
ಮರ್ಚೆಡ್ ಡೇಸ್ ಸುದ್ದಿ|ಬಳ್ಳಾರಿ.
ಬಳ್ಳಾರಿ: ಕೌಟುಂಬಿಕ ಕಲಹವೊಂದು ಮೂರು ಜೀವಗಳ ದುರಂತ ಅಂತ್ಯಕ್ಕೆ ಕಾರಣವಾದ ಆಘಾತಕಾರಿ ಘಟನೆ ಬಳ್ಳಾರಿ ನಗರದ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಬಲದಂಡೆಯ ಎಚ್‌ಎಲ್‌ಸಿ ಕಾಲುವೆಯಲ್ಲಿ ನಡೆದಿದೆ. ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ತಮ್ಮ ಇಬ್ಬರು ಎಳೆಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದ್ದು, ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಕ್ಕಳ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಳ್ಳಾರಿ ನಗರದ ಮಿಲ್ಲರ್ ಪೇಟೆ ನಿವಾಸಿ ಸಿಮ್ರಾನ್ (26) ಹಾಗೂ ಅವರ ಮಕ್ಕಳಾದ ಮಹಮ್ಮದ್ ಅಯಾನ್ (3) ಮತ್ತು ಆಯುಷ್ (1.5) ಈ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳು. ನಿನ್ನೆ ಬೆಳಗ್ಗೆ ಸಿಮ್ರಾನ್ ಅವರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಸ್ಥಳೀಯರಲ್ಲಿ ದುಃಖ ಮಡುಗಟ್ಟಿದೆ.
ಸಿಮ್ರಾನ್ ಅವರ ಪತಿ ಸದ್ದಾಂ ಹುಸೇನ್ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮತ್ತೊಬ್ಬ ಮಹಿಳೆಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಸಿಮ್ರಾನ್ ಅವರ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗಿತ್ತು ಹಾಗೂ ತವರು ಮನೆಯಿಂದ ₹10 ಲಕ್ಷ ತರುವಂತೆ ಪೀಡಿಸಲಾಗುತ್ತಿತ್ತು ಎಂದು ಸಿಮ್ರಾನ್ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಕೌಟುಂಬಿಕ ಕಲಹ ಮತ್ತು ಪತಿಯ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಘಟನೆಯ ಹಿಂದಿನ ನಿಖರ ಕಾರಣಗಳು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಈ ಸಂಬಂಧ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.