ಕೈಮುಗಿದು ‘ತಪ್ಪಾಯ್ತು ಬಿಟ್ಬಿಡಿ’ ಎಂದು ಅಂಗಲಾಚಿದ ಮದ್ರಾಸ್ ಭೂಪ.
ಮರ್ಚೆಡ್ ಡೇಸ್|ವಿಶೇಷ ವರದಿ.
ಚೆನ್ನೈ :ಸಾಮಾಜಿಕ ಜಾಲತಾಣಗಳು ರಾತ್ರೋರಾತ್ರಿ ಯಾರನ್ನು ಸ್ಟಾರ್ ಮಾಡುತ್ತವೋ, ಯಾರಿಗೆ ಯಾವ ರೀತಿ ಶಾಕ್ ಕೊಡುತ್ತವೋ ಊಹಿಸುವುದೂ ಅಸಾಧ್ಯ. ಇಂಥದ್ದೇ ಒಂದು ನಗಬೇಕೋ ಅಳಬೇಕೋ ತಿಳಿಯದ ವಿಚಿತ್ರ ಹಾಗೂ ಸ್ವಾರಸ್ಯಕರ ಘಟನೆ ಮದ್ರಾಸ್ (ಚೆನ್ನೈ) ನಿವಾಸಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವೀರಮಣಿ ಎಂಬಾತನಿಗೆ ಎದುರಾಗಿದೆ.
ಹಬ್ಬದ ಸಡಗರ ಹತ್ತಿರವಾಗುತ್ತಿದ್ದಂತೆ ವೀರಂ ತನ್ನ ಫಾಲೋವರ್ಸ್ ಬಳಿ ತಮಾಷೆಯಾಗಿ, “ಹಬ್ಬ ಬರ್ತಿದೆ, ನನಗೆ ಸ್ವೀಟ್ ಬಾಕ್ಸ್ ಕಳಿಸಿ” ಎಂದು ತನ್ನ ಪೂರ್ಣ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಆ ಒಂದು ಪೋಸ್ಟ್ ಆತನ ನೆಮ್ಮದಿಯನ್ನೇ ಕಸಿಯುತ್ತದೆ ಎಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ.
ಪೋಸ್ಟ್ ನೋಡಿದ ನೆಟ್ಟಿಗರು ಕೇವಲ ಸಿಹಿ ತಿನಿಸುಗಳನ್ನಷ್ಟೇ ಅಲ್ಲದೆ, ದುಬಾರಿ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ನಾನಾ ಬಗೆಯ ಗೃಹೋಪಯೋಗಿ ವಸ್ತುಗಳನ್ನು ಆತನ ವಿಳಾಸಕ್ಕೆ ಆರ್ಡರ್ ಮಾಡಲು ಆರಂಭಿಸಿದರು.
ಇಲ್ಲಿ ಅಸಲಿ ಟ್ವಿಸ್ಟ್ ಏನೆಂದರೆ—ಬಂದ ವಸ್ತುಗಳೆಲ್ಲವೂ ‘ಕ್ಯಾಶ್ ಆನ್ ಡೆಲಿವರಿ’ (COD)! ಅಂದರೆ ಹಣವನ್ನು ವೀರಂ ಮನೆಯ ಬಾಗಿಲಲ್ಲೇ ಕೊಡಬೇಕಿತ್ತು. ಆರಂಭದಲ್ಲಿ ಬಂದ ನಾಲ್ಕೈದು ಪಾರ್ಸೆಲ್ಗಳನ್ನು ರದ್ದುಗೊಳಿಸಿದರೂ, ದಿನವಿಡೀ ಸಾಲುಸಾಲಾಗಿ ಬಂದು ನಿಲ್ಲುತ್ತಿದ್ದ ಡೆಲಿವರಿ ವಾಹನಗಳು ಮತ್ತು ಲಕ್ಷಾಂತರ ರೂಪಾಯಿಗಳ ಬಿಲ್ಗಳನ್ನು ಕಂಡು ಆತ ಕಂಗಾಲಾಗಿ ಹೋದ.
ಕೊನೆಗೆ ನೆಟ್ಟಿಗರ ಈ ಭರ್ಜರಿ ಕಾಟಕ್ಕೆ ಬೇಸತ್ತ ವೀರಮಣಿ, ಮತ್ತೆ ಕ್ಯಾಮೆರಾ ಮುಂದೆ ಬಂದು ಕಣ್ಣೀರಿಡದ ಕೊರತೆಯಷ್ಟೇ ಬಾಕಿ ಎಂಬಂತೆ ವಿಡಿಯೋ ಮಾಡಿದ್ದಾನೆ. “ದಯವಿಟ್ಟು ಕೈಮುಗಿದು ಬೇಡಿಕೊಳ್ಳುತ್ತೇನೆ, ನನ್ನಿಂದ ತಪ್ಪಾಗಿದೆ, ನನ್ನನ್ನು ಬಿಟ್ಟುಬಿಡಿ. ಇನ್ಮುಂದೆ ಈ ವಿಳಾಸ, ಫೋನ್ ನಂಬರ್ ಎರಡನ್ನೂ ಬದಲಾಯಿಸುತ್ತೇನೆ, ದಯವಿಟ್ಟು ಕ್ಷಮಿಸಿ” ಎಂದು ಬೇಡಿಕೊಂಡಿದ್ದಾನೆ.
ಸದ್ಯ ಈ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, “ಅತಿಯಾದ ಆಸೆ ಮತ್ತು ಅಜಾಗರೂಕತೆ ನೆಟ್ಟಿಗರ ಕೈಗೆ ಸಿಕ್ಕರೆ ಪರಿಣಾಮ ಹೀಗೇ ಇರುತ್ತದೆ” ಎಂದು ಜನರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.