Home ಸುದ್ದಿ ಇ-ಕೆವೈಸಿ ಗಡುವು ತಂದ ಸಂಕಷ್ಟ: ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನವೋ ಜನ, ಸೇವೆ ನಿಧಾನ!
ಸುದ್ದಿ

ಇ-ಕೆವೈಸಿ ಗಡುವು ತಂದ ಸಂಕಷ್ಟ: ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನವೋ ಜನ, ಸೇವೆ ನಿಧಾನ!

Share
Share
 ಸರಿಯಾದ ಸಿದ್ಧತೆ ಇಲ್ಲದೆ ಎಡವಟ್ಟು; ಬೆಳ್ಳಂಬೆಳಗ್ಗೆಯಿಂದ ಬಿಸಿಲಲ್ಲೇ ಕಾಯುತ್ತಿರುವ ಗ್ರಾಮೀಣ ಮಹಿಳೆಯರು, ವೃದ್ಧರು.
ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.

ಗಂಗಾವತಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿ (ರೇಷನ್ ಕಾರ್ಡ್) ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಕ್ಟೋಬರ್ 20 ರ ಅಂತಿಮ ಗಡುವನ್ನು ನಿಗದಿಪಡಿಸಿದೆ. ಈ ಗಡುವಿನೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಪಡಿತರ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ ಎಂಬ ಆತಂಕದಲ್ಲಿ ಗ್ರಾಮೀಣ ಭಾಗದ ಫಲಾನುಭವಿಗಳು ದಿನಬೆಳಗಾಗುವುದರೊಳಗೆ ತಾಲೂಕು ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ. ಆದರೆ, ಇಂತಹ ಮಹತ್ವದ ಹಾಗೂ ಬೃಹತ್ ಯೋಜನೆಗೆ ತಾಲೂಕು ಆಡಳಿತವು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ನೇರ ಕಾರಣವಾಗಿದೆ.

ಗಂಗಾವತಿ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾದ ಇ-ಕೆವೈಸಿ ಕೇಂದ್ರಕ್ಕೆ ತಾಲೂಕಿನ ನೂರಾರು ಹಳ್ಳಿಗಳಿಂದ ಪ್ರತಿದಿನ ಸಾವಿರಾರು ಜನರು ಧಾವಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಈ ಪ್ರಕ್ರಿಯೆ ನಡೆಯುತ್ತಿದ್ದರೂ, ದಿನವೊಂದಕ್ಕೆ ಕೇವಲ 10 ರಿಂದ 20 ಟೋಕನ್‌ಗಳನ್ನು ಮಾತ್ರ ವಿತರಿಸಿ ಕೆಲಸ ಮುಗಿಸಲಾಗುತ್ತಿದೆ. ಕಚೇರಿಯ ಮುಂದೆ ಜನಸಾಗರವೇ ನೆರೆದಿದ್ದರೂ ಸೀಮಿತ ಸಂಖ್ಯೆಯಲ್ಲಿ ಆನ್‌ಲೈನ್ ನೋಂದಣಿ ಮಾಡುತ್ತಿರುವುದು ಜನರ ತಾಳ್ಮೆ ಕೆಡಿಸಿದೆ. ಸಾವಿರಾರು ಜನರಿದ್ದರೂ ನೂರರ ಗಡಿಯನ್ನೂ ದಾಟದ ಸೇವಾ ವೇಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ದೂರದ ಹಳ್ಳಿಗಳಿಂದ ನಸುಕಿನ ಜಾವದಲ್ಲೇ ಮಕ್ಕಳೊಂದಿಗೆ ಬರುವ ಬಡ ಕೂಲಿಕಾರ್ಮಿಕರು, ವೃದ್ಧರು ಹಾಗೂ ಮಹಿಳೆಯರು ತಮ್ಮ ದಿನಗೂಲಿ ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಅನ್ನ, ನೀರು ಹಾಗೂ ನಿದ್ದೆಯಿಲ್ಲದೆ ಹಗಲಿರುಳು ಕಚೇರಿಯ ಆವರಣದಲ್ಲೇ ಠಿಕಾಣಿ ಹೂಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಿಂದೆ ಆಧಾರ್ ಕಾರ್ಡ್ ನೋಂದಣಿ ಸಂದರ್ಭದಲ್ಲಿ ಜನರು ಅನುಭವಿಸಿದ ತೀವ್ರ ಕಿರುಕುಳ ಮತ್ತು ನೂಕುನುಗ್ಗಲು ಈಗ ಇ-ಕೆವೈಸಿ ನೆಪದಲ್ಲಿ ಮರುಕಳಿಸಿದ್ದು, ವ್ಯವಸ್ಥೆಯ ವೈಫಲ್ಯಕ್ಕೆ ಬಡ ಜನತೆ ತತ್ತರಿಸಿ ಹೋಗಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡುವ ವ್ಯವಸ್ಥೆ, ಕುಡಿಯುವ ನೀರು ಅಥವಾ ನೆರಳಿನ ವ್ಯವಸ್ಥೆಯೂ ಕಚೇರಿ ಆವರಣದಲ್ಲಿ ಕಂಡುಬರುತ್ತಿಲ್ಲ. ಕಾರ್ಡ್ ರದ್ದಾದರೆ ರೇಷನ್ ಸಿಗುವುದಿಲ್ಲ ಎಂಬ ಭಯದಿಂದ ಜನರು ಉಸಿರು ಬಿಗಿಹಿಡಿದುಕೊಂಡು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ನಿಲ್ಲುತ್ತಿದ್ದಾರೆ. ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಮುಂಚಿತವಾಗಿ ಸರಿಯಾದ ಯೋಜನೆ ರೂಪಿಸಿದ್ದರೆ ಇಂತಹ ಗೊಂದಲದ ವಾತಾವರಣ ಉಂಟಾಗುತ್ತಿರಲಿಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಸಹಕಾರ ಪಡೆದು ಶಾಂತಿಯುತ ಸರದಿ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೆ ತರಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ತಾಲೂಕು ಕೇಂದ್ರದ ಮೇಲಿನ ಒತ್ತಡ ತಪ್ಪಿಸಲು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸೇವಾ ಕೇಂದ್ರಗಳ ಮೂಲಕ ಅಥವಾ ಮೊಬೈಲ್ ತಂಡಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ನಡೆಸಲು ಆಹಾರ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಾಲಿ ಕಚೇರಿಯಲ್ಲಿ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಸರ್ವರ್ ಸಮಸ್ಯೆಗಳನ್ನು ಪರಿಹರಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ.

ಸರ್ಕಾರ ಯಾವುದೇ ಹೊಸ ನಿಯಮ ತಂದಾಗಸಾಮಾನ್ಯ ಜನರೇ ಇಂತಹ ಸಂಕಷ್ಟ ಎದುರಿಸಬೇಕಾಗಿರುವುದು ವಿಪರ್ಯಾಸ. “ಜನರ ಗೋಳು ಕೇಳಲು ಅಧಿಕಾರಿಗಳಿಗೆ ಕಣ್ಣು-ಕಿವಿ ಇಲ್ಲವೇ?” ಎಂದು ಸ್ಥಳದಲ್ಲಿ ನೆರೆದ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನಾದರೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡು, ಗಡುವು ಮುಗಿಯುವ ಮುನ್ನ ಇ-ಕೆವೈಸಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಜನಸಾಮಾನ್ಯರ ನೆರವಿಗೆ ಧಾವಿಸಬೇಕಿದೆ.

Share
Related Articles
ಅಂಕಣಸುದ್ದಿ

ಒಂದೇ ಒಂದು ಗುಂಡು ಹಾರಿಸದೆ ಮಾಯಾನಗರಿ ಮುಂಬೈ ಆಳಿದ ‘ಸುಲ್ತಾನ್’!

ಬಡತನದ ಕೂಲಿಯಿಂದ ಬಾಲಿವುಡ್ ಬೆರಗಾಗುವಂತೆ ಬೆಳೆದ 'ಹಾಜಿ ಮಸ್ತಾನ್' ಎಂಬ ಬ್ರಾಂಡ್ ಡಾನ್‌ನದ ರೋಚಕ ಕಥೆ...

ಸುದ್ದಿ

ಕವಿತೆ ವಾಚಕರೇ ಪ್ರೇಕ್ಷಕರು, ಪ್ರೇಕ್ಷಕರೇ ವಾಚಕರು: ಸಾಹಿತ್ಯ ಸಮ್ಮೇಳನಗಳಲ್ಲಿ ಕಳೆಗುಂದುತ್ತಿದೆಯೇ( ಸಾರ್ವಜನಿಕ) ಸಾಹಿತ್ಯದ ಆಸಕ್ತಿ?

  ಮರ್ಚೆಡ್ ಡೇಸ್ ಸುದ್ದಿ|ಕಾರಟಗಿ. ಕಾರಟಗಿ (ಕೊಪ್ಪಳ): ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮವಾಗಬೇಕಿದ್ದ...

ಸುದ್ದಿ

ಗಂಗಾವತಿಯ ಹಿರಿಯ ಉದ್ಯಮಿ ಬಸವರಾಜ ಅಮರಪ್ಪ ಅರಳಿ ನಿಧನ; ನಾಳೆ ಅಂತ್ಯಕ್ರಿಯೆ.

  ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. ಹೃದಯಾಘಾತದಿಂದ ಲಿಂಗೈಕ್ಯರಾದ ಸಾಹಿತಿ ನಾಗಭೂಷಣ ಅರಳಿ ಅವರ ಹಿರಿಯ ಸಹೋದರ;...

ಸುದ್ದಿ

ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ಕಿಷ್ಕಿಂಧವಾಣಿ ಕಿಬಾಣ ಕಾರ್ಟೂನ್‌ಗೆ ಮನ್ನಣೆ.

        ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ. *ನ.21ರಂದು ಬೆಂಗಳೂರಿನಲ್ಲಿ ಪ್ರದರ್ಶನ – ಕಾರ್ಟೂನಿಸ್ಟ್...