ಮರ್ಚೆಡ್ ಡೇಸ್ ಸುದ್ದಿ|ರಾಯಚೂರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ದಿಂದ ಉಂಟಾದ ಪರಿಣಾಮವಾಗಿ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಜ್ವಾಲೆಗಳು ಇಡೀ ಮನೆಯನ್ನು ಆವರಿಸಿಕೊಂಡಿವೆ.
ಈ ದುರ್ಘಟನೆಯಲ್ಲಿ ಗಂಗಣ್ಣ ಅಮರಪ್ಪ ತಲೇಖಾನ ಅವರಿಗೆ ಸೇರಿದ ಗುಡಿಸಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ರಕ್ಷಿಸಲು ಸಾಧ್ಯವಾಗದೆ, ಇಡೀ ಆಶ್ರಯ ತಾಣವೇ ಬೂದಿಯಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ₹2 ಲಕ್ಷ 25 ಸಾವಿರ ನಗದು ಹಣ, ಎರಡೂವರೆ ತೊಲೆ ಬಂಗಾರ ಹಾಗೂ 22 ತೊಲೆ ಬೆಳ್ಳಿ ಸೇರಿದಂತೆ ಬೆಲೆಬಾಳುವ ಆಭರಣಗಳು ಸುಟ್ಟು ಹೋಗಿವೆ. ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಮತ್ತು ಒಡವೆಗಳು ಕಣ್ಣೆದುರೇ ನಾಶವಾಗಿರುವುದು ಕುಟುಂಬಕ್ಕೆ ಭರಿಸಲಾರದ ಹೊಡೆತ ನೀಡಿದೆ.
ಕೇವಲ ಹಣ, ಒಡವೆಯಷ್ಟೇ ಅಲ್ಲದೆ, ಸಂಗ್ರಹಿಸಿಡಲಾಗಿದ್ದ 35 ಕ್ವಿಂಟಲ್ ಹತ್ತಿ, 25 ಪ್ಯಾಕೆಟ್ ಬಿತ್ತನೆ ಜೋಳ, ಅಕ್ಕಿ, ಭತ್ತ ಹಾಗೂ ಬಟ್ಟೆ ಸೇರಿದಂತೆ ಗೃಹಬಳಕೆಯ ಸಮಸ್ತ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆಯಿಂದಾಗಿ ಸಂತ್ರಸ್ತ ಕುಟುಂಬಕ್ಕೆ ಒಟ್ಟಾರೆಯಾಗಿ ಸುಮಾರು 10 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದುಕಿಗೆ ಆಧಾರವಾಗಿದ್ದ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ.