- ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ರಾಜಕೀಯ ಪಕ್ಷಗಳ ಯಶಸ್ಸು ಹಲವು ಬಾರಿ ಸಾಂಸ್ಥಿಕ ಬಲಕ್ಕಿಂತ ಹೆಚ್ಚಾಗಿ ಒಬ್ಬನೇ ಒಬ್ಬ ನಾಯಕನ (ಏಕವ್ಯಕ್ತಿ ಆಧಾರಿತ) ‘ಬ್ರಾಂಡ್’ ಮತ್ತು ವರ್ಚಸ್ಸಿನ ಮೇಲೆ ನಿರ್ಧಾರವಾಗಿದೆ. 1970 ಮತ್ತು 80ರ ದಶಕದಲ್ಲಿ ದೇಶ ಕಂಡ ‘ಇಂದಿರಾ ಗಾಂಧಿ-ಗಾಂಧಿ ಎಂಬ ಬ್ರಾಂಡ್ ಮತ್ತು 2014ರ ನಂತರ ಭಾರತೀಯ ರಾಜಕಾರಣವನ್ನು ಆವರಿಸಿಕೊಂಡಿರುವ ‘ನರೇಂದ್ರ ಮೋದಿ-ಮೋದಿ ಎಂಬ ಬ್ರಾಂಡ್ ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಅತಿರೇಕದ ಜನಪ್ರಿಯತೆಯಿಂದ ಆರಂಭವಾಗಿ, ನಂತರದ ದಿನಗಳಲ್ಲಿ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗುವ ರಾಜಕೀಯ ಚಕ್ರದ ಸ್ಥಿತ್ಯಂತರಗಳು ಈ ಎರಡೂ ಅವಧಿಗಳಲ್ಲಿ ಎದ್ದುಕಾಣುತ್ತವೆ.
ಇಂದಿರಾ ಅಲೆ ಮತ್ತು ಗಾಂಧಿ ಎಂಬ ಬ್ರಾಂಡ್ ಕಾಂಗ್ರೆಸ್ಸಿನ ಉದಯ ಕಾಲ
70ರ ದಶಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ “ಹಸ್ತದ ಗುರುತು ಮತ್ತು ಬಿ-ಫಾರಂ ಸಿಕ್ಕರೆ ಸಾಕು, ಅಭ್ಯರ್ಥಿ ಯಾರೇ ಆದರೂ ಗೆಲುವು ನಿಶ್ಚಿತ” ಎನ್ನುವಂತಹ ವಾತಾವರಣವಿತ್ತು. ಇದಕ್ಕೆ ಪ್ರಮುಖ ಕಾರಣ ಇಂದಿರಾ ಗಾಂಧಿಯವರ ನಾಯಕತ್ವ ಮತ್ತು ಅವರು ಜನಸಾಮಾನ್ಯರ ಮನಸ್ಸನ್ನು ತಲುಪಲು ರೂಪಿಸಿದ ಜನಪ್ರಿಯ ಯೋಜನೆಗಳಾದ
‘ಗರೀಬಿ ಹಠಾವೋ’ (ಬಡತನ ನಿರ್ಮೂಲನೆ) ಘೋಷಣೆ, ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ, ಬ್ಯಾಂಕುಗಳ ರಾಷ್ಟ್ರೀಕರಣ, ದೇವದಾಸಿ ರದ್ದತಿ, ವೃದ್ಧಾಪ್ಯ ಹಾಗೂ ವಿಧವಾ ವೇತನಗಳ ಜಾರಿ ಮತ್ತು ಐಐಟಿ, ಐಐಎಂನಂತಹ ಶಿಕ್ಷಣ ನೀತಿಗಳ ವಿಸ್ತರಣೆ ಇತ್ಯಾದಿ ಜನಪ್ರಿಯ ಯೋಜನೆಗಳು ಕಾಂಗ್ರೆಸ್ ಪಕ್ಷವನ್ನು ಬಡವರ, ಶೋಷಿತರ ದೀನ ದಲಿತರ ಧ್ವನಿಯಾಗಿ ಬಿಂಬಿಸಿದವು.
ಈ ಯೋಜನೆಗಳ ಯಶಸ್ಸು ಎಷ್ಟಿತ್ತೆಂದರೆ, “ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ” ಎಂಬ ಘೋಷಣೆ ರಾಜಕೀಯದ ಗಗನ ಮುಟ್ಟಿತು. ನಾಯಕತ್ವದ ದೂರದೃಷ್ಟಿ ಮತ್ತು ಜನಪ್ರಿಯ ಯೋಜನೆಗಳು ಸೇರಿ ಕಾಂಗ್ರೆಸ್ ಅನ್ನು ಅಜೇಯ ಬ್ರಾಂಡ್ ಆಗಿ ಪರಿವರ್ತಿಸಿದ್ದವು.
ಮೋದಿ ಯುಗ ಮತ್ತು ‘ಬ್ರಾಂಡ್ ಬಿಜೆಪಿ’ ಸ್ಥಿತ್ಯಂತರ
ಕಾಂಗ್ರೆಸ್ ಪಕ್ಷದ ದೀರ್ಘಾವಧಿ ಆಡಳಿತದಲ್ಲಿದ್ದ ಆಂತರಿಕ ಒಡಕು ವಂಶಪಾರಂಪರಿಕ ರಾಜಕಾರಣ, ಭ್ರಷ್ಟಾಚಾರ ಮತ್ತು ನೀತಿ ನಿರೂಪಣೆಯ ಮಂದಗತಿಯಿಂದ ಬೇಸತ್ತಿದ್ದ ಭಾರತೀಯ ಮತದಾರರಿಗೆ 2014ರಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಒಂದು ಹೊಸ ಭರವಸೆಯಾಗಿ ಕಂಡಿತು.
2014ರ ಭರವಸೆಗಳು ಮತ್ತು ಆಡಳಿತ ‘ಸ್ವಚ್ಛ ಭಾರತ ಅಭಿಯಾನ’, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ, ಜಿಎಸ್ಟಿ ಮತ್ತು ಡಿಜಿಟಲೀಕರಣದ ಸ್ಮಾರ್ಟ್ ಸಿಟಿ ಮೂಲಕ ಆರ್ಥಿಕ ಪಾರದರ್ಶಕತೆ, ಕಪ್ಪುಹಣದ ವಿರುದ್ಧದ ಹೋರಾಟ ಹಾಗೂ ಭಾರತವನ್ನು ಆಧುನಿಕ ಶಕ್ತಿಯನ್ನಾಗಿ ಅಭಿವೃದ್ಧಿಯ ಮಂತ್ರದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತು.
ಕಾಂಗ್ರೆಸ್ನ ಹಳೆಯ ದಿನಗಳಂತೆಯೇ, ಪ್ರಸ್ತುತ ಬಿಜೆಪಿಯಲ್ಲೂ “ಮೋದಿ ಅವರ ಮುಖ ಮತ್ತು ಫೋಟೋ ಇದ್ದರೆ ಸಾಕು, ಸ್ಥಳೀಯ ಅಭ್ಯರ್ಥಿಯ ಯೋಗ್ಯತೆ ಏನೇ ಇರಲಿ ಗೆಲ್ಲಬಹುದು” ಎಂಬ ಭಾವನೆ ರಾಜಕೀಯ ನಾಯಕರಗಳಲ್ಲಿ ಮೂಡಿದೆ ಮೋದಿ’ಎಂಬ ಬ್ರ್ಯಾಂಡ್ ಪಕ್ಷವನ್ನು ಸತತ ಯಶಸ್ಸಿನತ್ತ ಮುನ್ನಡೆಸುತ್ತಿದೆ.
ಪ್ರಸ್ತುತ ಸವಾಲುಗಳು ಮತ್ತು ಸಾರ್ವಜನಿಕ ಅಸಮಾಧಾನದ ಮಜಲುಗಳು ನೋಡುವುದಾದರೆ
ಯಾವುದೇ ಒಂದು ಬ್ರಾಂಡ್ ಕೇವಲ ಭಾವನಾತ್ಮಕ ವಿಷಯಗಳ ಮೇಲೆ ದೀರ್ಘಕಾಲ ನಿಲ್ಲಲು ಸಾಧ್ಯವಿಲ್ಲ ಎಂಬುದು ಇತಿಹಾಸ ಸಾರುವ ಸತ್ಯ. ಅಂದು ಇಂದಿರಾ ಗಾಂಧಿಯವರ ಅತಿಯಾದ ಅಧಿಕಾರ ಕೇಂದ್ರೀಕರಣ ಮತ್ತು ತುರ್ತು ಪರಿಸ್ಥಿತಿಯ ನಿರ್ಧಾರಗಳು ಹೇಗೆ ಅಸಮಾಧಾನಕ್ಕೆ ಕಾರಣವಾದವೋ, ಇಂದು ಬಿಜೆಪಿಯ ಸೃಜಿತ ಬ್ರಾಂಡ್ ಮೇಲೂ ಸಾರ್ವಜನಿಕ ವಲಯದಲ್ಲಿ ವಿಮರ್ಶೆಗಳು ಕೇಳಿಬರುತ್ತಿವೆ.
2014ರಲ್ಲಿ ಭ್ರಷ್ಟಾಚಾರ ಮುಕ್ತ, ಉದ್ಯೋಗ ಸೃಷ್ಟಿ, ಆರ್ಥಿಕ ಸುಧಾರಣೆ ಮತ್ತು ಬಡವರ ಸಬಲೀಕರಣದ ಭರವಸೆಗಳೊಂದಿಗೆ ಬಂದ ಆಡಳಿತ, ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಕೇಂದ್ರೀಕರಣ, ಕೇಸರಿಕರಣ, ಹಿಂದುತ್ವ ಮತ್ತು ಧಾರ್ಮಿಕ ಧ್ರುವೀಕರಣದ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಬಲವಾಗುತ್ತಿದೆ.
ಭರವಸೆ ಮತ್ತು ವಾಸ್ತವದ ನಡುವಿನ ಕಂದಕ ರಾಮಮಂದಿರ ನಿರ್ಮಾಣದಂತಹ ಸಾಂಸ್ಕೃತಿಕ ವಿಷಯಗಳು ಯಶಸ್ವಿಯಾಗಿದ್ದರೂ, ನಿರುದ್ಯೋಗ, ಬೆಲೆ ಏರಿಕೆ, ಮತ್ತು ಆರ್ಥಿಕ ಅಸಮಾನತೆಯಂತಹ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆಕ್ರೋಶ ಜನರಲ್ಲಿದೆ. “ನಾವು ಬಯಸಿದ ಆಡಳಿತ ಇದಲ್ಲ, ಅವರು ಹೇಳಿದ ಆಡಳಿತವೂ ಇದಲ್ಲ” ಎಂಬ ಆಲೋಚನೆ ನಿಧಾನವಾಗಿ ಮತದಾರರಲ್ಲಿ ಮೂಡುತ್ತಿದೆ.
ಹೊಸತನದ ಕೊರತೆ ಮತ್ತು ನಾಯಕತ್ವದ ಅತಿ ಅವಲಂಬನೆ ಕೇವಲ ಧಾರ್ಮಿಕ ಭಾವನೆಗಳು ಮತ್ತು ಗಲಾಟೆಗಳ ಸುತ್ತ ರಾಜಕಾರಣ ಸುತ್ತುತ್ತಿದ್ದರೆ, ಜನಸಾಮಾನ್ಯರಿಗೆ ದಿನನಿತ್ಯದ ಬದುಕಿನ ಭದ್ರತೆ ಇಲ್ಲದಂತಾಗುತ್ತದೆ. ಸ್ಥಳೀಯ ನಾಯಕತ್ವವನ್ನು ಬೆಳೆಸದೆ, ಕೇವಲ ಒಬ್ಬರೇ ನಾಯಕರ ವರ್ಚಸ್ಸಿನ ಮೇಲೆ ಇಡೀ ಪಕ್ಷವನ್ನು ಅವಲಂಬಿತವಾಗಿಸುವುದು. ದೀರ್ಘಾವಧಿಯಲ್ಲಿ ಅಪಾಯಕಾರಿ ಎಂಬುದು ರಾಜಕೀಯ ವಿಶ್ಲೇಷಕರ ಕಳವಳ ವ್ಯಕ್ತವಾಗುತ್ತಿದೆ.
ಅಂದು ಇಂದಿರಾ ಗಾಂಧಿಯವರ ಬ್ರಾಂಡ್ ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಗೆ ಸಿಲುಕಿದಾಗ ಮತ್ತು ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳು ಹೆಚ್ಚಾದಾಗ ಜನರೇ ಪರ್ಯಾಯವನ್ನು ಹುಡುಕಿದರು. ಇಂದಿನ ಬಿಜೆಪಿ ಸರ್ಕಾರವೂ ಕೇವಲ ಭಾವನಾತ್ಮಕ ವಿಚಾರಗಳನ್ನೇ ನೆಚ್ಚಿಕೊಂಡು, ಆಡಳಿತದಲ್ಲಿ ಯಾವುದೇ ಹೊಸತನ ಅಥವಾ ಜನಸಾಮಾನ್ಯರ ಆರ್ಥಿಕ ಸುಧಾರಣೆಯ ದೂರದೃಷ್ಟಿಯ ಯೋಜನೆಗಳನ್ನು ತರದೇ ಹೋದರೆ, ಸಾರ್ವಜನಿಕರ ಈ ಭ್ರಮನಿರಸನವು ‘ಮೋದಿ ಬ್ರ್ಯಾಂಡ್, ಮತ್ತು ‘ಬ್ರಾಂಡ್ ಬಿಜೆಪಿ’ಯ ಜನಪ್ರಿಯತೆಯ ಅಂತ್ಯಕ್ಕೆ ನಾಂದಿ ಹಾಡಬಹುದು. ಯಾವುದೇ ಬ್ರಾಂಡ್ ಶಾಶ್ವತವಲ್ಲ. ಜನರ ಬದಲಾಗುವ ಅಗತ್ಯತೆಗಳಿಗೆ ಸ್ಪಂದಿಸುವ ನಾಯಕತ್ವ ಮತ್ತು ಪಕ್ಷ ಮಾತ್ರ ಪ್ರಜಾಪ್ರಭುತ್ವದಲ್ಲಿ ಉಳಿಯುತ್ತದೆ. ಎಂಬುದೇ ಪ್ರಸ್ತುತ ರಾಜಕೀಯದ ವಿಶ್ಲೇಷಣೆಯಿಂದ ತಿಳಿಯುವದು ಸತ್ಯ.
ತಾಯಪ್ಪ ಮರ್ಚೆಡ್
ಪತ್ರಕರ್ತರು ಗಂಗಾವತಿ