ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು: ಸ್ನೇಹಿತರೊಂದಿಗೆ ಕೃಷ್ಣಾ ನದಿಗೆ ಈಜಲು ತೆರಳಿದ್ದ 25 ವರ್ಷದ ಯುವಕನೊಬ್ಬ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದೇವಸೂಗೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಮಸ್ಕಿ ತಾಲೂಕಿನ ಅನ್ವರಿ ಗ್ರಾಮದ ನಿವಾಸಿ ಶಿವು (25) ಎಂದು ಗುರುತಿಸಲಾಗಿದೆ. ಈತ ಮಾನ್ವಿ ತಾಲೂಕಿನಲ್ಲಿರುವ ತನ್ನ ಮಾವನ ಮನೆಯಲ್ಲಿ ನೆಲೆಸಿದ್ದು, ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದನು.
ಭಾನುವಾರ ರಜೆಯ ಹಿನ್ನೆಲೆಯಲ್ಲಿ ಶಿವು ತನ್ನ ಸ್ನೇಹಿತರೊಂದಿಗೆ ದೇವಸೂಗೂರು ಸಮೀಪದ ಕೃಷ್ಣಾ ನದಿಗೆ ತೆರಳಿದ್ದನು. ಈ ವೇಳೆ ನದಿಯಲ್ಲಿ ಈಜಲು ನೀರಿಗೆ ಇಳಿದಾಗ, ನೀರಿನ ಹರಿವು ತೀವ್ರವಾಗಿದ್ದ ಕಾರಣ ದಡ ಸೇರಲಾಗದೆ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.
ಶಿವು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಗಾಬರಿಗೊಂಡ ಸ್ನೇಹಿತರು ತಕ್ಷಣ ಸ್ಥಳೀಯರಿಗೆ ಕೂಗಿ ಕರೆದು ವಿಷಯ ತಿಳಿಸಿದ್ದಾರೆ. ಸ್ಥಳೀಯರು ಮತ್ತು ಸ್ನೇಹಿತರು ಭಾನುವಾರ ಸಂಜೆಯವರೆಗೂ ನದಿಯಲ್ಲಿ ಹುಡುಕಾಟ ನಡೆಸಿದರೂ ಆತನ ಸುಳಿವು ಪತ್ತೆಯಾಗಿರಲಿಲ್ಲ.
ಬಳಿಕ ಸೋಮವಾರ ಮುಂಜಾನೆ ಮತ್ತೆ ಶೋಧ ಕಾರ್ಯ ಮುಂದುವರಿಸಿದಾಗ ನದಿಯಲ್ಲಿ ಶಿವು ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.