
ಮರ್ಚೆಡ್ ಡೇಸ್ ಸುದ್ದಿ| ರಾಯಚೂರು.
ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ (RIMS) ಬೋಧಕ ಆಸ್ಪತ್ರೆಯಲ್ಲಿ ರೋಗಿಗಳ ಗೋಳು ಹೇಳತೀರದಾಗಿದೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಬಡ ರೋಗಿಗಳು ದೂರದ ಊರುಗಳಿಂದ ಚಿಕಿತ್ಸೆಗಾಗಿ ಧಾವಿಸಿ ಬರುತ್ತಿದ್ದರೂ, ಆಸ್ಪತ್ರೆಯಲ್ಲಿ ನೋಂದಣಿ ಮತ್ತು ಟೋಕನ್ ವಿತರಣೆಗೆ ಇಟ್ಟಿರುವುದು ಕೇವಲ ಎರಡೇ ಕೌಂಟರ್‌ಗಳು! ಇದರಿಂದಾಗಿ ರೋಗಿಗಳು ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚೆ ಕೌಂಟರ್ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾದ ಪರಸ್ಥಿತಿ ಸ್ಥಿತಿ ನಿರ್ಮಾಣವಾಗಿದೆ.
ಮೈಕೈ ನೋವು, ತೀವ್ರ ಜ್ವರ ಮತ್ತು ಅಶಕ್ತತೆಯಿಂದ ಬಳಲುತ್ತಿರುವ ರೋಗಿಗಳು ತಮ್ಮ ಕಾಯಿಲೆಯ ಜೊತೆಗೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಲು ಹೆಣಗಾಡುತ್ತಿದ್ದಾರೆ. “ಮೈಯಲ್ಲಿ ಚೈತನ್ಯವಿದ್ದವರು ಸರದಿಯಲ್ಲಿ ನಿಂತು ಚೀಟಿ ಪಡೆಯಿರಿ, ಇಲ್ಲದಿದ್ದರೆ ಹೊರಗಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಎನ್ನುವ ದುಸ್ಥಿತಿ ಇಲ್ಲಿದೆ. ಜಿಲ್ಲೆಯ ಪ್ರಮುಖ ಆಸ್ಪತ್ರೆಯಲ್ಲೇ ಈ ಗೋಳಾದರೆ ಇನ್ನು ತಾಲೂಕು, ಹೋಬಳಿ ಮತ್ತು ಹಳ್ಳಿಗಳ ಸರ್ಕಾರಿ ಆಸ್ಪತ್ರೆಗಳ ಕಥೆ ಏನು?” ಎಂದು ಚಿಕಿತ್ಸೆಗೆ ಬಂದಿದ್ದ ಮಲ್ಕಾಪುರದ ಹುರುಕುಂದ ಎಂಬ ರೋಗಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ನೂರಾರು ರೋಗಿಗಳು ಬರುವ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯ ನೆಪವೊಡ್ಡಿ ಬೆರಳೆಣಿಕೆಯ ಕೌಂಟರ್‌ಗಳನ್ನು ಮಾತ್ರ ತೆರೆಯಲಾಗಿದೆ. ಇದರಿಂದ ರೋಗಿಗಳು ಕ್ಯೂನಲ್ಲಿ ನಿಲ್ಲಲಾರದೆ ಬೇಸತ್ತು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಇದು ಬಡ ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ತಳ್ಳುವ ವ್ಯವಸ್ಥಿತ ಗಿಮಿಕ್ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಲಾರಂಭಿಸಿದೆ.
ಆಸ್ಪತ್ರೆಯ ಈ ಅವ್ಯವಸ್ಥೆಯ ಕುರಿತು ಸಮಾಜ ಸೇವಕಿ ಅನಿತಾ ನವಲ್‌ಕಲ್ ತೀವ್ರವಾಗಿ ಧ್ವನಿ ಎತ್ತಿದ್ದಾರೆ. “ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಆಶಾಕಿರಣ. ಜನರ ಸಮಯಕ್ಕೂ ಗೌರವ ಸಿಗಬೇಕು. ಪ್ರತಿದಿನ ನೂರಾರು ಜನರು ಬರುವ ಜಾಗದಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇರುವುದು ವ್ಯವಸ್ಥೆಯ ವೈಫಲ್ಯ. ತಕ್ಷಣವೇ ಸಿಬ್ಬಂದಿ ಕೊರತೆ ನೀಗಿಸಿ, ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕು ಹಾಗೂ ಆಸ್ಪತ್ರೆ ಆವರಣದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ರೋಗಿಗಳನ್ನು ಒಂದೇ ಕಡೆ ಜಮಾಯಿಸಿ ಅವಸರವಸರವಾಗಿ ಚಿಕಿತ್ಸೆ ನೀಡುವ ಬದಲು, ಆರಾಮದಾಯಕ ಹಾಗೂ ಶಾಶ್ವತ ವ್ಯವಸ್ಥೆ ರೂಪಿಸಬೇಕಿದೆ. ರಿಮ್ಸ್ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಡಿ ಎಚ್ ಓ) ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಕೌಂಟರ್ ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ರೋಗಿಗಳ ಪರದಾಟದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ನೇರವಾಗಿ ದೂರು ನೀಡುವುದಾಗಿ ಸಾರ್ವಜನಿಕರು ಹಾಗೂ ಸಂಘಟನೆಗಳು ಎಚ್ಚರಿಸಿವೆ.