ಮರ್ಚೆಡ್ ಡೇಸ್ ಸುದ್ದಿ|ಜೆ. ಮಲ್ಲಾಪುರ.
ರಾಯಚೂರು: ಜೆಗರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜೆ. ಮಲ್ಲಾಪುರ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ: ಕಣ್ಮುಚ್ಚಿ ಕುಳಿತ ಪಿಡಿಒ, ಜನಪ್ರತಿನಿಧಿಗಳು. ಜೆ. ಮಲ್ಲಾಪುರ ಗ್ರಾಮದಲ್ಲಿ ಸಾರ್ವಜನಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಬರಬೇಕಾದ ಅನುದಾನಗಳು ಕಾಗದದಲ್ಲೇ ಉಳಿದಿದ್ದು, ನೆಲಮಟ್ಟದಲ್ಲಿ ಜನಸಾಮಾನ್ಯರು ಮಾತ್ರ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಗ್ರಾಮದಲ್ಲಿ ಕೈಗೆತ್ತಿಕೊಂಡಿದ್ದ ಪೈಪ್ಲೈನ್ ಕಾಮಗಾರಿಯನ್ನು ಅರೆಬರೆಯಾಗಿ ಬಿಡಲಾಗಿದ್ದು, ಗುಂಡಿ ಪೈಪ್ಗಳನ್ನು ಸರಿಯಾಗಿ ಮುಚ್ಚದೆ ತೆರೆದ ಸ್ಥಿತಿಯಲ್ಲೇ ಬಿಡಲಾಗಿದೆ. ಅಂಗನವಾಡಿ ಮಕ್ಕಳು ನಿತ್ಯ ಸಂಚರಿಸುವ ಮಾರ್ಗದಲ್ಲೇ ಈ ಅವಾಂತರ ಸೃಷ್ಟಿಯಾಗಿದ್ದು, ಮಕ್ಕಳು ಆಯತಪ್ಪಿ ಬಿದ್ದು ಗಾಯಗೊಳ್ಳುವ ಭೀತಿ ಎದುರಾಗಿದೆ. ಹಸುಗೂಸುಗಳ ಜೀವಕ್ಕೆ ಕಂಟಕ ಎದುರಾಗಿದ್ದರೂ ಪಂಚಾಯಿತಿ ಆಡಳಿತ ಕನಿಷ್ಠ ದುರಸ್ತಿ ಕಾರ್ಯಕ್ಕೂ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಭಕ್ತಾದಿಗಳು ಮತ್ತು ಊರಿನ ಜನರು ನಿತ್ಯ ಭಕ್ತಿಯಿಂದ ತೆರಳುವ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿಯೇ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಎಲ್ಲೆಂದರಲ್ಲಿ ಹರಿಯುತ್ತಿರುವ ಕೊಳಚೆ ನೀರಿನಿಂದಾಗಿ ರಸ್ತೆಯು ಕೆಸರು ಗದ್ದೆಯಂತಾಗಿದ್ದು, ನೊಣ-ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಪವಿತ್ರ ಸ್ಥಳದ ಮುಂದೆಯೇ ಇಂತಹ ಅಸ್ವಚ್ಛತೆ ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
ಗ್ರಾಮದಲ್ಲಿ ಸ್ವಚ್ಛತೆ, ನೀರು, ರಸ್ತೆ ನಿರ್ವಹಣೆ ಮಾಡಬೇಕಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕೇವಲ ಕಚೇರಿ ಕಡತಗಳಿಗೆ ಸೀಮಿತವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಬೇಕಾದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ಕಾರ್ಯನಿರ್ವಹಿಸುವ ಆಡಳಿತ ಯಂತ್ರವು ಸಾರ್ವಜನಿಕರ ಕೂಗಿಗೆ ಕಿವುಡಾಗಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಚುನಾವಣೆ ಸಂದರ್ಭದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಯ ಭರವಸೆ ನೀಡಿ ಮತ ಪಡೆದ ಗ್ರಾಮ ಪಂಚಾಯತ್ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಗ್ರಾಮದ ಗಲ್ಲಿಗಳಲ್ಲಿ ರಸ್ತೆ ಹಾಳಾಗಿ ಜನ ಸಂಚಾರಕ್ಕೆ ಪರದಾಡುತ್ತಿದ್ದರೂ, ತಮ್ಮ ವಾರ್ಡ್ಗಳ ಸಮಸ್ಯೆಗಳನ್ನು ಪಂಚಾಯಿತಿ ಸಭೆಯಲ್ಲಿ ಧ್ವನಿಸಿ ಪರಿಹಾರ ಕಲ್ಪಿಸುವ ಬದ್ಧತೆ ಜನಪ್ರತಿನಿಧಿಗಳಲ್ಲಿ ಸಂಪೂರ್ಣವಾಗಿ ಮರೆಯಾಗಿದೆ.
ಗ್ರಾಮದ ಪ್ರಮುಖ ಸಮಸ್ಯೆಗಳಾದ ಪೈಪ್ಲೈನ್ ಕಾಮಗಾರಿಯ ಸಮರ್ಪಕ ಮುಚ್ಚುವಿಕೆ ಮತ್ತು ಚರಂಡಿ ನೀರು ಸರಾಗವಾಗಿ ಹರಿಯುವಂತೆ ತಕ್ಷಣವೇ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.