
ಮರ್ಚೆಡ್ ಡೇಸ್|ವಿಶೇಷ ವರದಿ.
ಗಂಗಾವತಿ:ರಾಜಕಾರಣ ಎಂದರೆ ಕೇವಲ ಅಧಿಕಾರ, ಚುನಾವಣೆ ಹಾಗೂ ಮತಗಳ ಲೆಕ್ಕಾಚಾರವಲ್ಲ; ಬದಲಾಗಿ ಅದು ಜನರ ಕಣ್ಣೀರೊರೆಸುವ, ಬಡವರ ಬದುಕಿಗೆ ಆಸರೆಯಾಗುವ ನಿಸ್ವಾರ್ಥ ಸೇವೆ ಎಂಬುದನ್ನು ತಮ್ಮ ಇಡೀ ಜೀವನದುದ್ದಕ್ಕೂ ಸಾಬೀತುಪಡಿಸಿದ ಹಿರಿಯ ಮುತ್ಸದ್ಧಿ, ಮಾಜಿ ಸಂಸದ ಎಚ್. ಜಿ. ರಾಮುಲು (ಎಚ್.ಆರ್.ಜಿ). ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ಗೌರವದಿಂದ ‘ಧಣಿ’ ಎಂದೇ ಕರೆಯಲ್ಪಡುವ ಇವರು, ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಾಗಿ ಗಂಗಾವತಿಯ ಜನಮಾನಸದಲ್ಲಿ ಬೆರೆತುಹೋದ ಅಚ್ಚಳಿಯದ ಬ್ರ್ಯಾಂಡ್.
ಗಂಗಾವತಿಯ ನಗರದ ಪ್ರಸಿದ್ಧ ‘ವೈಟ್ ಹೌಸ್’ ಎಂದರೆ ಕೇವಲ ಒಂದು ನಿವಾಸವಲ್ಲ; ಅದು ಹಸಿದು ಬಂದವರಿಗೆ ಅನ್ನ, ಕಷ್ಟ ಹೊತ್ತು ಬಂದವರಿಗೆ ಸಾಂತ್ವನ ನೀಡುವ ಪುಣ್ಯಕ್ಷೇತ್ರ. ಸೂರು ಇಲ್ಲದ, ಬಡ-ಬಗ್ಗರಿಗೆ ಸ್ವತಃ ಜಾಗ ನೀಡಿ ಬದುಕಿಗೆ ದಾರಿ ತೋರಿದ ಕಾರಣದಿಂದಲೇ ಇವತ್ತಿಗೂ ಗಂಗಾವತಿಯ ಸುತ್ತಮುತ್ತಲಿನ ಹಲವು ಬಡಾವಣೆಗಳು ಹಾಗೂ ಕ್ಯಾಂಪುಗಳು ರಾಮುಲು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಜಾತಿ, ಮತ, ಪಂಥಗಳ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ನೆರವಾದ ಈ ಅಜಾತಶತ್ರು ನಾಯಕನಿಗೆ ಅಪಾರ ದೈವಭಕ್ತಿಯೂ ಉಂಟು. ರಾಜ್ಯ ಮಟ್ಟದ ಯಾವುದೇ ಪ್ರಭಾವಿ ನಾಯಕರು ಈ ಗಂಗಾವತಿಗೆ ಕಾಲಿಟ್ಟರೂ, ರಾಮುಲು ದಣಿಯವರನ್ನು ಭೇಟಿ ಮಾಡಿ ಕುಶಲೋಪರಿ ಮಾತನಾಡದೆ ಮುಂದೆ ಸಾಗುವುದಿಲ್ಲ ಎಂಬುದು ಅವರ ಪ್ರಭಾವಕ್ಕೆ ಸಾಕ್ಷಿ.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬರೊಬ್ಬರಿ ನಾಲ್ಕು ಬಾರಿ (1980, 1984, 1989 ಮತ್ತು 1999) ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಪಿ. ವಿ. ನರಸಿಂಹ ರಾವ್ ಅವರಂತಹ ರಾಷ್ಟ್ರೀಯ ನಾಯಕರ ನಿಕಟವರ್ತಿಯಾಗಿದ್ದ ಇವರು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಹಿಂದುಳಿದ ಭಾಗದ ಹಕ್ಕೊತ್ತಾಯಗಳನ್ನು ಬಲವಾಗಿ ಮಂಡಿಸಿದ್ದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತರಕ್ಷಣೆ, ನೀರಾವರಿ ಕಾಲುವೆಗಳ ಆಧುನೀಕರಣಕ್ಕೆ ಸತತವಾಗಿ ಶ್ರಮಿಸಿದರು.
