ಮರ್ಚೆಡ್ ಡೇಸ್ ಸುದ್ದಿ|ಗಂಗಾವತಿ.
ಗಂಗಾವತಿ:ರಾಜ್ಯ ಸರ್ಕಾರದ ಅಧಿಕೃತ ಆದೇಶವನ್ನು ಮೀರಿ ನಗರದಲ್ಲಿ ಆಯೋಜಿಸಲಾಗಿದ್ದ ಅಧಿಕೃತ ಸಭೆಯಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ನ ಪೂರ್ಣ ಚರಣಗಳನ್ನು ಮೊಬೈಲ್ ಮೂಲಕ ನುಡಿಸಿದ ಘಟನೆ ಗಂಗಾವತಿಯಲ್ಲಿ ನಡೆದಿದ್ದು, ಸ್ಥಳೀಯ ಅಧಿಕಾರಿಗಳನ್ನು ತೀವ್ರ ಮುಜುಗರ ಹಾಗೂ ಇಕ್ಕಟ್ಟಿಗೆ ಸಿಲುಕಿಸಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ‘ಪ್ರಥಮ ಪ್ರಜಾಸೇವಾ ಆಂದೋಲನ’ದ ಅಂಗವಾಗಿ ಗಂಗಾವತಿ ನಗರಸಭೆಯಲ್ಲಿ ತಾಲೂಕು ಮಟ್ಟದ ಸಭೆಯನ್ನು ಏರ್ಪಡಿಸಲಾಗಿತ್ತು. ಸರ್ಕಾರದ ಇತ್ತೀಚಿನ ನಡವಳಿಗಳ ಅನ್ವಯ, ಕಾರ್ಯಕ್ರಮದ ಆರಂಭದಲ್ಲಿ ಆಯೋಜಕರು ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಹಾಡಿಸಿದ್ದರು. ಆದರೆ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಧ್ಯಪ್ರವೇಶಿಸಿ, ಗೀತೆಯ ಪೂರ್ಣ ಚರಣಗಳನ್ನು ಹಾಡುವಂತೆ ಸೂಚಿಸಿದರು. ಕೊನೆಗೆ ಸಭೆಯಲ್ಲಿದ್ದ ಮೊಬೈಲ್ ಮೂಲಕ ವಂದೇ ಮಾತರಂ ಗೀತೆಯ ಎಲ್ಲಾ ಚರಣಗಳನ್ನು ನುಡಿಸಲಾಯಿತು. ಈ ವೇಳೆ ಹಾಜರಿದ್ದ ತಹಸೀಲ್ದಾರ್, ಇಒ, ಪೌರಾಯುಕ್ತರು ಹಾಗೂ ಇತರ ಅಧಿಕಾರಿಗಳು ಎದ್ದುನಿಂತು ಗೌರವ ಸಲ್ಲಿಸಿದರಾದರೂ, ಸರ್ಕಾರದ ಸ್ಪಷ್ಟ ಆದೇಶ ಉಲ್ಲಂಘನೆಯಾಗಿರುವುದು ಅಧಿಕಾರಿ ವಲಯದಲ್ಲಿ ಆತಂಕ ಮೂಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಅಧಿಕೃತ ಸುತ್ತೋಲೆಯ (ಆದೇಶ ಸಂಖ್ಯೆ: ಸಿಆಸುಇ/03/HCR/2026) ಪ್ರಕಾರ:
ಮಾನ್ಯ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಭಾಗವಹಿಸುವ ಅತ್ಯುನ್ನತ ಶಿಷ್ಟಾಚಾರದ ಸಮಾರಂಭಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸ್ಪಷ್ಟವಾಗಿ ಆದೇಶಿಸಲಾಗಿದೆ.
ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಜನಪ್ರತಿನಿಧಿಗಳ ಒತ್ತಡದಿಂದಾಗಿ ನಿಯಮ ಉಲ್ಲಂಘನೆಯಾಗಿದ್ದು, ಈ ವಿಚಾರವೀಗ ಆಡಳಿತ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.