ಮರ್ಚೆಡ್ ಡೇಸ್ ಸುದ್ದಿ.
ಗಂಗಾವತಿ : ವಿದ್ಯಾನಗರದಿಂದ ಗಂಗಾವತಿ ಕಡೆಗೆ ಬರುತ್ತಿದ್ದ ಫ್ಲಿಪ್ಕಾರ್ಟ್ ಡೆಲಿವರಿ ಆಟೋಗೆ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ, ಆಟೋ ರಸ್ತೆ ಪಕ್ಕಕ್ಕೆ ಉಲ್ಟಾ ಹೊಡೆದು ಬಿದ್ದಿರುವ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಹಾಗೂ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ.
ಗೇಸುಧರಾಜ್ ಅವರಿಗೆ ಸೇರಿದ ಮೂರು ಚಕ್ರದ ಆಟೋದಲ್ಲಿ ಫ್ಲಿಪ್ಕಾರ್ಟ್ ಸರಕುಗಳನ್ನು ಡೆಲಿವರಿ ಮಾಡಲು ವಿದ್ಯಾನಗರದಿಂದ ಗಂಗಾವತಿ ಕಡೆಗೆ ಬರಲಾಗುತ್ತಿತ್ತು. ಇದೇ ವೇಳೆ ಸಿಂಗರಾಯ ಕೊಂಡ ಎಂಬುವವರಿಗೆ ಸೇರಿದ ಅಶೋಕ್ ಲೇಲ್ಯಾಂಡ್ ಲಾರಿಯು ಅಕ್ಕಿ ಲೋಡ್ ಮಾಡಿಕೊಂಡು ಬರುತ್ತಿತ್ತು. ರೈಲ್ವೆ ಸ್ಟೇಷನ್ ಮತ್ತು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಬರುತ್ತಿದ್ದಂತೆ, ಆಟೋವನ್ನು ಓವರ್ಟೇಕ್ ಮಾಡಲು ಹೋದ ಲಾರಿ ಚಾಲಕ ಅತಿ ವೇಗವಾಗಿ ಬಂದು ಆಟೋಗೆ ಟಚ್ ಮಾಡಿದ್ದಾನೆ.
ಲಾರಿ ಡಿಕ್ಕಿಯಾದ ರಭಸಕ್ಕೆ ಆಟೋ ಪಲ್ಟಿಯಾಗಿ ರಸ್ತೆ ಪಕ್ಕದ ಗದ್ದೆಗೆ ಬಿದ್ದಿದೆ. ಅಪಘಾತ ಎಸಗಿದ ತಕ್ಷಣ ಲಾರಿ ಚಾಲಕ ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಅಪಘಾತ ಮಾಡಿ ನಿಲ್ಲಿಸದೆ ಹೊರಟ ಲಾರಿಯನ್ನು ಕಂಡ ಸ್ಥಳೀಯ ಸಾರ್ವಜನಿಕರು ಹಾಗೂ ಅಲ್ಲೇ ಇದ್ದ ಇತರ ತ್ರಿ ವೀಲರ್ ಆಟೋ ಚಾಲಕರು ತಕ್ಷಣವೇ ಲಾರಿಯನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಜುಲೈ ನಗರದ ಬಳಿ ಲಾರಿಯನ್ನು ಅಡ್ಡಗಟ್ಟಿ ಹಿಡಿಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.