ಮುನಿರಾಬಾದ್-ಮೆಹಬೂಬ್ನಗರ ರೈಲ್ವೆ ಮಾರ್ಗದ ಯೋಜನೆಗೆ ಅಡಿಪಾಯ ಹಾಕಿ, ಗಂಗಾವತಿ ಭಾಗಕ್ಕೆ ರೈಲ್ವೆ ಹಾಗೂ ರಸ್ತೆ ಸಂಪರ್ಕ ಒದಗಿಸಲು ಕಾರಣಕರ್ತರಾದರು.
ಭತ್ತದ ಕಣಜದ ರೂವಾರಿ: ಗಂಗಾವತಿಯನ್ನು ಅಕ್ಕಿ ಗಿರಣಿಗಳ (ರೈಸ್ ಮಿಲ್) ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಬೆಳೆಸುವಲ್ಲಿ ವ್ಯಾಪಾರಸ್ಥರು ಮತ್ತು ರೈತರಿಗೆ ಬೆನ್ನೆಲುಬಾಗಿ ನಿಂತರು.
ಪ್ರತಿವರ್ಷ ಅವರ ಜನ್ಮದಿನ ಬಂತೆಂದರೆ ಸಾಕು, ಗಂಗಾವತಿ ಹಾಗೂ ಸುತ್ತಮುತ್ತಲ ಹಳ್ಳಿ-ಕ್ಯಾಂಪುಗಳಲ್ಲಿ ಜನ ತಾವಾಗಿಯೇ ಗುಂಪುಗೂಡಿ ಹಬ್ಬದಂತೆ ಸಂಭ್ರಮಿಸುತ್ತಾರೆ. ಬುಡಗುಂಪದ ಶ್ರೀ ಬುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಅಭಿಮಾನಿಗಳು ನೆರೆದು ಧಣಿಯವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದು ಸಾಮಾನ್ಯ ದೃಶ್ಯ. “ನಮಗೆ ಸೂರು ಕೊಟ್ಟ ಧಣಿ, ಕಷ್ಟದಲ್ಲಿ ಕೈಹಿಡಿದ ನಾಯಕ” ಎಂದು ಸಾಮಾಜಿಕ ಬದುಕಿಗೆ ಸಂದ ದೊಡ್ಡ ಗೌರವ.
ತಮ್ಮ ಸುದೀರ್ಘ ಸಾರ್ವಜನಿಕ ಜೀವನವನ್ನು ಜನಸೇವೆಗೇ ಮುಡಿಪಾಗಿಟ್ಟು, 92ರ ಹರೆಯದಲ್ಲೂ ಎಲ್ಲರ ಪ್ರೀತಿ-ಗೌರವಗಳನ್ನು ಹೊತ್ತು ಶತಾಯುಷಿಯತ್ತ ಹೆಜ್ಜೆಯಿಡುತ್ತಿರುವ ಎಚ್.ಆರ್.ಜಿ. ರಾಮುಲು ಅವರು ಕಲ್ಯಾಣ ಕರ್ನಾಟಕ ರಾಜಕಾರಣದ ಸುವರ್ಣ ಅಧ್ಯಾಯವಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ.