗೆ ಯಾವುದೇ ಅಡ್ಡಿಯಾಗದಂತೆ, ಎಲ್ಲಾ ಸರ್ಕಾರಿ ನೌಕರರು ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಇದರ ಭಾಗವಾಗಿ, ಪ್ರತಿಯೊಬ್ಬ ನೌಕರನೂ ದಿನನಿತ್ಯದ ಹಾಜರಾತಿಯನ್ನು ‘ಕರ್ತವ್ಯ’ ಮೊಬೈಲ್ ಆಪ್ ಮೂಲಕವೇ ದಾಖಲಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ.
ರಾಜ್ಯ ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜೂನ್ 16ರ ವೇಳೆಗೆ ಇಡೀ ರಾಜ್ಯದಲ್ಲಿ ಇನ್ನೂ ಸುಮಾರು 2,13,925 ಅಧಿಕಾರಿ ಮತ್ತು ನೌಕರರು ಈ ಮೊಬೈಲ್ ಆಪ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಈ ಬೇಜವಾಬ್ದಾರಿತನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಬಾಕಿ ಉಳಿದಿರುವ ಎಲ್ಲಾ ನೌಕರರನ್ನು ತಕ್ಷಣವೇ ನೋಂದಾಯಿಸಲು ಸೂಚನೆ ನೀಡಿದ್ದಾರೆ ಹಾಗೂ ಈ ಕುರಿತು ಕೈಗೊಂಡ ಕ್ರಮಗಳ ವರದಿಯನ್ನು 7 ದಿನಗಳ ಒಳಗಾಗಿ ಸಲ್ಲಿಸುವಂತೆ ಗಡುವು ವಿಧಿಸಿದ್ದಾರೆ.
ರಾಜ್ಯ ಸರ್ಕಾರದ ಈ ಕಠಿಣ ನಿರ್ದೇಶನದ ಬೆನ್ನಲ್ಲೇ ಕೊಪ್ಪಳ ಜಿಲ್ಲಾಧಿಕಾರಿಗಳು ಆಕ್ಷನ್ ಮೂಡ್ಗೆ ಜಾರಿದ್ದಾರೆ. ಜಿಲ್ಲಾ ಮಟ್ಟದ ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಎ, ಬಿ, ಸಿ ಮತ್ತು ಡಿ ವೃಂದದ ಎಲ್ಲಾ ನೌಕರರು ‘ಕರ್ತವ್ಯ’ ಆಪ್ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ಕೈಗೊಂಡಿರುವ ಕ್ರಮಗಳ ಸಮಗ್ರ ವರದಿಯನ್ನು ಮುಂಬರುವ ಮೂರು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಪ್ಪದೇ ಸಲ್ಲಿಸಬೇಕು ಎಂದು ಡಿಸಿ ಕಟ್ಟುನಿಟ್ಟಿನ ಪ್ರಕಟಣೆ ಹೊರಡಿಸಿದ್ದಾರೆ.